82 ಕೋಟಿ ರೂ. ವೆಚ್ಚದಲ್ಲಿ ಇಂಟಿಗ್ರೆಟೆಡ್ ಬಸ್ ಟರ್ಮಿನಲ್
ತುಮಕೂರು

ಹಲವು ದಶಕಗಳಿಂದ ಕೆಎಸ್ಸಾರ್ಟಿಸಿ ಬಸ್‍ಗಳಿಗೆ ತಾಣವಾಗಿದ್ದ ತುಮಕೂರಿನ ಈಗಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕೆಲವೇ ದಿನಗಳಲ್ಲಿ ಕಣ್ಮರೆಯಾಗಲಿದೆ. ಆ ಜಾಗದಲ್ಲಿ ಆರು ಅಂತಸ್ತಿನ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ಸುಸಜ್ಜಿತ ಬಸ್ ನಿಲ್ದಾಣವಾಗಿ ರೂಪುಗೊಳ್ಳಲಿದೆ. ಇದಕ್ಕಾಗಿ ಈಗಾಗಲೇ ಎಲ್ಲ ಸಿದ್ಧತೆಗಳೂ ನಡೆದಿವೆ.
ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಕೆಎಸ್ಸಾರ್ಟಿಸಿ ಸಹಭಾಗಿತ್ವದಲ್ಲಿ 82 ಕೋಟಿ ರೂ.ಗಳ ವೆಚ್ಚದಲ್ಲಿ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ನಿರ್ಮಾಣವಾಗಲಿದ್ದು, ಸೌಲಭ್ಯಪೂರಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಭರ್ಜರಿ ಯೋಜನೆ ತಯಾರಾಗಿದೆ.ಮೂರು ವರ್ಷದ ಕಾಲಾವಧಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಅವಧಿ ನೀಡಲಾಗಿದೆ. ಅಲ್ಲಿಯವರೆಗೂ ಹಾಲಿ ಬಸ್ ನಿಲ್ದಾಣವನ್ನು ಪಕ್ಕದ ಬಸವೇಶ್ವರ ರಸ್ತೆಯಲ್ಲಿರುವ ಕೆಎಸ್ಸಾರ್ಟಿಸಿ ಡಿಪೊ ಜಾಗಕ್ಕೆ ಸ್ಥಳಾಂತರಿಸಲಾಗುತ್ತದೆ.
ಬಸ್ ನಿಲ್ದಾಣ ಸ್ಥಳಾಂತರ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಬಸ್ ನಿಲ್ದಾಣದಲ್ಲಿದ್ದ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಸೇರಿದಂತೆ ಪ್ರಮುಖ ಆಡಳಿತ ಕಚೇರಿಗಳನ್ನು ಅಂತರಸನಹಳ್ಳಿಯ ಡಿಪೊ-2ಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನುಳಿದಂತೆ ಬಸ್ ಸೇವೆಯನ್ನು ಡಿಪೊ-1ಕ್ಕೆ ಸ್ಥಳಾಂತರಿಸಲು ಅಗತ್ಯ ಸಿದ್ಧತೆಗಳು ನಡೆದಿವೆ. ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಬಸ್ ನಿಲ್ದಾಣದ ಸೇವೆ ಡಿಪೊದಲ್ಲಿ ಆರಂಭವಾಗಬೇಕಾಗಿತ್ತು.
ಆದರೆ, ಅಶೋಕ ರಸ್ತೆ, ಜೆ.ಸಿ.ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಆರಂಭವಾಗಿರುವುದರಿಂದ ಅವು ಮುಗಿಯಲು ವಿಳಂಬವಾಗಿದ್ದು, ಸ್ಥಳಾಂತರ ನಿಧಾನಗತಿಯಾಗಲು ಒಂದು ಕಾರಣ. ಶೀಘ್ರ ಪೂರ್ಣಗೊಳಿಸಿ, ಈ ತಿಂಗಳ ಅಂತ್ಯದ ವೇಳೆಗೆ ಬಸ್ ನಿಲ್ದಾಣವನ್ನು ಡಿಪೊಗೆ ಸ್ಥಳಾಂತರ ಮಾಡಲು ಭರದ ಸಿದ್ಧತೆಗಳು ನಡೆದಿವೆ. ಇದಕ್ಕಾಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಅಶೋಕ ರಸ್ತೆ, ಗುಬ್ಬಿ ವೀರಣ್ಣ ರಂಗಮಂದಿರ ರಸ್ತೆ, ಜೆ.ಸಿ.ರಸ್ತೆ, ಬಸವೇಶ್ವರ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಈ ರಸ್ತೆಗಳ ಫುಟ್‍ಪಾತ್ ಅಂಗಡಿಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.
ಡಿಪೊ ಜಾಗ ಬಸ್ ನಿಲ್ದಾಣವಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು, ಸಂಸ್ಥೆಯ ಆಡಳಿತ ವ್ಯವಸ್ಥೆ ನಿರ್ವಹಿಸುವ ಕಚೇರಿಗಳ ಸಿದ್ಧತಾ ಕಾರ್ಯ ನಡೆದಿದೆ. ನಗರ ಸಾರಿಗೆ ಸೇರಿದಂತೆ ವಿವಿಧ ಮಾರ್ಗಗಳ ಬಸ್‍ಗಳ ನಿಲುಗಡೆಗೆ ಪ್ರತ್ಯೇಕ ಪ್ಲಾಟ್‍ಫಾರಂ ನಿರ್ಮಾಣ ಮಾಡಲಾಗುತ್ತಿದೆ. ಮಾರ್ಗಸೂಚಿ ಫಲಕಗಳು, ಪ್ರಯಾಣಿಕರಿಗೆ ಶೌಚಾಲಯ, ಕುಡಿಯುವ ನೀರು, ಆಸನ, ಬೆಳಕು, ದ್ವಿಚಕ್ರ ವಾಹನಗಳ ಪಾಕಿಂಗ್ ವ್ಯವಸ್ಥೆ ಮಾಡುವ ಕೆಲಸ ನಡೆಯುತ್ತಿದೆ. ಬಸ್‍ಗಳು ಸರಾಗವಾಗಿ ಬಸ್ ನಿಲ್ದಾಣಕ್ಕೆ ಹೋಗಿ ಬರಲು ಬಸವೇಶ್ವರ ರಸ್ತೆಯ ಪ್ರವೇಶ ದ್ವಾರವನ್ನು ಅಗಲ ಮಾಡಿ, ಗುಬ್ಬಿ ವೀರಣ್ಣ ರಂಗಮಂದಿರ ರಸ್ತೆಗೆ ಎರಡು ಪ್ರವೇಶ ದ್ವಾರಗಳನ್ನು ತೆರೆಯಲಾಗುತ್ತದೆ. ಇಲ್ಲಿನ ಕೆಲಸಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಡಿಪೊದ ವರ್ಕ್ ಸೂಪರಿಂಟೆಂಡೆಂಟ್ ಪ್ರತ್ಯಕ್ಷ ರಾವ್ ಹೇಳಿದರು.
ಬಸ್ ನಿಲ್ದಾಣ ಇಲ್ಲಿಗೆ ಸ್ಥಳಾಂತರಗೊಂಡ ನಂತರ ಹಾಲಿ ನಿಲ್ದಾಣದ ಎಲ್ಲಾ ಕಟ್ಟಡಗಳನ್ನು ನೆಲಸಮಗೊಳಿ ಹೊಸ ನಿರ್ಮಾಣ ಆರಂಭಿಸಲಾಗುತ್ತದೆ. ಆರು ಅಂತಸ್ತಿನ ಇಂಟಿಗ್ರೆಟೆಡ್ ಬಸ್ ಟರ್ಮಿನಲ್‍ನಲ್ಲಿ ಎರಡು ನೆಲ ಅಂತಸ್ತುಗಳಲ್ಲಿ ವಾಹನಗಳ ಪಾಕಿಂಗ್‍ಗೆ ಅವಕಾಶ ಮಾಡಿಕೊಡಲಾಗುತ್ತದೆ. ಅದರ ಮೇಲಿನ ನಾಲ್ಕು ಅಂತಸ್ತುಗಳಲ್ಲಿ ಮೊದಲ ಅಂತಸ್ತಿನಲ್ಲಿ ನಗರ ಸಾರಿಗೆ ಬಸ್ ನಿಲ್ದಾಣ, ಎರಡನೇ ಅಂತಸ್ತಿನಲ್ಲಿ ಗ್ರಾಮೀಣ ಸಾರಿಗೆ ಹಾಗೂ ಇತರೆ ನಗರ, ಪಟ್ಟಣಗಳಿಗೆ ಸಂಪರ್ಕ ಸೇವೆ ನೀಡುವ ಬಸ್‍ಗಳಿಗೆ ಸ್ಥಳಾವಕಾಶ ಮಾಡುವ ಯೋಜನೆ ಇದೆ. ಮೂರು ಹಾಗೂ ನಾಲ್ಕನೇ ಮಹಡಿಯಲ್ಲಿ ವಾಣಿಜ್ಯ ಮಳಿಗೆ, ಕೆಸ್ಸಾರ್ಟಿಸಿ ಆಡಳಿತ ಕಚೇರಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ.
ಇದರ ಜೊತೆಗೆ ತುಮಕೂರು ನಗರ ಸಾರಿಗೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಇರುವ 49 ಸಿಟಿ ಬಸ್‍ಗಳಿಗೆ ವಾಹನಗಳ ಟ್ರ್ಯಾಕಿಂಗ್ ವ್ಯವಸ್ಥೆ, ಸಾರ್ವಜನಿಕ ಪ್ರಯಾಣಿಕರ ಮಾಹಿತಿಗಾಗಿ ಎಲ್‍ಇಡಿ ಡಿಸ್‍ಪ್ಲೇ ಮತ್ತು ಸಿ.ಸಿ. ಟಿ.ವಿ. ಕ್ಯಾಮರಾ ಅಳವಡಿಕೆ, ಪ್ರಮುಖ ತಂಗುದಾಣಗಳಲ್ಲಿ ಡಿಸ್‍ಪ್ಲೇ ಅಳವಡಿಕೆ, ಮೊಬೈಲ್ ಅಪ್ಲಿಕೇಷನ್ ಮೂಲಕ ನಗರ ಸಾರಿಗೆ ಬಸ್‍ಗಳ ಮಾಹಿತಿ ಹಾಗೂ ಬಸ್ ನಿಲ್ದಾಣದಲ್ಲಿ ನಿಯಂತ್ರಣ ಕೊಠಡಿಗಳ ಸ್ಥಾಪನೆ ಈ ಎಲ್ಲ ವ್ಯವಸ್ಥೆಗಳಿರುವ ಯೋಜನೆಗಳನ್ನು ರೂಪಿಸಲಾಗಿದೆ. ಈ ಯೋಜನೆಯನ್ನು ರೂಪಿಸುವಾಗ ಸ್ಮಾರ್ಟ್ ಆಗಿಯೇ ಕಂಡಿರಬಹುದು. ಆದರೆ ಅದಕ್ಕೂ ಮುನ್ನ ಯೋಚಿಸಬೇಕಿದ್ದ ಕೆಲವು ಅಂಶಗಳನ್ನು ನಿರ್ಲಕ್ಷಿಸಲಾಯಿತೆ? ಅಥವಾ ಮೂಲಭೂತ ಸಮಸ್ಯೆಗಳು ಹೊಳೆಯಲೇ ಇಲ್ಲವೆ? ನಗರದ ಟ್ರಾಫಿಕ್ (ಸಂಚಾರ) ದಟ್ಟಣೆಯನ್ನು ಗಮನಿಸದೇ ಹೋದದ್ದು ಬಹುದೊಡ್ಡ ಲೋಪವಲ್ಲವೆ?
ಹಾಲಿ ಇರುವ ಬಸ್ ನಿಲ್ದಾಣ, ನಗರದ ಮಧ್ಯಭಾಗದಲ್ಲಿದೆ. ಹೊರ ಜಿಲ್ಲೆಗಳು ಹಾಗೂ ಗ್ರಾಮೀಣ ಸಾರಿಗೆ ಬಸ್‍ಗಳು ಈ ನಿಲ್ದಾಣದ ಒಳಗೆ ಪ್ರವೇಶ ಪಡೆದು ನಿರ್ಗಮನ ಆಗುವುದರೊಳಗೆ ಎದುರಾಗುವ ಕಿರಿಕಿರಿ ಅಷ್ಟಿಷ್ಟಲ್ಲ. ಇಲ್ಲಿನ ಬಸ್ ನಿಲ್ದಾಣದೊಳಗೆ ಬಂದು ಹೋಗುವವರಿಗೆ ಆ ಸಂಕಷ್ಟಗಳು ಅನಾವರಣಗೊಳ್ಳುತ್ತವೆ. ಇಲ್ಲಿ ಸಂಚರಿಸುವವರಿಗೆ ಮತ್ತು ವ್ಯಾಪಾರ ವಹಿವಾಟು ನಡೆಸುವವರಿಗೆ ನಿತ್ಯವೂ ನರಕ ಯಾತನೆ. ಅನುಭವಿಸಿದವರಿಗೆ ಮಾತ್ರವೇ ಇಲ್ಲಿನ ಸಮಸ್ಯಗಳು ತಿಳಿಯುವುದು.
ತುಮಕೂರು ನಗರವನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಆಯ್ಕೆ ಮಾಡಿಕೊಂಡಿರುವುದೇ ಬೆಂಗಳೂರಿನಂತಹ ಮಹಾನಗರದ ದಟ್ಟಣೆ ಕಡಿಮೆ ಮಾಡಿ ತುಮಕೂರಿನತ್ತ ವರ್ಗಾಯಿಸಲು. ರಾಜಧಾನಿ ದಿನೆ ದಿನೆ ಬೆಳೆಯುತ್ತಿದ್ದು, ಅಲ್ಲಿನ ಸಂಚಾರಿ ದಟ್ಟಣೆ ಕಡಿಮೆ ಮಾಡುವ ಹಾಗೂ ಮಿತಿಮೀರುತ್ತಿರುವ ಮಾಲಿನ್ಯ ತಡೆಗಟ್ಟಲು ಬೆಂಗಳೂರಿನ ಉಪ ನಗರಿಯಾಗಿ ತುಮಕೂರನ್ನು ಗುರುತಿಸಲಾಗಿದೆ. ಈ ನಗರವನ್ನು ಅಭಿವೃದ್ಧಿಪಡಿಸುವ ಉದ್ದೇಶವೂ ಇದೇ ಆಗಿದೆ. ಈ ಕಾರಣಕ್ಕಾಗಿಯೇ ತುಮಕೂರಿನ ಸುತ್ತಮುತ್ತ ಕಾರ್ಖಾನೆಗಳಿಗೆ ಉತ್ತೇಜನ ನೀಡಲಾಗುತ್ತಿದೆ.
ಬೆಂಗಳೂರಿಗೆ ಪೂರಕವಾಗಿ ತುಮಕೂರು ಅಭಿವೃದ್ಧಿಯಾಗುತ್ತದೆ ಎಂದರೆ ಅದಕ್ಕೆ ಯಾರ ತಕರಾರೂ ಇಲ್ಲ. ಆದರೆ ತುಮಕೂರಿನಲ್ಲಿ ಈಗಿರುವ ದಟ್ಟಣೆ ನಿವಾರಿಸದೆ, ಸಮಸ್ಯೆಗಳನ್ನು ಇತ್ಯರ್ಥಪಡಿಸದೆ, ಸಮಸ್ಯೆ ಇರುವ ಜಾಗದಲ್ಲಿ ಆ ಸಮಸ್ಯೆಗಳನ್ನು ಶಾಶ್ವತವಾಗಿ ಅಲ್ಲಿಯೇ ಉಳಿಸುವಂತಹ ಕಾರ್ಯಗಳು ನಡೆಯುತ್ತಿರುವುದು ಮಾತ್ರ ಅತ್ಯಂತ ಶೋಚನೀಯ.
ತುಮಕೂರು ಹೆದ್ದಾರಿ ಎನ್.ಎಚ್-48 ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತರ ಕರ್ನಾಟಕದ ಯಾವುದೇ ಬಸ್ ಸಂಚರಿಸಬೇಕಾದರೆ ತುಮಕೂರು ಮೂಲಕವೇ ಹಾದು ಹೋಗಬೇಕು. ಇದರಿಂದ ತುಮಕೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಸುಮಾರು 2000 ರಿಂದ 3000 ವರೆಗೂ ದಿನಂಪ್ರತಿ ಬಸ್‍ಗಳು ಹಾದು ಹೋಗಬೇಕಾದ ಪರಿಸ್ಥಿತಿ ಇದೆ. ಈ ದಟ್ಟಣೆಯಿಂದ ತುಮಕೂರು ನಗರದ ಎಲ್ಲ ದಿಕ್ಕುಗಳ ರಸ್ತೆಗಳೂ ಬಿಡುವಿಲ್ಲದಂತೆ ಮತ್ತಷ್ಟು ದಟ್ಟಣೆಗೆ ಒಳಗಾಗುತ್ತವೆ. ಇದರಿಂದ ನಗರದಲ್ಲಿ ವಾಹನಗಳು ಚಲಿಸಲು ಸಮರ್ಪಕ ರಸ್ತೆಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈಗಲೇ ಈ ಸ್ಥಿತಿ ಇರುವಾಗ ಇನ್ನು ಮುಂದಿನ ದಿನಗಳಲ್ಲಿ ಅದೆಷ್ಟು ದಟ್ಟಣೆಯಾದೀತು?
ಪ್ರಯಾಣಿಕರು ತಡೆಯೊಡ್ಡಿದ ಕಡೆಗಳಲ್ಲೆಲ್ಲಾ ಬಸ್ ನಿಲುಗಡೆ ಮಾಡುವ, ಇದರಿಂದ ಅಸಂಖ್ಯಾತ ಅಪಘಾತಗಳಿಗೆ ಎಡೆಮಾಡಿ ಕೊಡುವ ದೃಶ್ಯಗಳನ್ನು ನಾವು ಆಗಾಗ್ಗೆ ನೋಡುತ್ತಿದ್ದೇವೆ. ಒಂದು ಬಸ್ ಹೊರಟರೆ ಅದರ ಹಿಂದೆ ಮುಂದೆ ಇತರೆ ವಾಹನಗಳು ಹೇಗೆ ಒಂದಕ್ಕೊಂದು ಅಂಟಿಕೊಳ್ಳುವ ರೀತಿಯಲ್ಲಿ ಚಲಿಸುತ್ತವೆ ಎಂಬುದನ್ನು ನೋಡಿದ್ದೇವೆ. ಇಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‍ಗಳ ಜೊತೆಗೆ ಖಾಸಗಿ ಬಸ್‍ಗಳು, ರಿಕ್ಷಾಗಳು, ಕಾರುಗಳು ಸೇರಿದಂತೆ ಇತರೆ ವಾಹನಗಳು ಚಲಿಸುತ್ತಲೇ ಇರುತ್ತವೆ.
ತುಮಕೂರು ಬಸ್ ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ತಿರುವು ಪಡೆಯುವಾಗ ಹಾಗೂ ಬೆಂಗಳೂರು ಕಡೆಯಿಂದ ಬರುವ ವಾಹನಗಳು ನಿಲ್ದಾಣದೊಳಗೆ ಪ್ರವೇಶ ಪಡೆಯುವಾಗ ಇರುವ ಸಂಚಾರಿ ದಟ್ಟಣೆ ಎಂತಹವರನ್ನು ದಂಗುಬಡಿಸುತ್ತದೆ. ವೇಗವಾಗಿ ಬರುವ ವಾಹನಗಳಿಗೆ ಸಿಲುಕಿ ಅದೆಷ್ಟೋ ಪ್ರಯಾಣಿಕರು ಕೈಕಾಲು ಮುರಿದುಕೊಂಡಿದ್ದಾರೆ. ಆಸ್ಪತ್ರೆ ಸೇರಿದ್ದಾರೆ. ಅದೆಷ್ಟೋ ಸಾವು ನೋವುಗಳು ಸಂಭವಿಸಿವೆ.
ಇದನ್ನೆಲ್ಲಾ ಗಮನದಲ್ಲಿಟ್ಟು ನೋಡಿದರೆ ಈ ಪ್ರದೇಶ ಎಷ್ಟು ಅಪಾಯಕಾರಿ ಎಂಬುದು ತಿಳಿಯುತ್ತದೆ. ಭವಿಷ್ಯದಲ್ಲಿ ನಗರ ಮತ್ತಷ್ಟು ಬೆಳೆಯುವ ಅವಕಾಶ ಮತ್ತು ಅರ್ಹತೆ ಇರುವುದರಿಂದ ನಗರವನ್ನು ಸಾರಿಗೆ ಬಸ್‍ಗಳ ದಟ್ಟಣೆಯಿಂದ ಮುಕ್ತಿಗೊಳಿಸಬೇಕಾದರೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಬಸ್ ನಿಲ್ದಾಣಗಳನ್ನು ಬೆಂಗಳೂರು ಮಾದರಿಯಲ್ಲೇ ಹೊರ ವಲಯದ ಆಯಾ ರಸ್ತೆಗಳಲ್ಲಿಯೇ ನಿರ್ಮಿಸಿದರೆ ಒಳಿತಲ್ಲವೆ? ನಗರಕ್ಕೆ ಬಂದು ಸೇರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವಾಗ, ವರ್ಷಗಳು ಉರುಳಿದಂತೆ ಬಸ್‍ಗಳ ಸಂಖ್ಯೆಯೂ ಹೆಚ್ಚುತ್ತಿರುವಾಗ ಮುಂದಿನ ಲೆಕ್ಕಾಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಈಗಿನ ಸ್ಥಿತಿಗಷ್ಟೇ ಯೋಜನೆ ರೂಪಿಸಿದರೆ ಮುಂದೆ ಎದುರಾಗುವ ತಲೆದಂಡಗಳಿಗೆ ಹೊಣೆಗಾರರು ಯಾರು?
ತುಮಕೂರಿನ ಹಲವು ನಾಗರಿಕ ಹಿತರಕ್ಷಣಾ ವೇದಿಕೆಗಳು ಮತ್ತು ಸಾರ್ವಜನಿಕರು ಈ ನಿಟ್ಟಿನಲ್ಲಿ ಯೋಚಿಸುತ್ತಿರುವಾಗ ದೊಡ್ಡ ಮೊತ್ತದ ಹೂಡಿಕೆ ಮಾಡುತ್ತಿರುವ ಸ್ಮಾರ್ಟ್ ಸಿಟಿ ಲಿಮಿಟೆಡ್‍ಗೆ ಈ ದೂರದೃಷ್ಟಿ ಯೋಚನೆಗಳು ಹೊಳೆಯಲಿಲ್ಲವೇಕೆ? ಸ್ಮಾಟ್‍ಸಿಟಿ ಕಂಪನಿಗೆ ಸಲಹೆ ನೀಡಿದ ಸಲಹಾ ಮಂಡಳಿ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಗೆ ಇದೆಲ್ಲ ತಿಳಿಯದೆ ಹೋಯಿತೆ?
ಹೊರ ಜಿಲ್ಲೆಗಳಿಂದ ಬಸ್ ನಿಲ್ದಾಣದ ಬಳಿ ಇಳಿದವರು ಹತ್ತಿರದ ಗ್ರಾಮ ಮತ್ತು ಇತರೆ ತಾಲ್ಲೂಕುಗಳಿಗೆ ಮುಂದುವರಿದ ಪ್ರಯಾಣ ಬೆಳೆಸಬೇಕು. ಇದಕ್ಕಾಗಿ ಖಾಸಗಿ ಸಾರಿಗೆ ಅವಲಂಬಿಸಬೇಕು. ಪ್ರಯಾಣಿಕರು ಪುನಃ ಅಶೋಕ ರಸ್ತೆಗೆ ಇಳಿದು ಖಾಸಗಿ ನಿಲ್ದಾಣದತ್ತ ಸಾಗಬೇಕು. ಒಂದು ಕಡೆಯಿಂದ ಮತ್ತೊಂದು ಕಡೆಯ ರಸ್ತೆಗೆ ಹೋಗುವುದು ಅಷ್ಟು ಸುಲಭದ ಕೆಲಸವಲ್ಲ. ಕೈಯಲ್ಲಿ ಜೀವ ಹಿಡಿದು ದೌಡಾಯಿಸುವಂತಹ ಪರಿಸ್ಥಿತಿ ಇದೆ. ಹೀಗಿರುವಾಗ ಇಲ್ಲಿನ ವ್ಯವಸ್ಥೆಗೆ ಕನಿಷ್ಠ ಒಂದು ಅಂಡರ್ ಪಾಸ್, ಓವರ್ ಬ್ರಿಡ್ಜ್ ನಿರ್ಮಿಸಿಕೊಡಬೇಕೆಂಬ ಯೋಜನೆ ಕಾಮಗಾರಿಯಲ್ಲಿ ಇಲ್ಲ.
ಮುಂದಿನ ದಿನಗಳಲ್ಲಿ ದಟ್ಟಣೆ ಇನ್ನೂ ಅಧಿಕವಾದಾಗ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಆಗ ಮಾಡುವ ಕೆಲಸವನ್ನು ಈಗಲೇ ಮಾಡಬಹುದಿತ್ತಲ್ಲವೆ? ಭವಿಷ್ಯದ ಸಮಸ್ಯೆಗಳನ್ನು ನಿವಾರಣೆ ಮಾಡುವ ಇಂತಹ ಯೋಜನೆಗಳನ್ನು ಹಾಕಿಕೊಂಡಿದ್ದರೆ ಸ್ಮಾರ್ಟ್‍ಸಿಟಿ ಎಲ್ಲ ರೀತಿಯಲ್ಲಿಯೂ ತನ್ನ ಅರ್ಹತೆ ಉಳಿಸಿಕೊಳ್ಳುತ್ತಿತ್ತು.
ಬಸ್ ನಿಲ್ದಾಣಕ್ಕೆ ಪ್ರವೇಶ ಪಡೆಯುವ ಅಶೋಕ ರಸ್ತೆಯಲ್ಲಿ ಒಂದು ಬಸ್ ಪ್ರವೇಶಿಸುವಷ್ಟರಲ್ಲೇ ಹತ್ತಾರು ವಾಹನಗಳು ಜಾಮ್ ಆಗುತ್ತವೆ. ಮೇಲೆ ಹೇಳಿದ ಹಾಗೆ ಮೂರು ಸಾವಿರ ಬಸ್‍ಗಳು ಪ್ರವೇಶ ಪಡೆದು ನಿರ್ಗಮಿಸುವ ಸಂದರ್ಭದಲ್ಲಿ ಅದೆಷ್ಟು ಸಂಚಾರಿ ದಟ್ಟಣೆಯಾಗುತ್ತದೆ ಎಂಬುದನ್ನು ಒಮ್ಮೆ ಊಹಿಸಿಕೊಂಡರೆ ಸಾಕು. ಇದು ಸಾಲದೆಂಬಂತೆ ಪ್ರಸ್ತಾಪಿತ ಯೋಜನೆಯಲ್ಲಿ ನೆಲ ಅಂತಸ್ತಿನಲ್ಲಿ 33 ಬಸ್‍ಬೇಗಳು, ನಗರ ಸಾರಿಗೆ ಕಾರ್ಯಾಚರಣೆ ಮತ್ತು ಮೇಲಿನ ನೆಲ ಅಂತಸ್ತು ಗ್ರಾಮೀಣ ಸಾರಿಗೆ ಕಾರ್ಯಾಚರಣೆಗೆ 35 ಬಸ್‍ಬೇ ಗಳು ನಿರ್ಮಾಣಗೊಳ್ಳುತ್ತಿರುವಾಗ ಅಶೋಕ ರಸ್ತೆಯಲ್ಲಿನ ವಾಹನ ದಟ್ಟಣೆಯ ನರಕಯಾತನೆ ಹೇಗಿರುತ್ತದೆ ಎಂಬುದನ್ನು ಗಮನಿಸಿದರೆ ಎದೆ ಝಲ್ ಎನ್ನುತ್ತದೆ..
ಅಂದಾಜು (ಸ್ಮಾರ್ಟ್‍ಸಿಟಿ ಹಾಗೂ ಕೆ.ಎಸ್.ಆರ್.ಟಿ.ಸಿ. ಸಹಭಾಗಿತ್ವ) 100 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಬಸ್ ನಿಲ್ದಾಣದ ಚಿತ್ರಣ ಈ ಕೆಳಕಂಡಂತಿದೆ.
ನಾಲ್ಕು ಎಕರೆ 17 ಗುಂಟೆ ಜಾಗದ ಕಟ್ಟಡದ ವಿಸ್ತೀರ್ಣದ್ದಲ್ಲಿ ಒಟ್ಟು 6 ಅಂತಸ್ತುಗಳು ನಿರ್ಮಾಣಗೊಳ್ಳುತ್ತಿವೆ. ನೆಲ ಅಂತಸ್ತಿನ ಕೆಳಗೆ ಬರುವ ಬಿ1 (ಬೇಸ್‍ಮೆಂಟ್ -1) ಮತ್ತು ಬಿ2 (ತಳ ಬೇಸ್‍ಮೆಂಟ್ ಮೇಲಿನ ಅಂತಸ್ತು) ಪ್ರದೇಶದಲ್ಲಿ ದ್ವಿಚಕ್ರ ಮತ್ತು ಕಾರು ಪಾರ್ಕಿಂಗ್‍ಗೆ ಅವಕಾಶ ಕಲ್ಪಿಸಲಾಗಿದೆ. ನೆಲ ಅಂತಸ್ತಿನಲ್ಲಿ (ಗ್ರೌಂಡ್ ಫ್ಲೋರ್) ನಗರ ಸಾರಿಗೆಗಳ ಕಾರ್ಯಾಚರಣೆಗೆ (33 ಬಸ್‍ಬೇ), ನೆಲ ಅಂತಸ್ತು ಮೇಲಿನ (ಮೊದಲ ಮಹಡಿ), ಗ್ರಾಮೀಣ ಸಾರಿಗೆಗಳ ಕಾರ್ಯಾಚರಣೆಗೆ (35 ಬಸ್‍ಬೇ) ಸ್ಥಳಾವಕಾಶ ಕಲ್ಪಿಸಲಾಗಿದೆ. 2ನೇ ಮತ್ತು 3ನೇ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಇದು ಯೋಜನೆಯ ಚಿತ್ರಣ. ಈ ನೀಲಿ ನಕ್ಷೆಯ ಅನ್ವಯ ಅಲ್ಲಿ ಕಟ್ಟಡ ನಿರ್ಮಾಣವಾಗುತ್ತದೆ. ಆದರೆ ಮೇಲಿನ ಅಂಶಗಳನ್ನು ವಾಸ್ತವ ಮತ್ತು ಪ್ರಾಯೋಗಿಕವಾಗಿ ಗಮನಿಸಿದಾಗ ಇದೆಲ್ಲ ಎಷ್ಟು ಸೂಕ್ತ ಮತ್ತು ಸಮಂಜಸ ಎಂಬ ಪ್ರಶ್ನೆ ಏಳದೆ ಇರದು. ಹಣ ಇದೆ, ಆ ಹಣ ವ್ಯಯಿಸಲು ಜಾಗವಿದೆ. ಆ ಜಾಗದಲ್ಲಿ ಈ ಹಣ ವ್ಯಯಿಸಿದರೆ ಮುಗಿಯಿತು ಎಂಬ ಒಂದಂಶದ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದೆ. ಇದರ ಓರೆ-ಕೋರೆಗಳ ಬಗ್ಗೆ ಕಣ್ಣಾಡಿಸುವ ಪ್ರಯತ್ನಗಳನ್ನು ಮಾಡಿಯೇ ಇಲ್ಲ.
ಇಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಅಧಿಕಾರಿಗಳ ಮಟ್ಟಕ್ಕೆ ಸರಿ ಇರಬಹುದು. ನಮಗೇಕು ಬೇಕು ಇಲ್ಲದ ಉಸಾಬರಿ ಎನ್ನುವ ಚಿಂತನೆಗಳು ತಲೆಯಲ್ಲಿ ಹಾದು ಹೋಗಿರಲೂಬಹುದು. ಇಂತಹವರೆಲ್ಲ ಇಂದು ಈ ಊರು, ನಾಳೆ ಇನ್ನೊಂದೂರು ಎಂಬಂತೆ ಎತ್ತಂಗಡಿಯಾಗಿ, ವರ್ಗಾವಣೆಯಾಗಿ ಹೋಗುತ್ತಾರೆ. ಆದರೆ ದಿನ ಬೆಳಗಾದರೆ ಇಲ್ಲಿಯೇ ಓಡಾಡುವ ಜನರ ಪರಿಸ್ಥಿತಿ ಏನಾಗಬೇಕು? ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಬೇಕಾದ ಜನಪ್ರತಿನಿಧಿಗಳಿಗೆ ಇಂತಹ ಸೂಕ್ಷ್ಮತೆಗಳು, ಸಮಸ್ಯೆಗಳ ಆಳ ತಿಳಿಯದೇ ಹೋದದ್ದು ವಿಪರ್ಯಾಸವೇ ಸರಿ.
ಇಲ್ಲಿ ಗಮನಿಸಬೇಕಾದ ಮತ್ತು ಆಶ್ಚರ್ಯಕರವೂ ಆದ ಒಂದು ವಿಷಯವನ್ನು ಪ್ರಸ್ತಾಪಿಸಲೇಬೇಕು. ಇದೆಂತಹ ಅವೈಜ್ಞಾನಿಕ ನಿರ್ಧಾರ ಎಂಬುದು ಎಂತಹವರಿಗೂ ತಿಳಿಯುತ್ತದೆ. ಎರಡು ಮತ್ತು ಮೂರನೆ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕಾಗಿ ಸ್ಥಳ ಮೀಸಲಿಡಲಾಗಿದೆ. ಈ ಮಳಿಗೆಗಳು ನಿಷ್ಪ್ರಯೋಜಕವಾಗಲಿವೆ ಎಂಬುದನ್ನು ಎಂತಹವರೂ ಊಹಿಸಬಲ್ಲರು. ನಗರದ ಪ್ರಮುಖ ರಸ್ತೆಗಳಲ್ಲಿಯೆ ವಾಣಿಜ್ಯ ಕಟ್ಟಡಗಳನ್ನು ಗಮನಿಸಿದರೆ ಮೊದಲ ಹಾಗೂ ಎರಡನೆ ಅಂತಸ್ತಿನ ಕಟ್ಟಡಗಳೆ ಖಾಲಿ ಬಿದ್ದಿವೆ.
ಅಲ್ಲೆಲ್ಲಾ ಟು ಲೆಟ್ ಎಂಬ ಬೋರ್ಡ್‍ಗಳು ರಾರಾಜಿಸುತ್ತಿವೆ. ಖಾಸಗಿ ನಿಲ್ದಾಣದಲ್ಲಿ ಪಾಲಿಕೆಯಿಂದ ನಿರ್ಮಿಸಲಾಗಿರುವ ಮೊದಲ ಅಂತಸ್ತಿನ ಮಳಿಗೆಗಳನ್ನು ಖಾಲಿ ಬಿಟ್ಟು ಬಹಳ ವರ್ಷಗಳೆ ಕಳೆದಿವೆ. ತುಮಕೂರೆ ಏಕೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಇಂತಹ ಬಹುಮಹಡಿ ಬಸ್ ನಿಲ್ದಾಣಗಳ ನಿವೇಶನಗಳು ಖಾಲಿ ಹೊಡೆಯುತ್ತಿವೆ. ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಇವೆಲ್ಲವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ನೋಡಿಲ್ಲವೆ? ಇಂತಹ ಯೋಜನೆಗಳಿಂದ ಪಾಠ ಕಲಿಯದೆ ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ಸಾರ್ವಜನಿಕರ ಹಣ ಪೋಲು ಮಾಡಿ ಇನ್ನಾರಿಗೋ ಪುಕ್ಕಟ್ಟೆ ಅನುಕೂಲವಾಗುವಂತೆ ಮಾಡಿಕೊಡುವ ಯೋಜನೆಯಾಗಿ ಇದು ಪರಿವರ್ತಿತವಾಗುತ್ತಿದೆ ಎಂದೆನ್ನಿಸುವುದಿಲ್ಲವೆ?
ಬಸ್ ನಿಲ್ದಾಣದಲ್ಲಿ ವೈಟ್ ಟ್ಯಾಪಿಂಗ್ (ಕಾಂಕ್ರಿಟ್) ಮಾಡಿ ನಿಲ್ದಾಣದ ಅಷ್ಟೂ ಪ್ರದೇಶಕ್ಕೆ ಹಾಕಿ ಇನ್ನೂ ನಾಲ್ಕೈದು ವರ್ಷಗಳು ಕಳೆದಿಲ್ಲ. ಇದಕ್ಕಾಗಿ ವ್ಯಯಿಸಿದ ಕೋಟಿಗಟ್ಟಲೆ ಹಣ ವ್ಯರ್ಥವಾದಂತಾಗಿ ಮರು ನಿರ್ಮಾಣಕ್ಕೆ ಇದನ್ನೆಲ್ಲಾ ಅಗೆದು ತೆಗೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೆಲ್ಲಾ ನೋಡಿದರೆ ಹಣ ವ್ಯಯಿಸುವುದೆ ಇಂತಹ ಯೋಜನೆಗಳ ಉದ್ದೇಶವಾಯಿತೆ? ಒಮ್ಮೆ ಯೋಜನೆ ರೂಪಿಸುವಾಗ, ಹಣ ವ್ಯಯಿಸುವಾಗ ಮುಂದೆ ಎದುರಾಗುವ ಸಮಸ್ಯೆಗಳ ಪರಿಜ್ಞಾನ ಇಲ್ಲದಿರುವುದಾದರೂ ಏಕೆ?
ಈ ಯೋಜನೆ ಕೈಗೆತ್ತಿಕೊಳ್ಳಲು ತರಾತುರಿಯ ವ್ಯವಸ್ಥೆಗಳು ನಡೆದಿದ್ದು, ಕೆಲವೆ ದಿನಗಳಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಇದೆಲ್ಲವನ್ನೂ ಮನಗಂಡು ಇನ್ನೂ ಕಾಲ ಮಿಂಚಿಲ್ಲ ಎಂಬಂತೆ ಇದಕ್ಕೊಂದು ಶಾಶ್ವತ ಪರಿಹಾರ ನೀಡುವಂತೆ ನಗರದ ಹಲವು ಸಂಘ ಸಂಸ್ಥೆಗಳು ಆಗ್ರಹಿಸಿದ್ದು, ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಈ ಎಲ್ಲರಿಗೂ ವಿನಂತಿ ಮಾಡಿಕೊಳ್ಳಲಾಗಿದೆ. ಇದನ್ನು ಗಮನಿಸಿ ಇದಕ್ಕೊಂದು ಮಾರ್ಪಾಡು ತರುವ ವ್ಯವಸ್ಥೆ ಜರೂರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








