ದಾವಣಗೆರೆ
ನಗರದ ಹೈಸ್ಕೂಲ್ ಮೈದಾನದಲ್ಲಿ 2ನೇ ವರ್ಷ ಪ್ರತಿಷ್ಠಾಪಿಸಿರುವ ಹಿಂದು ಮಹಾ ಗಣಪತಿ ಮೂರ್ತಿಯ ವಿಸರ್ಜನೆಯ ಬೃಹತ್ ಶೋಭಯಾತ್ರೆ ಇಂದು ನಡೆಯಲಿದ್ದು, ವಿವಿಧ ಮಠಾಧೀಶರು, ರಾಜಕೀಯ ಪಕ್ಷಗಳ ಮುಖಂಡರು, ಸಮಾಜಗಳ ಮುಖಂಡರ ಸಮ್ಮುಖದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಇಂದು ಬೆಳಗ್ಗೆ 9.30 ಗಂಟೆಗೆ ಗಣೇಶ ವಿಸರ್ಜನೆ ಶೋಭಯಾತ್ರೆ ಹೈಸ್ಕೂಲ್ ಮೈದಾನದಿಂದ ಚಾಲನೆ ದೊರೆಯಲಿದೆ.
ಈ ಶೋಭಯಾತ್ರೆಯು ಎವಿಕೆ ಕಾಲೇಜ್ ರಸ್ತೆ, ಚೇತನ ಹೊಟೆಲ್, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಕುವೆಂಪು ರಸ್ತೆ, ಪಿ.ಬಿ.ರಸ್ತೆ, ಗಾಂಧಿ ವೃತ್ತ, ಪಾಲಿಕೆ ಮುಂಭಾಗ, ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ನಂತರ ಬಾತಿ ಕರೆಗೆ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ.
ಶೋಭಯಾತ್ರೆಯ ಹಿನ್ನೆಲೆಯಲ್ಲಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಬರುವ ಪ್ರಮುಖ ವೃತ್ತಗಳು, ರಸ್ತೆಗಳು ಕೇಸರಿ ಬಾವುಟ, ಬಟ್ಟೆಗಳಿಂದ ಅಲಂಕರಿಸಲಾಗಿದೆ. ಅಲ್ಲದೇ, ಮಾರ್ಗದ ಉದ್ದಕ್ಕೂ ಶೋಭಯಾತ್ರೆಯಲ್ಲಿ ಭಾಗವಹಿಸಲಿರುವ ಭಕ್ತಾದಿಗಳಿಗೆ ಶುಭ ಕೋರುವ ಫ್ಲೆಕ್ಸ್‍ಗಳನ್ನು ಅಳವಡಿಸಿರುವುದು ವಿಶೇಷವಾಗಿದೆ.
ಈ ಬಾರಿ ಸುಮಾರು ಐದು ಲಕ್ಷ ಜನ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆಂಬುದಾಗಿ ನಿರೀಕ್ಷಿಸಲಾಗಿದ್ದು, ಸಮಿತಿಯಿಂದ 200 ಮಂದಿ ಸ್ವಯಂ ಸೇವಕರು ಕಾರ್ಯ ನಿರ್ವಹಿಸಲಿದ್ದಾರೆ. ಶೋಭಾಯಾತ್ರೆಯಲ್ಲಿ ಡಿ.ಜೆ, ವಿಶೇಷವಾಗಿ ಜಾನಪದ ಕಲಾ ತಂಡಗಳು, ಸಮಾಳ, ಡೊಳ್ಳು, ನಂದಿಕೋಲು, ವೇಷಧಾರಿಗಳು ಸೇರಿದಂತೆ ಸಾಕಷ್ಟು ಕಲಾ ಮತ್ತು ಜಾನಪದ ತಂಡ ಭಾಗವಹಿಸವಿದೆ. ಈ ಬಾರಿ ವಿಶೇಷವಾಗಿ ಮಹಿಳೆಯರಿಗಾಗಿಯೇ ಡಿಜೆ ಸೆಟ್ ವ್ಯವಸ್ಥೆ ಮಾಡಲಾಗಿದೆ. ಛತ್ರಪತಿ ಶಿವಾಜಿ, ಕನಕ ದಾಸರು, ಬಸವಣ್ಣ, ಮಹಾವೀರ, ಅಂಬೇಡ್ಕರ್ ಸೇರಿದಂತೆ ಎಲ್ಲಾ ಧರ್ಮ ಗುರುಗಳು, ದಾರ್ಶನಿಕರ ಭಾವಚಿತ್ರಗಳು ಮೆರವಣಿಗೆಗೆ ಕಳೆ ತುಂಬಲಿವೆ.
ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ ಹಿಂದೂ ಮಹಾಗಣಪತಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಜೊಳ್ಳೆ ಗುರು, ಯುವ ಮುಖಂಡ ಬಿ.ಜೆ.ಅಜಯಕುಮಾರ್, ಡಿ.ಕೆ. ಕುಮಾರ, ಭರತ್, ಶರತ್, ದೀಪಕ್, ನಾಗೇಂದ್ರ ರೆಡ್ಡಿ, ಶಶಾಂಕ, ಚಂದ್ರಣ್ಣ, ಚುಕ್ಕಿ ಮಂಜಣ್ಣ, ಕೃಷ್ಣಾ ನಾಯಕ್, ಮುರುಳಿ, ನಂದೀಶ್, ಶ್ರೀಧರ್ ಪ್ರಸಾದ ಮತ್ತಿತರರು ಮನವಿ ಮಾಡಿದ್ದಾರೆ.
ಸೂಕ್ತ ಬಂದೋಬಸ್ತ್:
ಹಿಂದೂ ಮಹಾಗಣಪತಿಯ ಮೆರವಣಿಗೆಗೆ ಸೂಕ್ತ ಬಂದೋ ಬಸ್ತ್ ಕಲ್ಪಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.ಬಂದೋಬಸ್ತ್‍ಗೆ ನಾಲ್ವರು ಡಿಎಸ್‍ಪಿ, 12 ಸಿಪಿಐ, 30 ಪಿಎಸ್‍ಐ, 623 ಮಂದಿ ಮುಖ್ಯ ಪೇದೆ ಹಾಗೂ ಪೇದೆಗಳು, 318 ಹೋಂ ಗಾಡ್ರ್ಸ್, 3 ಕೆಎಸ್‍ಆರ್‍ಪಿತುಕಡಿ, 4 ಶಸಸ್ತ್ರ ಮೀಸಲು ಪಡೆಗಳನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ