ನಾಳೆ ಲೋಕಸಭಾ ಕ್ಷೇತ್ರದ ಮತ ಎಣಿಕೆ: ಸಕಲ ಸಿದ್ಧತೆ:ಡಾ: ರಾಕೇಶ್ ಕುಮಾರ್.

ತುಮಕೂರು

    ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮೇ 23ರಂದು ಬೆಳಿಗ್ಗೆ 8 ಗಂಟೆಗೆ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯ ನಡೆಸಲು ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ತಿಳಿಸಿದರು.

     ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮತ ಎಣಿಕೆ ಕಾರ್ಯವನ್ನು ಅಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭಿಸಲಾಗುವುದು. ಇದಕ್ಕೂ ಮುನ್ನ 7.30 ಗಂಟೆಗೆ ಚುನಾವಣೆ ವೀಕ್ಷಕರು ಹಾಗೂ ರಾಜಕೀಯ ಪಕ್ಷಗಳ ಏಜೆಂಟರ ಸಮಕ್ಷಮದಲ್ಲಿ ಮತ ಯಂತ್ರಗಳನ್ನು ಇರಿಸಿರುವ ಭದ್ರತಾ ಕೊಠಡಿಯನ್ನು ತೆರೆಯಲಾಗುವುದು ಎಂದರಲ್ಲದೆ, ತುಮಕೂರು ಲೋಕಸಭಾ ಕ್ಷೇತ್ರಕ್ಕೊಳಪಡುವ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಮಧುಗಿರಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತ ಎಣಿಕೆಯನ್ನು ವಿಜ್ಞಾನ ಕಾಲೇಜಿನಲ್ಲಿ ಹಾಗೂ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ ಮತ್ತು ಗುಬ್ಬಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತ ಎಣಿಕೆಯನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

      ಮತ ಎಣಿಕೆಗಾಗಿ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ 13 ಟೇಬಲ್ ಹಾಗೂ ಉಳಿದಂತೆ 7 ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ ತಲಾ 14 ಟೇಬಲ್‍ಗಳಂತೆ ಒಟ್ಟು 111 ಟೇಬಲ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ(262 ಮತಗಟ್ಟೆ), ತುಮಕೂರು ನಗರ(254 ಮತಗಟ್ಟೆ), ಹಾಗೂ ಕೊರಟಗೆರೆ(242 ಮತಗಟ್ಟೆ) ಕ್ಷೇತ್ರದ ಮತ ಎಣಿಕೆಯನ್ನು 19 ಸುತ್ತಿನಲ್ಲಿ, ಮಧುಗಿರಿ(248 ಮತಗಟ್ಟೆ)ಕ್ಷೇತ್ರದ ಎಣಿಕೆಯನ್ನು 18 ಸುತ್ತಿನಲ್ಲಿ, ತಿಪಟೂರು(233 ಮತಗಟ್ಟೆ), ತುರುವೇಕೆರೆ (229 ಮತಗಟ್ಟೆ) ಹಾಗೂ ತುಮಕೂರು ಗ್ರಾಮಾಂತರ (226 ಮತಗಟ್ಟೆ) ಮತ ಎಣಿಕೆಯನ್ನು 17 ಸುತ್ತಿನಲ್ಲಿ, ಗುಬ್ಬಿ(213 ಮತಗಟ್ಟೆ) ಕ್ಷೇತ್ರದ ಎಣಿಕೆಯನ್ನು 16 ಸುತ್ತಿನಲ್ಲಿ ನಡೆಸಲಾಗುವುದು. ಪ್ರತಿ ಟೇಬಲ್‍ಗೆ ಒಬ್ಬ ಎಣಿಕೆ ಸೂಪರ್‍ವೈಸರ್, ಒಬ್ಬ ಎಣಿಕೆ ಸಹಾಯಕ ಹಾಗೂ ಮೈಕ್ರೋ ಅಬ್ಸರ್ವರ್‍ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಅಂಚೆ ಮತ ಪತ್ರ ಎಣಿಕೆ :-

      ಸೇವೆಯಲ್ಲಿರುವವರ ಮತ ಪತ್ರ ಹಾಗೂ ಅಂಚೆ ಮತ ಪತ್ರಗಳ ಎಣಿಕೆಯನ್ನು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ.

       ಇಟಿಪಿಬಿಎಸ್‍ಗಾಗಿ 2 ಟೇಬಲ್, ಅಂಚೆ ಮತ ಪತ್ರಗಳ ಮತ ಎಣಿಕೆಗಾಗಿ 4 ಟೇಬಲ್‍ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಟೇಬಲ್‍ಗೆ ಒಬ್ಬರು ಸೂಪರ್‍ವೈಸರ್ ಹಾಗೂ ಇಬ್ಬರು ಸಹಾಯಕರನ್ನು ನೇಮಕ ಮಾಡಲಾಗಿದೆ. ಒಟ್ಟು 545 ಸೇನೆಯಲ್ಲಿರುವ ಮತದಾರರಿಗೆ ಇಟಿಪಿಬಿಎಸ್ ಮತ ಪತ್ರವನ್ನು ವಿತರಿಸಲಾಗಿದ್ದು, ಈವರೆಗೆ 310 ಇಟಿಪಿಬಿಎಸ್ ಮತ ಪತ್ರವನ್ನು ಸ್ವೀಕರಿಸಲಾಗಿದೆ.

      ಅದೇ ರೀತಿ 5500 ಅಂಚೆ ಮತ ಪತ್ರವನ್ನು ವಿತರಿಸಲಾಗಿದ್ದು, ಈವರೆಗೆ 3500 ಅಂಚೆ ಮತ ಪತ್ರವನ್ನು ಸ್ವೀಕರಿಸಲಾಗಿದೆ. ಅಂಚೆ ಮತ ಪತ್ರ ಸ್ವೀಕರಿಸಲು ಮೇ 23ರ ಬೆಳಿಗ್ಗೆ 7.59 ಗಂಟೆಯವರೆಗೂ ಅವಕಾಶವಿದೆ ಎಂದು ತಿಳಿಸಿದರು.

ವೀಕ್ಷಕರ ನೇಮಕ :-

      ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ವೀಕ್ಷಣೆಗಾಗಿ 4 ಮಂದಿ ವೀಕ್ಷಕರನ್ನು ನಿಯೋಜಿಸಲಾಗಿದ್ದು, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ಕ್ಷೇತ್ರಗಳಿಗೆ ಹೇಮಂತಕುಮಾರ್ ಪಧಿ, ತುರುವೇಕೆರೆ ಹಾಗೂ ತುಮಕೂರು ನಗರ ಕ್ಷೇತ್ರಕ್ಕೆ ರೀನಾಸಿಂಗ್, ತುಮಕೂರು ಗ್ರಾಮಾಂತರ ಹಾಗೂ ಕೊರಟಗೆರೆ ಕ್ಷೇತ್ರಕ್ಕೆ ಬನ್ಷ್ ಬಹಾದೂರ್ ವರ್ಮ, ಗುಬ್ಬಿ ಹಾಗೂ ಮಧುಗಿರಿ ಕ್ಷೇತ್ರಕ್ಕೆ ಶೀಲ್‍ಧರ್ ಸಿಂಗ್ ಯಾದವ್ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ ಎಂದರು.

     ಎನ್‍ಐಸಿ ಸಾಫ್ಟ್‍ವೇರ್ ಮತ್ತು ಸುವಿಧ ಸಾಫ್ಟ್‍ವೇರ್‍ನಲ್ಲಿ ಮತದಾನದ ಅಂಕಿ-ಅಂಶಗಳನ್ನು ಎಂಟ್ರಿ ಮಾಡಿ ಅಪ್‍ಲೋಡ್ ಮಾಡಲಾಗುವುದು. ಪ್ರತಿ ರೌಂಡ್‍ನ ಪ್ರಗತಿಯನ್ನು ಮೈಕ್ ಮೂಲಕ ಪ್ರಕಟಿಸಲು ಕ್ರಮವಹಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮಾಹಿತಿಯನ್ನು ಸುವಿಧ ಸಾಫ್ಟ್‍ವೇರ್‍ನಲ್ಲಿ ಅಪ್ ಲೋಡ್ ಮಾಡಿದ ನಂತರ ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

       ಮತ ಎಣಿಕೆಗಾಗಿ ಆಗಮಿಸಲಿರುವ ಮತ ಎಣಿಕೆ ಏಜೆಂಟರ್‍ಗಳಿಗೆ ಪಾಸ್‍ಗಳನ್ನು ಈಗಾಗಲೇ ವಿತರಿಸಲಾಗಿದ್ದು, ಪಾಸ್‍ಗಳನ್ನು ತಂದವರಿಗೆ ಮಾತ್ರ ನಿಗಧಿತ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಟೇಬಲ್‍ಗಳಿಗೆ ಪ್ರವೇಶ ನೀಡಲಾಗುವುದು. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳಿಗೆ ಎಣಿಕಾ ಕೇಂದ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು.

     ಮತ ಎಣಿಕಾ ಕೇಂದ್ರಕ್ಕೆ ಎಣಿಕೆ ಏಜೆಂಟರುಗಳು ಮೊಬೈಲ್, ಕ್ಯಾಮೆರಾ, ಕ್ಯಾಲಿಕ್ಯುಲೇಟರ್, ಸಿಗರೇಟ್, ಬೀಡಿ, ಮದ್ಯ, ನೀರು, ನೀರಿನ ಬಾಟಲ್, ಇಂಕ್‍ಪೆನ್, ತಂಬಾಕು ವಸ್ತುಗಳು, ಯಾವುದೇ ರೀತಿಯ ಆಯುಧಗಳನ್ನು ಮತ ಎಣಿಕಾ ಕೇಂದ್ರದೊಳಗೆ ತರುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಮೇ 23ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ತುಮಕೂರಿನಲ್ಲಿ ಮದ್ಯ ಮಾರಾಟ ನಿಷೇಧಗೊಳಿಸಲಾಗಿದೆ ಎಂದು ತಿಳಿಸಿದರು.

       ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ: ಶೋಭಾರಾಣಿ ಮಾತನಾಡಿ, ಮತ ಎಣಿಕಾ ಕಾರ್ಯವನ್ನು ಶಾಂತಿಯುತವಾಗಿ ನಡೆಸಲು ಅನುಕೂಲವಾಗುವಂತೆ 7 ಡಿಎಸ್‍ಪಿ, 12 ಸಿಪಿಐ, 28 ಪಿಎಸ್‍ಐ, 47 ಎಎಸ್‍ಐ, 174 ಹೆಚ್‍ಸಿ/ಟಿಸಿ, 37 ಡಬ್ಲ್ಯೂಪಿಸಿ ಸಿಬ್ಬಂದಿಗಳನ್ನು ಹಾಗೂ 6 ಕೆಎಸ್‍ಆರ್‍ಪಿ(210 ಮಂದಿ) ತುಕಡಿ, 1 ಬಿ.ಎಸ್.ಎಫ್(100 ಮಂದಿ), 1 ಸಿಎಪಿಎಫ್ (50 ಮಂದಿ) ಸೇರಿದಂತೆ 600 ಅರೆ ಸೇನಾ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

        ಬೆಂಗಳೂರು ಕಡೆ ಹೋಗುವ ಭಾರಿ ವಾಹನಗಳ ಸಂಚಾರವನ್ನು ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದಿಂದ ಕೋತಿತೋಪು, ಹನುಮಂತಪುರ ಮಾರ್ಗ ಹಾಗೂ ಒಳ ಬರಲು ಹನುಮಂತಪುರ, ಕೋತಿತೋಪು ಮೂಲಕ ಸಂಚರಿಸಲು ಮಾರ್ಗ ಬದಲಾವಣೆ ವ್ಯವಸ್ಥೆ ಮಾಡಲಾಗಿದೆ. ಲಘು ವಾಹನಗಳು ಎಸ್.ಐ.ಟಿ., ಗಂಗೋತ್ರಿ ನಗರ, ಎಸ್.ಎಸ್.ಪುರಂ, ಭದ್ರಮ್ಮ ವೃತ್ತದಿಂದ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಹಾಗೂ ಬಿ.ಹೆಚ್.ರಸ್ತೆಯ 9ನೇ ಕ್ರಾಸ್‍ನಿಂದ ಶಿವಕುಮಾರ ಸ್ವಾಮೀಜಿ ಸರ್ಕಲ್‍ವರೆಗೂ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದು ಅವರು ತಿಳಿಸಿದರು.

ಮಾಧ್ಯಮ ಕೇಂದ್ರ :-

        ಮಾಧ್ಯಮ ಪ್ರತಿನಿಧಿಗಳ ಅನುಕೂಲಕ್ಕಾಗಿ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ಮಾಧ್ಯಮ ಕೇಂದ್ರ ತೆರೆಯಲಾಗುವುದು. ಮತ ಎಣಿಕಾ ಫಲಿತಾಂಶವನ್ನು ವೀಕ್ಷಿಸಲು ಡಿಸ್‍ಪ್ಲೇ ಪರದೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಸುತ್ತಿನ ಎಣಿಕೆ ಮಾಹಿತಿಯನ್ನು ಪ್ರದರ್ಶಿಸ ಲಾಗುವುದು . ಅಂದು ಮಧ್ಯಾಹ್ನ 12 ಗಂಟೆ ಚುನಾವಣಾ ಫಲಿತಾಂಶ ನಿರೀಕ್ಷಿಸಲಾಗಿದ್ದು, ಸಂಜೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಚುನಾವಣಾ ತಹಶೀಲ್ದಾರ್ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap