ಬೆಂಗಳೂರು;
ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿ ನವೆಂಬರ್ 3 ರಂದು ನಡೆಯಲಿರುವ ಲೋಕಸಭಾ ಉಪಚುನಾವಣೆಯನ್ನು ಎದುರಿಸಲಿವೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ತಿಳಿಸಿದರು
ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ದೇವೇಗೌಡ ಅವರು ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಐದು ಕ್ಷೇತ್ರಗಳಲ್ಲಿ ಲೋಕಸಭಾ ಉಪಚುನಾವಣೆ ನಡೆಯಲಿದ್ದು, ಈ ಚುನಾವಣೆಗಳಲ್ಲಿ ನಾವು ಶತಾಯ-ಗತಾಯ ಗೆಲ್ಲಲೇ ಬೇಕಾಗಿದೆ. ಹಳೆಯದನ್ನೆಲ್ಲಾ ಮರೆತು ನಾನು ಮತ್ತು ಸಿದ್ದರಾಮಯ್ಯ ಈಗ ಒಂದಾಗಿದ್ದೇವೆ. ಆದರೆ, ಸ್ಥಳೀಯ ಮುಖಂಡರಲ್ಲಿ ಇನ್ನೂ ಮುನಿಸಿದೆ. 12 ವರ್ಷಗಳ ಬಳಿಕ ನಾನು ಮತ್ತು ಸಿದ್ದøರಾಮಯ್ಯ ಜಂಟಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇವೆ ನಾವು ಎಷ್ಟೇ ದೂರವಾಗಿದ್ದರೂ ಕೂಡಾ ಈಗ ನಾವೆಲ್ಲಾ ಒಂದಾಗಿದ್ದೇವೆ. ಹಿಂದೆ ನಾವು ಮಾಡಿದ ತಪ್ಪನ್ನು ಕ್ಷಮಿಸಿ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ ಅವರು, ಈ ಚುನಾವಣೆಯಲ್ಲಿ ಒಂದುಗೂಡಿ ಹೋರಾಟ ಮಾಡಬೇಕಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ನವೆಂಬರ್ 3 ರಂದು ನಡೆಯಲಿರುವ ಲೋಕಸಭಾ ಉಪಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಮೈತ್ರಿ ಉದ್ದೇಶವನ್ನು ದೇವೇಗೌಡರು ತಿಳಿಸಿದ್ದಾರೆ. ಕೋಮುವಾದಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿಯಾಗಿದ್ದು, ಜೆಡಿಎಸ್ ಸ್ಪರ್ಧಿಸಲಿರುವ ಮೂರು ಕಡೆಗಳಲ್ಲಿ ಕಾಂಗ್ರೆಸ್ ಬೆಂಬಲಿಸಲಿದೆ. ಹಾಗೆಯೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಜೆಡಿಎಸ್ ಬೆಂಬಲಿಸಲಿದೆ. ಈ ಚುನಾವಣೆಯಲ್ಲಿ ಗೆಲ್ಲಲೇಬೇಕಾಗಿದ್ದು, ಈ ಗೆಲುವು ಮುಂಬರುವ 2019 ರ ಲೋಕಸಭಾ ಚುನಾವಣೆಗೆ ಅಡಿಪಾಯವಾಗಲಿದೆ.
ಜಾತ್ಯಾತೀತ ಮತಗಳು ವಿಭಜನೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಈ ಎರಡೂ ಪಕ್ಷಗಳು ಒಗ್ಗೂಡಿದ್ದು, ಅಗತ್ಯ ಬಿದ್ದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಜಂಟಿಯಾಗಿ ಪ್ರಚಾರ ಮಾಡಲಿದ್ದಾರೆ. ಅಗತ್ಯ ಬಿದ್ದರೆ, ರಾಮನಗರ ಕ್ಷೇತ್ರದಲ್ಲಿ ನಾನೂ ಕೂಡಾ ಪ್ರಚಾರ ಮಾಡುತ್ತೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
