ತುರುವೇಕೆರೆ
ಪಟ್ಟಣದ ಮುಖ್ಯ ಜನನಿಬಿಡ ರಸ್ತೆಯೊಂದರಲ್ಲಿ ಒಳಚರಂಡಿಯ ಕೆಲ ಮ್ಯಾನ್ ಹೋಲ್‍ಗಳು ಶಿಥಿಲಗೊಂಡು ಅದರ ಕಲ್ಮಶ ನೀರು ಹೊರಬರುತ್ತಿದ್ದು ರಸ್ತೆ ಗುಂಡಿಗಳಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.
ಪಟ್ಟಣದ ದೆಬ್ಬೆಘಟ್ಟ ರಸ್ತೆ ಸದಾ ಜನಜುಂಗುಳಿಯಿಂದ ಕೂಡಿದ ರಸ್ತೆಯಾಗಿದೆ. ತುರುವೇಕೆರೆ- ಬಿ.ಎಂ. ರಸ್ತೆಗೆ ಸಂಪರ್ಕ ರಸ್ತೆಯಾಗಿರುವುದರಿಂದ ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೆ ಈ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಡಿಪೋ, ನ್ಯಾಯಾಲಯ, ಹೇಮಾವತಿ ಇಲಾಖೆ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಗಳು ಸೇರಿದಂತೆ ಅನೇಕ ಸರ್ಕಾರಿ ಇಲಾಖೆಗಳು ಹಾಗೂ ಕಾಲೇಜುಗಳು ಇದೇ ರಸ್ತೆಯಲ್ಲಿರುವುದರಿಂದ ಸಾರ್ವಜನಿಕರ ಓಡಾಟ ಹೆಚ್ಚಿದೆ. ಪ್ರತಿದಿನ ನೂರಾರು ಬಸ್ಸುಗಳು ಈ ರಸ್ತೆಯಲ್ಲಿ ಡಿಪೋಗೆ ಬಂದು ಹೋಗುತ್ತವೆ.
ಈ ರಸ್ತೆಯಲ್ಲಿರುವ ಮ್ಯಾನ್ ಹೋಲ್‍ಗಳು ಇತ್ತೀಚೆಗೆ ಶಿಥಿಲಗೊಂಡು ಮ್ಯಾನ್ ಹೋಲ್ ನ ಕಲ್ಮಶ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಈಗಾಗಲೇ ರಸ್ತೆ ದೊಡ್ಡಗುಂಡಿಗಳಾಗಿ ಕಲ್ಮಷ ನೀರು ನಿಂತಿದ್ದು ಸೊಳ್ಳೆಗಳ ವಾಸಸ್ಥಾನವಾಗಿದೆ. ರಸ್ತೆಬದಿ ವ್ಯಾಪಾರಿಗಳ ಗೋಳು ಹೇಳತೀರದಾಗಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ. ರಸ್ತೆ ಮದ್ಯೆ ಮ್ಯಾನ್ ಹೋಲ್‍ಗಳು ರಸ್ತೆ ಮಟ್ಟಕ್ಕಿಂತ ಹೆಚ್ಚು ಉಬ್ಬಿದ್ದು ನಾಲ್ಕು ಚಕ್ರದ ವಾಹನ ಚಲಿಸುವಾಗ ಅವುಗಳ ತಳಭಾಗ ಮ್ಯಾನ್ ಹೋಲ್ ಗೆ ತಡೆಯುತ್ತಿದ್ದು ಚಾಲಕರು ವಾಹನ ಓಡಿಸಲು ಹರ ಸಾಹಸ ಪಡಬೇಕಾಗಿದೆ. ಅದೆಷ್ಠೋ ದ್ವಿಚಕ್ರ ವಾಹನ ಸವಾರರು ಬಿದ್ದೆದ್ದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಘವೇಂದ್ರ ನಗರದ ಸ್ಥಳೀಯ ವಾಸಿ ರಾಜಣ್ಣ ಮಾತನಾಡಿ ಬಿಜಿಎಸ್ ಕಲ್ಯಾಣ ಮಂಟಪದ ಮುಂಬಾಗದಲ್ಲಿರುವ ವಾರ್ಡ್‍ನ ರಸ್ತೆಯಲ್ಲಿರುವ ಯುಜಿಡಿ ತುಂಬಿ ರಸ್ತೆಯುದ್ದಕ್ಕೂ ಹರಿಯುತ್ತಿದ್ದು ಇಲ್ಲಿನ ನಾಗರೀಕರು ಈ ರಸ್ತೆಯಲ್ಲಿ ಜೀವ ಬಿಗಿ ಹಿಡಿದು ಓಡಾಡಬೇಕಿದೆ. ಆಗಿದ್ದೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಂತಿಲ್ಲ. ಈ ರಸ್ತೆಯಲ್ಲಿ ವಾಹನಗಳು ಹಾಗೂ ಜನಸಾಮಾನ್ಯರು ಓಡಾಡುವುದರಿಂದ ಅಪಘಾತ ಸಂಭವಿಸುವ ಮೊದಲೇ ಎಚ್ಚೆತ್ತು ಆದಷ್ಠು ಬೇಗ ಈ ರಸ್ತೆಯನ್ನು ಸರಿಪಡಿಸಿ ನಾUರೀÀಕರಿಗೆ ಅನುಕೂಲ ಕಲ್ಪಿಸಿಕೊಡಲಿ ಎಂದರು.
ಜಿಲ್ಲೆಯಲ್ಲೆ ಪ್ರಥಮ ಯು.ಜಿ.ಡಿ. ಕಾಮಗಾರಿ ಪ್ರಾರಂಭ: ಜಿಲ್ಲೆಯಲ್ಲಿಯೇ ಮೊದಲು ಸುಮಾರು 675 ಲಕ್ಷ ವೆಚ್ಚದಲ್ಲಿ 2007 ರಲ್ಲಿ ಪ್ರಾರಂಬಗೊಂಡು 2010 ರಲ್ಲಿ ಕಾಮಗಾರಿ ಮುಗಿದರೂ ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಸುಮಾರು 10-12 ವರ್ಷಗಳಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ನೆನಗುದಿಗೆ ಬಿದ್ದಿದೆ. ಕಾಮಗಾರಿ ಸಂಧರ್ಭದಲ್ಲಿ ಸಾರ್ವಜನಿಕರು ಎಸೆದ ಪ್ಲಾಸ್ಟಿಕ್ ಹಾಗೂ ಇತರೆ ಕಲ್ಮಷ ಪದಾರ್ಥಗಳಿಂದ ಸುಮಾರು ಶೇ.70 ರಷ್ಠು ಮ್ಯಾನ್ ಹೋಲ್‍ಗಳು ಈಗಾಗಲೇ ಮುಚ್ಚಿಹೋಗಿವೆ. ದೆಬ್ಬೇಘಟ್ಟ ರಸ್ತೆಯ ಮ್ಯಾನ್‍ಹೋಲ್ ಗಳು ತುಂಬಿ ಹರಿಯುತ್ತಿವೆ.
ಕೆಲವು ಮ್ಯಾನ್ ಹೋಲ್ ಗಳು ಶಿಥಿಲವಾಗಿದ್ದು ಅವುಗಳಿಂದ ಹೊರಬರುವ ಕಲ್ಮಶ ನೀರು ರಸ್ತೆಯಲ್ಲಿ ಸದಾ ಹರಿಯುವುದರಿಂದ ಕೊರೋನಾ ಸಂಧರ್ಭದಲ್ಲಿ ಪರಿಸರ ಕಲ್ಮಷಗೊಂಡು ಜನರಿಗೆ ತೊಂದರೆಯಾಗುವ ಸಾದ್ಯತೆ ಹೆಚ್ಚಿದೆ.ರೈತಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್‍ಗೌಡ ಮಾತನಾಡಿ ದೆಬ್ಬೇಘಟ್ಟ ರಸ್ತೆ ಅಗಲೀಕರಣದ ನೆಪಮಾಡಿ ರಸ್ತೆ ಬದಿಯಲ್ಲಿದ್ದ ನೂರಾರು ಮರಗಳನ್ನು ಕಡಿದು ಪರಿಸರ ಹಾನಿ ಮಾಡಲಾಗಿದೆ.
ಈಗಾಗಲೇ ದ್ವಿಪಥ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ರಸ್ತೆಯ ಮ್ಯಾನ್‍ಹೋಲ್‍ಗಳು ತುಂಬಿ ಹರಿಯುವ ಜೊತೆಗೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಪ್ರಜ್ಞಾವಂತ ನಾಗರೀಕರು ರಸ್ತೆ ಗುಂಡಿಗೆ ಮಣ್ಣು ಸುರಿದಿದ್ದು ಸಂಬಂದಿಸಿದವರು ಕೂಡಲೇ ಇತ್ತ ಗಮನ ಹರಿಸಿ ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕೆಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು ನಾಗರೀಕರ ಉಪಯೋಗಕ್ಕೆ ಬಾರದೆ ಮರೀಚಿಕೆಯಾಗಿ ಉಳಿದಿದೆ. ಅದೇನೆ ಇರಲಿ ಇನ್ನಾದರೂ ಸಂಬಂದಪಟ್ಟವರು ಇತ್ತ ಗಮನ ಹರಿಸಿ ಕೂಡಲೆ ಶಿಥಿಲಗೊಂಡಿರುವ ಮ್ಯಾನ್‍ಹೋಲ್‍ಗಳನ್ನು ಸರಿಪಡಿಸಿ ಮುಂದಾಗಬಹುದಾದ ಆವಘಡ ತಪ್ಪಿಸುವುದರೊಂದಿಗೆ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ