ಅಂತರಂಗದ ದರ್ಶನವೇ ಧರ್ಮಗಳ ಉದ್ದೇಶ

ಚಿತ್ರದುರ್ಗ

    ಈ ಜಗತ್ತಿನಲ್ಲಿ ಹಲವು ಧರ್ಮಗಳಿವೆ. ಎಲ್ಲ ಧರ್ಮಗಳ ಉದ್ದೇಶ ಮಾನವನಿಗೆ ಅಂತರಂಗದ ದರ್ಶನ ಮಾಡಿಸುವುದಾಗಿದೆ. ಇದು ಸ್ವಸ್ವರೂಪ ದರ್ಶನ ಮಾಡಿಸುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

    ಮುರುಘಾಮಠದಲ್ಲಿ ನಡೆದ ಶ್ರಾವಣ ದರ್ಶನ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿ, ಧರ್ಮ, ಇಷ್ಟಲಿಂಗ, ಜಂಗಮವೆಂಬ ಕನ್ನಡಿ. ಈ ಕನ್ನಡಿಯ ಒಳಗೆ ತನ್ನನ್ನು ನೋಡಿಕೊಳ್ಳುವುದು ತನ್ನ ವರ್ತನೆಗಳನ್ನು ತಿದ್ದಿ ತೀಡಿ ಸ್ವರೂಪ ದರ್ಶನ ಮಾಡಿಕೊಳ್ಳುವುದು ಎಷ್ಟು ಸುಲಭವೋ ಅಷ್ಟೇ ಕಷ್ಟವಾಗಿದೆ ಎಂದರು

    ಈ ಜಗತ್ತಿನ ದಾರ್ಶನಿಕರು ಅಂತರಂಗದ ದರ್ಶನ ಮಾಡುತ್ತ ದಿವ್ಯದರ್ಶನವನ್ನು ಕಂಡಿದ್ದಾರೆ. ಈ ರೀತಿಯಾದ ಸಾಕ್ಷಾತ್ಕಾರ ಅರಿವನ್ನು ಧರ್ಮ, ಶಾಸ್ತ್ರ ಮಾಡಿಕೊಡುತ್ತದೆ. ನಾವೂ ಸಹ ಅಂತರಂಗದ ಯಾನ ಆರಂಭಿಸಬೇಕು. ಇಂಥ ಯಾನದಲ್ಲಿ ಅಗ್ರಗಣ್ಯರು ವಿಶ್ವಗುರು ಬಸವಣ್ಣನವರು. ಬಸವಣ್ಣನವರನ್ನು ಯಾರೋ ಒಬ್ಬರು ಪ್ರಶ್ನಿಸಿದರಂತೆ- ಶರೀರಕ್ಕೆ ಇಂದ್ರಿಯಗಳ ಉಪಟಳದ ಬಗ್ಗೆ ಏನು ಹೇಳುತ್ತೀರಿ? ಎಂದಾಗ, ಮಾನವನ ಬದುಕಿನಲ್ಲಿ ಅಗೋಚರವಾದ ಯುದ್ಧ ನಿರಂತರವಾಗಿ ನಡೆಯುತ್ತದೆ. ಅಲ್ಲಮಪ್ರಭು ಹೇಳುವಂತೆ- ಅವಳ ವನಚ ಬೆಲ್ಲದಂತೆ ಹೃದಯದಲ್ಲಿಪ್ಪುದು ನಂಜು ಕಂಡಯ್ಯ, ಕಂಗಳಲ್ಲಿ ಒಬ್ಬನ ಕರೆವೊಳು ಮನದಲ್ಲಿ ಒಬ್ಬನ ನೆನೆವೊಳು, ಈ ಮಾನಸಗಳ್ಳಿಯ ನಂಬದಿರಯ್ಯ. ನಮ್ಮ ನಿಮ್ಮೊಳಗೆ ಒಬ್ಬ ಕಳ್ಳನಿದ್ದಾನೆ ವಂಚಕನಿದ್ದಾನೆ. ಈ ಮಾನಸಗಳ್ಳ ವಂಚಿಸುತ್ತಾನೆ ಮೋಸಗೊಳಿಸುತ್ತಾನೆ ಎಂಬುದು ಬಸವಣ್ಣನವರ ಅಭಿಪ್ರಾಯವಾಗಿದೆ ಎಂದರು.

    ಬಸವಣ್ಣನವರಂತೆ ಅಂತರಾವಲೋಕನಕ್ಕೆ ಒಳಗಾದವರಲ್ಲಿ ರಾಷ್ಟ್ರಪಿತ ಗಾಂಧೀಜಿಯವರು ಒಬ್ಬರಾಗಿದ್ದು, ಬಾಲ್ಯದಲ್ಲಿ ಮದುವೆಯಾದ ಗಾಂಧೀಜಿಯವರು ಪ್ರವಾಸವನ್ನು ಮುಗಿಸಿ ಮನೆಗೆ ಹಿಂದಿರುಗಿದಾಗ ತಂದೆಯ ಆರೋಗ್ಯ ಕೆಟ್ಟಿರುತ್ತದೆ. ಆವಾಗ ಉಳಿದ ಮೂವರು ಸಹೋದರರು ತಂದೆಯ ಸೇವೆಯನ್ನು ಮಾಡು ಎಂದಾಗ ಇವತ್ತು ನೀವು ಮಾಡಿ ನಾಳೆ ನಾನು ಮಾಡುತ್ತೇನೆ ಎಂದು ಆ ದಿನ ರಾತ್ರಿ ಗಾಂಧೀಜಿಯವರು ಒಂದುಕೋಣೆಯಲ್ಲಿ ಹೆಂಡತಿಯೊಂದಿಗೆ ಕಾಲ ಕಳೆಯುತ್ತಾರೆ. ಆವತ್ತಿನ ದಿನ ರಾತ್ರಿಯಿಡೀ ತಂದೆ ನರಕಯಾತನೆ ಅನುಭವಿಸುತ್ತ ಚೀರುತ್ತಾರೆ. ಬೆಳಿಗ್ಗೆ ಬಾಗಿಲನ್ನು ತೆರೆದು ನೋಡಿದಾಗ ತಂದೆ ತೀರಿಹೋಗಿರುತ್ತಾರೆ. ಆಗ ತಂದೆಯ ಸೇವೆಯನ್ನು ಧಿಕ್ಕರಿಸಿ ಇಂದ್ರಿಯ ಉಪಟಳಕ್ಕೆ ಒಳಗಾದೆನಲ್ಲ ಎಂಬ ಪಾಪಪ್ರಜ್ಞೆ ಗಾಂಧೀಜಿಯವರಿಗೆ ಅಂತಿಮ ದಿನಗಳವರೆಗು ಕಾಡುತ್ತದೆ. ಈ ಘಟನೆಯನ್ನು ಅವರು ಮುಚ್ಚಿಡಲಿಲ್ಲ ಬಿಚ್ಚಿಟ್ಟರು ಅದಕ್ಕಾಗಿ ಅವರು ಮಹಾತ್ಮರಾದರು ಎಂದರು

    ಮಾನವ ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪಿನಿಂದ ಶಕ್ತಿಯಾಗಿ ಬೆಳೆದುಬರಬೇಕು. ಸತ್ಪುರುಷರು ಒಂದು ತಪ್ಪಿನಿಂದ ಮತ್ತೊಂದು ತಪ್ಪಿನವರೆಗೆ ಶಕ್ತಿಯಾಗಿ ಬೆಳೆದಿರುತ್ತಾರೆ. ತಪ್ಪನ್ನು ತಿದ್ದುಕೊಂಡು ಎದ್ದುಬರುವಂತಹ ಒಂದು ರೂಢಿಯನ್ನು ಅಳವಡಿಸಿಕೊಂಡರೆ ಎಲ್ಲರೂ ಸಜ್ಜನರೇ ಉತ್ತಮರೇ ಆಗುತ್ತಾರೆ. ಸತ್ಪುರುಷರು ತಮ್ಮ ಜೀವನದಲ್ಲಿ ಆದ ಒಂದು ತಪ್ಪನ್ನು ವ್ಯಕ್ತಿತ್ವದ ಬೆಳವಣಿಗೆಗೆ ಮೆಟ್ಟಿಲು ಅಥವಾ ಸೋಪಾನ ಮಾಡಿಕೊಳ್ಳುತ್ತಾರೆ. ಅಂತರಾವಲೋಕನದಿಂದ ದೌರ್ಬಲ್ಯ ಸಣ್ಣದಾಗುತ್ತದೆ.

     ಸಾಧನೆ ದೊಡ್ಡದಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಚೆಲುಮೇರುದ್ರಸ್ವಾಮಿ ಮಠದ ಶ್ರೀ ಬಸವಕಿರಣ ಸ್ವಾಮಿಗಳು, ಸಾಧಕರುಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಆರ್.ಲಿಂಗರಾಜು ಮುಂತಾದವರಿದ್ದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ಬಸವರಾಜಶಾಸ್ತ್ರಿ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap