ಶಿರಾ
ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಉಭಯ ಪಕ್ಷದ ಅಭ್ಯರ್ಥಿಗಳು ಮತ ಸಮರ ನಡೆಸಿದ್ದು ಈ ಎಲ್ಲಾ ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳು ಬಹುಮತಗಳಿಂದ ಗೆಲ್ಲುವುದು ಖಚಿತವಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತ-ಮುಖಂಡರು ಪ್ರಾಮಾಣಿಕವಾಗಿ ಚುನಾವಣೆ ಮಾಡುವುದು ಅಗತ್ಯ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಮಂಗಳವಾರ ತಮ್ಮ ಶಿರಾ ನಿವಾಸದಲ್ಲಿ ಕೈಗೊಳ್ಳಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಳೆದ 10 ತಿಂಗಳ ಹಿಂದೆಯಷ್ಟೆ ಜೆಡಿಎಸ್ ಪಕ್ಷದೊಂದಿಗೆ ಸಮರ ಸಾರಿದ್ದ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ ದೋಸ್ತಿ ಸರ್ಕಾರಕ್ಕೆ ಅಡಿ ಇಟ್ಟಿದ್ದು ದೇಶದ ಹಿತ ದೃಷ್ಟಿಯಿಂದ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಕೋಮುವಾದಿ ಬಿಜೆಪಿಯನ್ನು ಹತ್ತಿಕ್ಕಲು ಸಂಸತ್ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‍ನೊಂದಿಗೆ ಕೈಜೋಡಿಸಲಾಗಿದೆ. ರಾಹುಲ್‍ಗಾಂಧಿ ಹಾಗೂ ದೇವೇಗೌಡರು ಕೈಗೊಂಡ ನಿರ್ಣಯದಂತೆ ಈ ಚುನಾವಣೆ ಮಹತ್ವದ ಚುನಾವಣೆಯೂ ಆಗಿದೆ ಎಂದರು.
ರಾಜ್ಯದಲ್ಲಿ ಉಭಯ ಪಕ್ಷಗಳ ದೋಸ್ತಿ ಸರ್ಕಾರ ರಾಜ್ಯದ ಅಭಿವೃದ್ಧಿಯ ಬಗ್ಗೆ ವ್ಯಾಪಕ ಕಾಳಜಿ ವಹಿಸಿದೆ. ಸಿದ್ಧರಾಮಯ್ಯನವರ ಸರ್ಕಾರವಿದ್ದಾಗ ಅನುಷ್ಠಾನಗೊಂಡ ಯೋಜನೆಗಳನ್ನೂ ಸೇರಿಸಿಕೊಂಡು ನೂತನ ಯೋಜನೆಗಳನ್ನು ವಿಲೀನಗೊಳಿಸಿಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಾಜ್ಯದ ರೈತರ ಹಿತ ಕಾಯ್ದಿದೆ. ಶಿರಾ ಕ್ಷೇತ್ರದಲ್ಲಿ ನಾನು ಸೋತೆ ಎಂಬ ಕಾರಣಕ್ಕೆ ಸುಮ್ಮನೆ ಕುಳಿತಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಇರುವ ನನ್ನ ಆಸಕ್ತಿ ಎಂದಿಗೂ ಕುಂದುವುದಿಲ್ಲ ಎಂದರು.
ಕಳೆದ 41 ವರ್ಷಗಳಿಂದಲೂ ನಾನು ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ. ವಿರೋಧ ಪಕ್ಷಗಳಲ್ಲಿದ್ದರೂ ಎಚ್.ಡಿ.ದೇವೆಗೌಡರೊಟ್ಟಿಗೆ ಸೇರಿಕೊಂಡು ನೀರಾವರಿ ಯೋಜನೆಗಳ ಬಗ್ಗೆ ಅದರ ಆಳ ಅರಿವುಗಳ ಬಗ್ಗೆ ತಿಳಿದಿದ್ದೇನೆ. ತುಮಕೂರಿಗೆ ಹೇಮಾವತಿ ನೀರು ಹರಿಸುವ ಸಂಬಂಧ ಎಲ್ಲೂ ಕೂಡ ದೇವೆಗೌಡರ ವಿರೋಧವಿರಲಿಲ್ಲ. ನೀರು ಹರಿಸಿಕೊಳ್ಳಲು ಹಾಸನ, ಮಂಡ್ಯ ಶಾಸಕರು ವಿರೋಧ ವ್ಯಕ್ತಪಡಿಸಿದಾಗಲೂ ನಾನು ಜಿಲ್ಲೆಗೆ ಹೇಮಾವತಿ ಹರಿಸಿಕೊಳ್ಳಲು ಶತಾಯಗತಾಯ ಹೋರಾಡಿದ್ದೇನೆ ಎಂದರು.
ಚಿತ್ರದುರ್ಗ ಕ್ಷೇತ್ರದಲ್ಲಿ ಉಭಯ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಚಂದ್ರಪ್ಪ ಅವರು ಸ್ಪರ್ಧಿಸಿದ್ದು ಎರಡೂ ಪಕ್ಷಗಳ ಕಾರ್ಯಕರ್ತರು ಪ್ರಾಮಾಣಿಕವಾಗಿ ಮತ ಯಾಚನೆ ಮಾಡಬೇಕಿದೆ. ಸರಳ, ಸಜ್ಜನ ರಾಜಕಾರಣಿಯಾದ ಚಂದ್ರಪ್ಪ ಅವರು ಬಹುಮತಗಳಿಂದ ಆಯ್ಕೆಯಾಗುವುದು ಖಚಿತ ಎಂದರು.
ಕಾರ್ಮಿಕ ಸಚಿವ ವೆಂಕಟರವಣಪ್ಪ ಮಾತನಾಡಿ, ಈ ಹಿಂದೆ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾಗ ನಾನೂ ಕೂಡ ಒಂದೆರಡು ದಿನ ಮಂತ್ರಿಯಾಗಿದ್ದೆ. ಇವರ ಮಾರ್ಮಿಕ ಕಥೆಗಳನ್ನು ಕಂಡು ಹೊರ ಬಂದುಬಿಟ್ಟೆ. ಇಲ್ಲಾಂದ್ರೆ ನಾನೂ ಕೂಡ ಇವರೊಟ್ಟಿಗೆ ಜೈಲಿಗೆ ಹೋಗಬೇಕಿತ್ತು ಎಂದು ಪರೋಕ್ಷವಾಗಿ ಯಡಿಯೂರಪ್ಪನವರನ್ನು ಕುಟುಕಿದರು.
ದೇಶದಲ್ಲಿನ ಯಾವ ಮುಖ್ಯಮಂತ್ರಿಗಳೂ ಮಾಡಿದ ತಪ್ಪಿಗೆ ಜೈಲಿಗೆ ಹೋದ ನಿದರ್ಶನಗಳಿಲ್ಲ. ಆದರೆ, ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಕೆಲ ಪ್ರಮುಖರು ಜೈಲಿಗೂ ಹೋಗಿ ಬಂದ್ರು. ಅವರೊಟ್ಟಿಗೆ ಸೇರಿಕೊಂಡ್ರೆ ಜೈಲು ಖಚಿತ ಎಂಬುದು ನನಗೆ ಅರ್ಥವಾಗಿದೆ. ಕೋಮುವಾದಿಗಳನ್ನು ದೂರವಿಡುವ ಕೆಲಸ ನಡೆಯಬೇಕಿದೆ.
ಚಂದ್ರಪ್ಪ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದರು.ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಶಾಸಕ ಸಾ.ಲಿಂಗಯ್ಯ, ಚಿತ್ರದುರ್ಗ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಯಶೋಧರ, ಶಾಸಕ ರಘುಮೂರ್ತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ನಟರಾಜ್ ಬರಗೂರು, ನಗರಸಭೆಯ ಮಾಜಿ ಅಧ್ಯಕ್ಷ ಅಮಾನುಲ್ಲಾಖಾನ್, ಗುಳಿಗೇನಹಳ್ಳಿ ನಾಗರಾಜು, ಎಸ್.ಎನ್.ಕೃಷ್ಣಯ್ಯ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸತ್ಯನಾರಾಯಣ್, ಹಲಗುಂಡೇಗೌಡ, ಅಬ್ದುಲ್ಲಾಖಾನ್, ಜಿ.ಎಸ್.ರವಿ, ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಗುರುಮೂರ್ತಿ, ಮದ್ದಕ್ಕನಹಳ್ಳಿ ಶ್ರೀನಿವಾಸ್, ಡಿ.ಸಿ.ಅಶೋಕ್, ನೂರುದ್ಧೀನ್, ಬಾಂಬೆ ರಾಜಣ್ಣ, ಹೆಚ್.ಎಲ್.ರಂಗನಾಥ್, ಎಸ್.ಜೆ.ರಾಜಣ್ಣ, ಪಿ.ಬಿ.ನರಸಿಂಹಯ್ಯ, ಕೋಟೆ ಲೋಕೇಶ್ ಮುಂತಾದವರು ಹಾಜರಿದ್ದರು.