ತುಮಕೂರು

ಧಾರ್ಮಿಕ ದತ್ತಿ ಇಲಾಖೆ, ಲೋಕೋಪಯೋಗಿ ಇಲಾಖೆ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಕ್ಷೇತ್ರ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಕುಣಿಗಲ್ ತಾಲ್ಲೂಕಿನ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೆಳಿಗ್ಗೆ 9 ಗಂಟೆಗೆ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಲ್ಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಸಮಾರಂಭದ ಸಿದ್ಧತೆಯನ್ನು ವೀಕ್ಷಿಸಿ ಮಾತನಾಡಿದ ತುಮಕೂರು ಉಪ ವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಕಾರ್ಯ ನಿರ್ವಾಹಣಾ ಧಿಕಾರಿ ಸಿ.ಎಲ್ ಶಿವಕುಮಾರ್ ಅವರು, ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯದ ನವೀಕರಣ ಕಾಮಗಾರಿ ಹಂತ 2 ರಡಿ ಪೂರ್ಣಗೊಂಡಿರುವ ದೇವಾಲಯ ಪ್ರವೇಶ ಪ್ರಾಂಗಣ, ನಡು ಪ್ರಾಂಗಣ ಹಾಗೂ ಸಿದ್ಧಲಿಂಗೇಶ್ವರ ಸ್ವಾಮಿಯ ಪವಾಡ ದೃಶ್ಯಗಳನ್ನೊಳಗೊಂಡ ಪ್ರದಕ್ಷಿಣೆ ಪ್ರಾಂಗಣ ಸೇರಿದಂತೆ ಒಟ್ಟು 10 ಕೋಟಿ ವೆಚ್ಚದ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಶ್ರೀ ಸಿದ್ದಲಿಂಗೇಶ್ವರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ 40 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ಸುಮಾರು 200ಕ್ಕೂ ಹೆಚ್ಚು ಭಕ್ತಾಧಿಗಳು ತಂಗುವ ಸುಸಜ್ಜಿತ ಡಾರ್ಮಿಟರಿ, 6 ವಿಐಪಿ ಕೊಠಡಿ, ಆಡಳಿತ ಕಚೇರಿ, ಮಂಡೇಸೇವಾಭವನ ಹೀಗೆ ವಿವಿಧ ಸೌಕರ್ಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ದೇವಾಲಯದ ಇತಿಹಾಸ ಮತ್ತು ಪರಂಪರೆ ಉಳಿಸಿ ಅಭಿವೃದ್ದಿ ಪಡಿಸಲು ಪುರಾತತ್ವ ಇಲಾಖೆಯ ನೇತೃತ್ವದಲ್ಲಿ ಮೂಲ ಪರಂಪರೆಗೆ ಧಕ್ಕೆ ಬಾರದಂತೆ ಪ್ರಾಂಗಣವನ್ನು ನಿರ್ಮಾಣ ಮಾಡಬೇಕಾಗಿದ್ದರಿಂದ ಸ್ವಲ್ಪ ತಡವಾಯಿತು ಎಂದು ಅವರು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ ಸೇರಿದಂತೆ ಜಿಲ್ಲೆಯ ಶಾಸಕರು, ಸಂಸದರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಬಾಳೆಹೊನ್ನೂರು ಶಾಖಾಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಡಂಬಳ- ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಮ.ನಿ. ಜಗದ್ಗುರು ಡಾ|| ತೋಟದ ಸಿದ್ಧರಾಮ ಮಹಾಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎರಡುವರೆ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಇವರು ಸಹ ಸ್ಥಳಕ್ಕೆ ಬೇಟಿ ನೀಡಿ ಕಾರ್ಯಕ್ರಮದ ಅಂತಿಮ ಸಿದ್ಧತೆಯನ್ನು ವೀಕ್ಷಿಸಿದರು.
