ಗುಬ್ಬಿ
ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಹಲವು ಕಡೆಗಳಲ್ಲಿ ರಾಗಿ, ಭತ್ತ, ಜೋಳ, ತರಕಾರಿ ಸೇರಿದಂತೆ ರೈತರ ಬೆಳೆಗಳು ಜಲಾವೃತವಾಗಿವೆ. ತಾಲ್ಲೂಕಿನ ಜನರೇಗೌಡನಪಾಳ್ಯ, ಮಡೇನಹಳ್ಳಿ, ಕಡೇಪಾಳ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರ ಹೊಲ ಗದ್ದೆಗಳು ಮಳೆ ನೀರಿನಿಂದ ಜಲಾವೃತವಾಗಿದ್ದು ಕೃಷಿ ಹೊಂಡಗಳು ಭರ್ತಿಯಾಗಿವೆ, ಇಡೀ ರಾತ್ರಿ ಸುರಿದ ಮಳೆಯಿಂದ ಹಳ್ಳಕೊಳ್ಳಗಳು ನೀರಿನಿಂದ ಭರ್ತಿಯಾಗಿದ್ದು ರೈತರ ಕೃಷಿ ಬೆಳೆಗಳು ಹಲವು ಕಡೆಗಳಲ್ಲಿ ಜಲಾವೃತವಾಗಿದ್ದು ಮಳೆ ಇದೇ ರೀತಿ ಮುಂದುವರೆದರೆ ಬೆಳೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.
ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಮಳೆ ನೀರು ಕೆರೆಯಂತೆ ನಿಂತಿದ್ದು ಇತ್ತೀಚಗೆ ಬಿದ್ದ ಮಳೆಗಿಂತ ಕಳೆದ ರಾತ್ರಿ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಠಿಸಿದೆ. ಮಳೆಗಾಲದ ಆರಂಭದಿಂದಲೂ ಉತ್ತಮ ಮಳೆಯಾಗುತ್ತಿದ್ದು ಕೃಷಿ ಬೆಳೆಗಳು ಚನ್ನಾಗಿಯೆ ಬಂದಿದ್ದವು ಆದರೆ ಇಡೀ ರಾತ್ರಿ ಸುರಿದ ಮಳೆಯಿಂದ ಹೊಲ ತೋಟ ಗದ್ದೆಗಳಲ್ಲಿ ಮಳೆ ನೀರು ಕೆರೆಯಂತೆ ನಿಂತಿದ್ದು ರೈತರಿಗೆ ತಲೆನೋವಾಗಿದೆ. ಕೃಷಿ ಮತ್ತು ಭತ್ತದ ಗದ್ದೆಗಳಲ್ಲಿ ಹೆಚ್ಚಿನ ನೀರು ನಿಂತಿರುವುದರಿಂದ ಕೊಳೆಯುವ ಸಾಧ್ಯತೆ ಇದ್ದು ರೈತರು ತೀವೃ ಆತಂಕ್ಕೀಡಾಗಿದ್ದಾರೆ.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳು ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾಳಾಗಿದ್ದು ಮಣ್ಣಿನ ರಸ್ತೆಗಳು ಕೆಸರು ಗದ್ದೆಗಳಂತಾಗಿದ್ದರೆ ಇನ್ನು ಡಾಂಬರು ರಸ್ತೆಗಳ ಮಧ್ಯೆ ಗುಂಡಿಗಳು ಬಿದ್ದಿದ್ದು ಮಳೆ ನೀರಿನಿಂದ ಗುಂಡಿಗಳಲ್ಲಿ ನೀರು ಸಂಗ್ರಹವಾಗಿದ್ದು ವಾಹನ ಸವಾರರಿಗೆ ಗುಂಡಿ ಇದೆ ಎಂಬುದು ಗೊತ್ತಾಗದೆ ಬಿದ್ದು ಎದ್ದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಮಳೆ ಆರಂಭಕ್ಕೂ ಮುನ್ನಾ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವತ್ತ ಕ್ರಮಕೈಗೊಳ್ಳದ ಸಂಬಂಧಿಸಿದ ಆದಿಕಾರಿಗಳ ನಿರ್ಲಕ್ಷ್ಯತನದಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ವಾಹನ ಸವಾರರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇಡೀ ರಾತ್ರಿ ಸುರಿದ ಮಳೆಯಿಂದ ಕೃಷಿ ಜಮೀನುಗಳ ಬದುಗಳು ಕೊಚ್ಚಿ ಹೋಗಿದ್ದು ಹೊಲ ಗದ್ದೆಗಳಿಗೆ ನೀರು ನುಗ್ಗಿ ಎಲ್ಲಿ ನೋಡಿದರು ನೀರು ಕೆರೆಯಂತೆ ನಿಂತಿದೆ. ತೋಟ ಮತ್ತು ಹೊಲ ಗದ್ದೆಗಳ ಅಕ್ಕಪಕ್ಕದ ಹಳ್ಳಕೊಳ್ಳಗಳಲ್ಲಿ ಮಲೆ ನೀರು ಕೆರೆಯಂತೆ ನಿಂತದ್ದು ಮಳೆ ಇದೇ ಪ್ರಮಾಣದಲ್ಲಿ ಬಿದ್ದರೆ ಗ್ರಾಮಗಳಲ್ಲಿನ ಮನೆಗಳಿಗೂ ನೀರು ನುಗ್ಗುವ ಸಾಧ್ಯತೆ ಇದೆ ಎನ್ನುತ್ತಾರೆ ಗ್ರಾಮಸ್ಥರು.
ತಾಲ್ಲೂಕಿನ ಕಸಬಾ ಹೋಬಳಿ ಹಳೇಗುಬ್ಬಿ ಮಜರೆ ಕೋಡಿಹಳ್ಳಿ ಗ್ರಾಮದ ಲಕ್ಷ್ಮೀನಾರಾಯಣ ಎಂಬುವವರ ಕುರಿ ರೊಪ್ಪಕ್ಕೆ ಮಳೆ ನೀರು ನುಗ್ಗಿದ್ದರಿಂದ 5 ಕುರಿಗಳು ಸಾವನ್ನಪ್ಪಿದ್ದು ಸ್ಥಳಕ್ಕೆ ತೆರಳಿದ ತಹಸೀಲ್ದಾರ್ ಡಾ;ಪ್ರದೀಪ್‍ಕುಮಾರ್‍ಹೀರೇಮಠ್ ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರ ಪಶು ವೈದ್ಯಾಧಿಕಾರಿಗಳಿಂದ ವೈಧ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ತಾಲ್ಲೂಕಿನ ಗೌರಿಪುರ ಗ್ರಾಮದ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿದ್ದು ರಾತ್ರಿ ತೀವೃತರ ಸಮಸ್ಯೆಯಾಗಿದ್ದರಿಂದ ಕೊಡಲೆ ಗ್ರಾಮಕ್ಕೆ ತೆರಳಿ ಮಳೆ ನೀರು ಮನೆಗಳಿಗೆ ನುಗ್ಗದಂತೆ ಜೆಸಿಬಿ ಯಂತ್ರದ ಮೂಲಕ ಕಾಲುವೆ ನಿರ್ಮಿಸಿ ಮನೆಗಳಿಗೆ ನೀರು ನುಗ್ಗಿ ತೊಂದರೆ ಯಾಗದಂತೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಅಲ್ಲದೆ ನೀರು ನುಗ್ಗಿ ಸಂತ್ರಸ್ಥರಾದ ಕುಟುಂಬಗಳಿಗೆ ತಾಲ್ಲೂಕು ಆಢಳಿತದವತಿಯಿಂದ ದಿನ ನಿತ್ಯದ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಅಲ್ಲದೆ ಗ್ರಾಮದ ಸಮುದಾಯ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗಿದೆ. ಹರಿವೇಸಂದ್ರ ಗ್ರಾಮದಲ್ಲಿ ಮಳೆ ನೀರಿನಿಂದ ಅಲ್ಪ ಸ್ವಲ್ಪ ಸಮಸ್ಯೆಯಾಗಿದ್ದು ಗ್ರಾಮಕ್ಕೆ ಬೇಟಿ ನೀಡಿ ಸಮಸ್ಯೆ ಬಗೆಹರಿಸಲಾಗಿದೆ ಮಳೆಯಿಂದ ಯಾವುದೆ ಸಮಸ್ಯೆಯಾಗದಂತೆ ತಾಲ್ಲೂಕು ಅಢಳಿತದವತಿಯಿಂದ ಸೂಕ್ತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಹಸೀಲ್ದಾರ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ