ದಾವಣಗೆರೆ:
ವಿಶೇಷ ವರದಿ:ವಿನಾಯಕ ಪೂಜಾರ್
ಬರುವ ಮಾರ್ಚ್ 1ರಿಂದ ಆರಂಭವಾಗಲಿರುವ ನಗರದ ದೇವತೆ ಶ್ರೀದುರ್ಗಾಂಭಿಕಾ ದೇವಿ ಜಾತ್ರಾ ಮಹೋತ್ಸವದ ಆಚರಣೆಗಾಗಿ ದೇಗುಲದ ಆವರಣದಲ್ಲಿ 16.50 ಲಕ್ಷ ರೂ. ವೆಚ್ಚದಲ್ಲಿ ಅರಮನೆ ಶೈಲಿಯ ಸ್ವರ್ಣ ಮಹಾ ಮಂಟಪ ತಲೆ ಎತ್ತುತ್ತಿದೆ.
ದುರ್ಗಾಂಭಿಕಾದೇವಿ ಜಾತ್ರೆಗೆ ಇನ್ನೂ ಒಂದು ವಾರ ಬಾಕಿ ಇದ್ದು, ದೇವಸ್ಥಾನದ ಆವರಣದಲ್ಲಿ ಸ್ವರ್ಣ ಮಹಾಮಂಟಪ ನಿರ್ಮಾಣದ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೇ ಶೇ.75 ರಷ್ಟು ಪೆಂಡಾಲ್ ನಿರ್ಮಾಣ ಕಾರ್ಯ ಮುಗಿದಿದ್ದು, ಇನ್ನೂ ಶೇ.25 ರಷ್ಟು ಕಾಮಗಾರಿ ಬಾಕಿ ಇದೆ ಎನ್ನುತ್ತಾರೆ ದೇವಸ್ಥಾನ ಟ್ರಸ್ಟ್‍ನ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ.
ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಸಂಜೀವ್ ಕುಮಾರ್ ಎಂಬುವರು ಸ್ವರ್ಣ ಮಹಾಮಂಟಪ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದು, ಇವರ ನೇತೃತ್ವದಲ್ಲಿ 15 ಜನ ಕಾರ್ಮಿಕರು ಮಂಟಪ ನಿರ್ಮಾಣಕ್ಕೆ ಹಗಲು, ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ.
60 ಅಡಿ ಅಗಲ, 40 ಅಡಿ ವಿಸ್ತೀರ್ಣ ಜಾಗದಲ್ಲಿ ಅಂದಾಜು 80 ಅಡಿ ಎತ್ತರದಲ್ಲಿ ಸ್ಟೀಲ್ ಕಂಬದ ಮೇಲೆ ನಿರ್ಮಾಣವಾಗುತ್ತಿರುವ ಪೆಂಡಾಲ್‍ಗೆ 30 ಸಾವಿರ ಅಡಿ ರೀಪೀಸ್, ಸುಮಾರು 2500 ಸಾವಿರ ಮೀಟರ್ ಬಟ್ಟೆ, ಪೈಬರ್ ಮೋಲ್ಡಿಂಗ್ ಬಳಸಲಾಗುತ್ತಿದ್ದು, ಮೇಲ್ಛಾವಣಿಗೆ ಜಿಂಕ್ ಶೀಟ್ ಹಾಕಲಾಗಿದೆ ಎನ್ನುತ್ತಾರೆ ಮಂಟಪ ನಿರ್ಮಾಣ ಕಾಮಗಾರಿಯ ಜವಾಬ್ದಾರಿ ಹೊತ್ತಿರುವ ಸಂಜೀವ ಕುಮಾರ್.
ಈ ಸ್ವರ್ಣ ಮಹಾ ಮಂಟಪದ ಮುಂಭಾಗದಲ್ಲಿ ಮಧ್ಯ ಭಾಗದಲ್ಲಿ ನಗರ ದೇವತೆ ಶ್ರೀದುರ್ಗಾಂಭಿಕಾದೇವಿಯ ಮೂರ್ತಿ ಸೇರಿದಂತೆ ನವ ದುರ್ಗೆಯರ ಮೂರ್ತಿಗಳನ್ನು ಅಳವಡಿಸುವುದರಿಂದ ಮಹಾ ಮಂಟಪ ವಿಶೇಷ ಆಕರ್ಷಣೆಗೆ ಒಳಗಾಗಲಿದೆ.ಇನ್ನೂ ಎಸ್.ಕೆ.ಪಿ. ರಸ್ತೆಯಲ್ಲಿರುವ ಶ್ರೀಗಣಪತಿ ದೇವಸ್ಥಾನದಿಂದ ತಾಯಿ ದುರ್ಗಾಂಭಿಕಾ ದೇವಸ್ಥಾನದ ವರೆಗೂ 3 ಲಕ್ಷ ರೂ. ವೆಚ್ಚದಲ್ಲಿ ಶಾಮಿಯಾನ ಹಾಗೂ ಮೂರು ಸಾಲು ವಿದ್ಯುತ್ ದೀಪಗಳ ಅಲಂಕಾರ ಮಾಡಿ, ದೇವಸ್ಥಾನಕ್ಕೆ ಬರುವ ದಾರಿಯನ್ನು ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಲಾಗುವುದು ಎಂದು ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಪ್ರಜಾಪ್ರಗತಿಗೆ ತಿಳಿಸಿದರು.
ನಗರ ದೇವತೆಯ ಜಾತ್ರೆಯ ಹಿನ್ನೆಲೆಯಲ್ಲಿ ದೇವನಗರಿಯ ಪ್ರಮುಖ ವೃತ್ತಗಳಿಗೆ ಹಾಗೂ ದೇವಸ್ಥಾನಗಳಿಗೆ ಸುಣ್ಣ-ಬಣ್ಣವನ್ನು ಮಹಾನಗರ ಪಾಲಿಕೆ ಬಳಿಸುತ್ತಿದೆ. ಅಲ್ಲದೆ, ಜಾತ್ರೆಗೆ ಬರುವ ಭಕ್ತಾದಿಗಳಿಗೆ ಹಾಗೂ ಊರಿನ ನಾಗರೀಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಮಹಾಪೌರ ಬಿ.ಜೆ.ಅಜಯಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿರುವುದರಿಂದ, ಜಾತ್ರೆಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಪಾಲಿಕೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ಜಾತ್ರೆಯ ಸಂದರ್ಭದಲ್ಲಿ ಭಕ್ತರು ತಮ್ಮ ಹರಕೆಗಳನ್ನು ತೀರಿಸಲು ದೀಡು ನಮಸ್ಕಾರ ಹಾಕುವ ಪ್ರತೀತಿ ಇದೆ. ಹೀಗಾಗಿ ದೀಡು ನಮಸ್ಕಾರ ಹಾಕುವ ಭಕ್ತರಿಗೆ ಗಾಯಗಳಾಗದಂತೆ ತಡೆಯಲು ದೇವಿಯ ದೇಗುಲದ ಸುತ್ತಲೂ ಅಂದಾಜು 10ರಿಂದ 12 ಟಿಪ್ಪರ್ ಮರಳು ಹಾಸಲು ಹಾಗೂ ಭಕ್ತರ ಸ್ಥಾನಕ್ಕಾಗಿ ನಳ ಅಳವಡಿಸಲು ಸಹ ಪಾಲಿಕೆ ಕ್ರಮ ಕೈಗೊಳ್ಳು ತ್ತಿದೆ .ಒಟ್ಟಿನಲ್ಲಿ ನಗರ ದೇವತೆ ದುರ್ಗಾಂಭಿಕಾದ ದೇವಿ ಜಾತ್ರೆಗೆ ಸಕಲ ಸಿದ್ಧತೆ ನಡೆದಿದ್ದು, ಜಾತ್ರೆಯ ಆರಂಭಕ್ಕೆ ದಿನ ಗಣನೆ ಶುರುವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
