ಉಪಚುನಾವಣಾ ಫಲಿತಾಂಶ : ಮೂರು ನಾಯಕರಲ್ಲಿ ಶುರುವಾದ ತಳಮಳ..!

ಬೆಂಗಳೂರು

     ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಾಯಿಸಬಹುದೆಂದು ನಿರೀಕ್ಷಿಸಲಾಗಿರುವ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಉಪಚುನಾವಣೆಯ ಮತ ಎಣಿಕೆ ನಾಳೆ ಬೆಳಗ್ಗೆ 8 ಗಂಟೆಯಿಂದ ಆಯಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ ಆರಂಭವಾಗಲಿದೆ. ಮತ ಎಣಿಕೆಗಾಗಿ ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ.

    ಸೂಕ್ತ ಪೋಲೀಸ್ ಬಂದೋಬಸ್ತ್‍ನೊಂದಿಗೆ ಮತ ಎಣಿಕೆ ಇಂದು ಸೋಮವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ. ಮತ ಎಣಿಕೆ ಕೇಂದ್ರಗಳಿಗೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕರು, ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ.

    ಮತ ಎಣಿಕೆ ಕೇಂದ್ರಗಳಿಗೆ ಮೊಬೈಲ್ ತರುವುದನ್ನು ಕಡ್ಡಾಯವಾಗಿದೆ ನಿಷೇಧಿಸಲಾಗಿದೆ. ಡಿ. 5 ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಒಟ್ಟಾರೆ ಶೇ.67.91ರಷ್ಟು ಮತದಾನವಾಗಿತ್ತು. ಹೊಸಕೋಟೆ ಕ್ಷೇತ್ರದಲ್ಲಿ ಶೇ.90.90ರಷ್ಟು ಅತಿ ಹೆಚ್ಚು ಮತದಾನವಾಗಿದ್ದರೆ, ಕೆಆರ್ ಪುರ ಕ್ಷೇತ್ರದಲ್ಲಿ ಶೇ.46.74ರಷ್ಟು ಕಡಿಮೆ ಮತದಾನವಾಗಿತ್ತು.

   ಚುನಾವಣಾ ಕಣದಲ್ಲಿ ಬಿಜೆಪಿ, ಕಾಂಗ್ರೆಸ್ಸಿನ ತಲಾ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಜೆಡಿಎಸ್‍ನ 12 ಮಂದಿ ಸ್ಪರ್ಧಿಸಿದ್ದರು. ಪಕ್ಷೇತರರು ಸೇರಿದಂತೆ 165 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಮತದಾನದ ನಂತರ ಬಿಜೆಪಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರೆ, ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೊಂದಿದೆ. ಜೆಡಿಎಸ್ 5 ಕ್ಷೇತ್ರಗಳಲ್ಲಿ ಜಯ ಗಳಿಸುವ ನಿರೀಕ್ಷೆ ಹೊಂದಿದೆ.

    ಮಿನಿ ಮಹಾ ಸಮರವೆಂದೆ ಪರಿಗಣಿಸಲಾಗಿದ್ದ ಉಪ ಚುನಾವಣೆಯನ್ನು ಮೂರೂ ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿ ಪ್ರಚಾರ ನಡೆಸಿದ್ದವು. ಅಲ್ಲದೆ, ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆ ಎಂಬ ಲೆಕ್ಕಾಚಾರವನ್ನು ರಾಜಕೀಯ ವಲಯದಲ್ಲಿ ಹಾಕಲಾಗಿತ್ತು. ಹೀಗಾಗಿ ನಾಳೆ ಪ್ರಕಟವಾಗುವ ಉಪ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

ಮತ ಎಣಿಕೆ ಕೇಂದ್ರಗಳು:

      ಯಶವಂತಪುರ ಕ್ಷೇತ್ರದ ಮತ ಎಣಿಕೆಯು ಮೈಸೂರು ರಸ್ತೆಯ ಆರ್‍ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ, ಮಹಾಲಕ್ಷ್ಮಿಲೇಔಟ್ ಮತ್ತು ಕೆಆರ್ ಪುರಂ ಕ್ಷೇತ್ರಗಳ ಮತ ಎಣಿಕೆಯು ವಿಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‍ನಲ್ಲಿ, ಶಿವಾಜಿನಗರ ಕ್ಷೇತ್ರದ ಮತ ಎಣಿಕೆಯು ಮೌಂಟ್ ಕಾರ್ಮೆಲ್ ಮಹಿಳಾ ಪಿಯು ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.

      ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ ಹಾಗೂ ಗೋಕಾಕ್ ಕ್ಷೇತ್ರಗಳ ಮತ ಎಣಿಕೆಯು ತಿಲಕವಾಡಿಯ ವಾಸುದೇವ್ ಸೀತಾರಾಮ್ ಘೋಟ್ಗೆ ವಿದ್ಯಾಭವನ್ ಮತ್ತು ರಾಣಿ ಪಾರ್ವತಿದೇವಿ ಕಾಲೇಜಿನಲ್ಲಿ ನಡೆಯುವುದು. ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯು ಸಿರ್ಸಿಯ ದಿ ಮಾಡ್ರನ್ ಎಜುಕೇಷನ್ ಸೊಸೈಟಿಯ ವಾಣಿಜ್ಯ ಕಾಲೇಜಿನಲ್ಲಿ ನಡೆದರೆ, ಹಿರೇಕೆರೂರು ಹಾಗೂ ರಾಣೆಬೆನ್ನೂರು ಕ್ಷೇತ್ರಗಳ ಮತ ಎಣಿಕೆ ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.

      ವಿಜಯನಗರ ಕ್ಷೇತ್ರದ ಮತ ಎಣಿಕೆಯು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದರೆ, ಚಿಕ್ಕಬಳ್ಳಾಪುರ ಕ್ಷೇತ್ರದ ಮತ ಎಣಿಕೆ ಚಿಕ್ಕಬಳ್ಳಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.ಹೊಸಕೋಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ದೇವನಹಳ್ಳಿಯ ಆಕಾಶ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ನಡೆದರೆ, ಕೆ.ಆರ್.ಪೇಟೆ ಕ್ಷೇತ್ರದ ಮತ ಎಣಿಕೆಯು ಕೆಆರ್ ಪೇಟೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ. ಹುಣಸೂರು ಕ್ಷೇತ್ರದ ಮತ ಎಣಿಕೆಯು ಹುಣಸೂರಿನ ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap