ಪಾಲಿಕೆಯಲ್ಲಿ ಎಲ್ಲರ ಚಿತ್ತ ಈಗ ಮೀಸಲಾತಿಯತ್ತ..!

ತುಮಕೂರು
      ತುಮಕೂರು ಮಹಾನಗರ ಪಾಲಿಕೆಯಲ್ಲಿ ಇದೀಗ ಎಲ್ಲ 35 ಚುನಾಯಿತ ಸದಸ್ಯರುಗಳ ಚಿತ್ತ ಮುಂದಿನ ಮೇಯರ್-ಉಪಮೇಯರ್ ಚುನಾವಣೆಯ ಮೀಸಲಾತಿಯತ್ತ ಕೇಂದ್ರೀಕೃತವಾಗಿದೆ. ಈಗಷ್ಟೇ ಅಧ್ಯಯನ ಪ್ರವಾಸ ಮುಗಿಸಿ ಬಂದ ಖುಷಿಯ ಬೆನ್ನಲ್ಲೇ ಎಲ್ಲರೂ ಮೀಸಲಾತಿ ಯಾವುದಾಗಬಹುದೆಂಬ ಬಗ್ಗೆ ಹಾಗೂ ರಾಜಕೀಯ ಹೊಂದಾಣಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳಲಾರಂಭಿಸಿದ್ದಾರೆ. 
     ಹಾಲಿ ಪಾಲಿಕೆಯಲ್ಲಿ ಕಾಂಗ್ರೆಸ್‍ನ 10, ಜೆಡಿಎಸ್‍ನ 10, ಬಿಜೆಪಿಯ 12 ಮತ್ತು ಪಕ್ಷೇತರರಾದ 3 ಸದಸ್ಯರುಗಳಿದ್ದಾರೆ. ಈಗ ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಂಡಿವೆ. ಜೆಡಿಎಸ್‍ನ ಲಲಿತಾ ರವೀಶ್ ಮೇಯರ್ ಆಗಿದ್ದು, ಕಾಂಗ್ರೆಸ್‍ನ ರೂಪಶ್ರೀ ಉಪಮೇಯರ್ ಆಗಿದ್ದಾರೆ. ಇವರಿಬ್ಬರ ಹಾಗೂ ಇತರ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ-ಸದಸ್ಯರ ಒಂದು ವರ್ಷದ ಅಧಿಕಾರಾವಧಿ ಬರುವ ಜನವರಿ 30 ರಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಮಹಾನಗರ ಪಾಲಿಕೆಯಲ್ಲಿ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಆಗುವ ಮೀಸಲಾತಿ ಕುರಿತು ಚರ್ಚೆಗಳು ನಡೆಯತೊಡಗಿವೆ.
     ಈ ಮಾಸಾಂತ್ಯದೊಳಗೆ ಸರ್ಕಾರದ ಮಟ್ಟದಲ್ಲಿ ಮೀಸಲಾತಿ ನಿರ್ಧಾರವಾಗಿ, ಚುನಾವಣಾ ಕ್ಯಾಲೆಂಡರ್ ಪ್ರಕಟಿಸಬೇಕಾಗುತ್ತದೆ. ದಿನಗಳು ಹತ್ತಿರವಿರುವುದರಿಂದ ಈಗ ಎಲ್ಲರೂ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದೆ. ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ತುಮಕೂರು ನಗರದ ಶಾಸಕರು ಮತ್ತು ಲೋಕಸಭಾ ಸದಸ್ಯರು ಬಿಜೆಪಿಯವರೇ ಆಗಿದ್ದಾರೆ. ಮೇಯರ್-ಉಪಮೇಯರ್ ಹುದ್ದೆಗಳ ಮೀಸಲಾತಿ ವಿಷಯದಲ್ಲಿ ಇವರು ಸಹಜವಾಗಿ ಸರ್ಕಾರಕ್ಕೆ ಪ್ರಭಾವ ಬೀರಬಹುದು. ಇನ್ನು ಈಗ ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಇದೆ. ಆದರೆ ಮುಂದೆ ಇದೇ ಮೈತ್ರಿ ಇರಲಿದೆಯೇ? ಅಥವಾ ಕಾಂಗ್ರೆಸ್ಸನ್ನು ದೂರವಿಟ್ಟು ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆಯೇ? ಎಂಬುದು ಈಗ ಎಲ್ಲರೂ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ.
    ಇನ್ನೊಂದು ಬೆಳವಣಿಗೆಯಲ್ಲಿ ಮುಂಬರುವ ಜಿ.ಪಂ. ಚುನಾವಣೆಯೂ ಪಾಲಿಕೆ ಚುನಾವಣೆ ಜೊತೆ ತಳಕು ಹಾಕಿಕೊಳ್ಳುತ್ತಿದೆ. ಬೆಳಗುಂಬ ಜಿ.ಪಂ. ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಲಭಿಸಬಹುದೆಂಬ ಸಂಗತಿಯೂ ಪಾಲಿಕೆಯ ಮುಂದಿನ ಮೇಯರ್ ಚುನಾವಣೆಯಲ್ಲಿ ಪಕ್ಷಗಳ ಹೊಂದಾಣಿಕೆ ವಿಷಯದಲ್ಲಿ ಪರಿಣಾಮ ಬೀರಲಿದೆಯೆಂಬ ಗುಸುಗುಸು ಹಬ್ಬಿದೆ. 
     ಕಾಂಗ್ರೆಸ್ ಪಕ್ಷದ ಸೈಯದ್ ನಯಾಜ್ (9 ನೇ ವಾರ್ಡ್) ಮೇಯರ್ ಆಗಬೇಕೆಂಬ ಭಾರಿ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಸತತ ಮೂರು ಬಾರಿ ಗೆದ್ದುಬಂದಿರುವ ಇವರು, ಸತತವಾಗಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ದಾಖಲೆ ಮಾಡಿದ್ದಾರೆ. ಈಗಲೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಒಂದು ಅವಧಿಗೆ ಮೇಯರ್ ಆಗಲೇಬೇಕೆಂದು ಟೊಂಕಕಟ್ಟಿ ನಿಂತಿದ್ದಾರೆ.
     ಇನ್ನು ಕಾಂಗ್ರೆಸ್‍ನ ಉತ್ಸಾಹಿ ಯುವಸದಸ್ಯ ಜೆ.ಕುಮಾರ್ (7 ನೇ ವಾರ್ಡ್) ಸಹ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದು, ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಕಾಂಗ್ರೆಸ್‍ನ ಇನಾಯತ್ ಉಲ್ಲಾಖಾನ್ (16ನೇ ವಾರ್ಡ್) ಸಹ ತಾವೂ ಏಕಾಗಬಾರದು ಎಂಬ ನಿರೀಕ್ಷೆಯಲ್ಲಿದ್ದಾರೆಂಬುದು ಈಗ ಪಾಲಿಕೆಯ ತುಂಬ ಹರಡಿಕೊಂಡಿರುವ ಸಂಗತಿ. ಆದರೆ ಎಲ್ಲವೂ ಮುಂದಿನ ಮೀಸಲಾತಿ ಮತ್ತು ಪಕ್ಷಗಳ ಹೊಂದಾಣಿಕೆ ಮೇಲೆ ಅವಲಂಬಿತವಾಗಿದೆಯೆಂಬುದನ್ನು ತಳ್ಳಿಹಾಕಲಾಗದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link