ದಾವಣಗೆರೆ:
ಮಾ.21ರಿಂದ ಏಪ್ರಿಲ್ 4ರ ವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಕಲ ಸಿದ್ಧತೆ ನಡೆಸಿದೆ.
ಜಿಲ್ಲೆಯಲ್ಲಿ ಪಾರದರ್ಶಕ ಹಾಗೂ ಶಾಂತಿಯುತ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ವ ಸನ್ನಧವಾಗಿದ್ದು, ಸುಗಮ ಪರೀಕ್ಷೆ ನಡೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಟ್ಟು 92 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದರ ಜೊತೆಗೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷೆ ನಡೆಸಲು ಗುರುತಿಸಿರುವ ಎಲ್ಲಾ 92 ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮೇರಾ ಅಳವಡಿಸಲಾಗಿದ್ದು, ಎಲ್ಲಾ ಕೇಂದ್ರಗಳಿಗೂ 92 ಅಧೀಕ್ಷಕರು, 13 ಉಪ ಅಧೀಕ್ಷಕರನ್ನು ನೇಮಿಸಲಾಗಿದೆ. 92 ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನಿಕ ಜಾಗೃತ ದಳ ನೇಮಿಸಲಾಗಿದೆ.
ಈ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಹ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಈ ಬಾರಿ ಆನ್‍ಲೈನ್‍ನಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರದ ವ್ಯವಸ್ಥೆಯನ್ನು ಇಲಾಖೆ ಕಲ್ಪಿಸಿದೆ. ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಅಗತ್ಯವಾದ ಪೀಠೋಪಕರಣಗಳು, ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 486 ಪ್ರೌಢಶಾಲೆಗಳಿದ್ದು, ಈ ಬಾರಿ 12,407 ಬಾಲಕ ಹಾಗೂ 12,515 ಬಾಲಕಿಯರು ಸೇರಿ ಒಟ್ಟು 24,922 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
ದೂರದ ಊರುಗಳಿಂದ ಪರೀಕ್ಷೆ ಬರೆಯಲು ಬರುವಂತ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
