ಚಳ್ಳಕೆರೆ
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದ್ದು, ರಾಷ್ಟ್ರದ ಹಿತದೃಷ್ಠಿಯಿಂದ ನಾಡಿನ ಮತದಾರರು ಈಗಾಗಲೇ ಭಾರತೀಯ ಜನತಾ ಪಕ್ಷವನ್ನು ಬಹುತೇಕ ಕ್ಷೇತ್ರಗಳಲ್ಲಿ ಆಯ್ಕೆ ಮಾಡುವ ವಿಶ್ವಾಸ ಹೊಂದಿದ್ಧಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಕೇವಲ ಮೈತ್ರಿ ಕೂಟದ ಹಿನ್ನೆಲೆಯಲ್ಲಿ ಎರಡ್ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತಗೊಂಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ತಿಳಿಸಿದರು.
ಅವರು, ಬುಧವಾರ ಚಿತ್ರದುರ್ಗದಿಂದ ಬಳ್ಳಾರಿಗೆ ತೆರಳುವ ಮಾರ್ಗಮದ್ಯದಲ್ಲಿ ಇಲ್ಲಿನ ಪಕ್ಷದ ಕಾರ್ಯಾಲಯಕ್ಕೆ ಭೇಟಿ ನೀಡಿ ಪಕ್ಷದ ಪ್ರಮುಖ ಕಾರ್ಯಕರ್ತರೊಂದಿಗೆ ಚುನಾವಣಾ ಸಿದ್ದತೆಗಳ ಬಗ್ಗೆ ಮುಕ್ತ ಚರ್ಚೆ ನಡೆಸಿದರು. ಪಕ್ಷದ ಅಭ್ಯರ್ಥಿ ಎ.ನಾರಾಯಣಸ್ವಾಮಿ ಸಮರ್ಥನಾಯಕರಿದ್ದು, ಪರಿಶಿಷ್ಟ ಜಾತಿಯ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿದ್ಧಾರೆ. ಅವರ ಆಯ್ಕೆ ಈ ಕ್ಷೇತ್ರದಿಂದ ಬಹುತೇಕ ಖಚಿತವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ನಿರೀಕ್ಷಿತ ಮತಗಳು ಬಂದಿಲ್ಲ. ಈ ಬಾರಿ ಇನ್ನೂ ಹೆಚ್ಚಿನ ಮತಪಡೆಯುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಭೂತ್ ಮಟ್ಟದ ಕಾರ್ಯಕರ್ತರು, ಮಹಾಶಕ್ತಿ ಕೇಂದ್ರಗಳ ಎಲ್ಲಾ ಮುಖಂಡರು ಇನ್ನೂ 15 ದಿನಗಳ ಕಾಲ ಪಕ್ಷದ ವಿಜಯದ ಸಂಕಲ್ಪವನ್ನು ಮಾಡಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.
ರಾಜ್ಯದ 28 ಲೋಕಸಭಾ ಕ್ಷೇತ್ರದ 14 ಕ್ಷೇತ್ರಗಳಿಗೆ ಏ.18ರಂದು ಚುನಾವಣೆ ನಡೆಯಲಿದ್ದು, ಪ್ರಥಮಹಂತದಲ್ಲಿ ಚಿತ್ರದುರ್ಗ ಲೋಕಸಭಾ ಚುನಾವಣೆ ಇದ್ದು, ಪ್ರಧಾನ ಮಂತ್ರಿ ನರೇಂದ್ರಮೋದಿ ಈ ಬಾರಿಯ ಲೋಕಸಭಾ ಚುನಾವಣಾ ಪ್ರಚಾರವನ್ನು ಚಿತ್ರದುರ್ಗ ಕ್ಷೇತ್ರದಿಂದಲೇ ಆರಂಭ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಛಲದೊಂದಿಗೆ ಎಲ್ಲಾ ಕಾರ್ಯಕರ್ತರು, ಮುಖಂಡರು ಕಾರ್ಯನಿರ್ವಹಿಸಬೇಕೆಂದರು.
ಈಗಾಗಲೇ ನರೇಂದ್ರಮೋದಿಯವರ ಜನಪರ ಯೋಜನೆಗಳ ಬಗ್ಗೆ ಹಲವಾರು ಹಂತಗಳಲ್ಲಿ ಜಾಗೃತಿಯನ್ನು ಮೂಡಿಸಲಾಗಿದ್ದು, ಪಕ್ಷದ ಕಾರ್ಯಕರ್ತರು ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಯಶಸ್ಸಿಯಾಗಿ ಕಾರ್ಯನಿರ್ವಹಸಿದಲ್ಲಿ ಈ ಕ್ಷೇತ್ರದಲ್ಲಿ ಜಯಸಾಧಿಸಲು ಸಾಧ್ಯವಾಗುತ್ತದೆ. ನಿಮ್ಮೆಲ್ಲರ ಆತ್ಮವಿಶ್ವಾಸ ಹಾಗೂ ನಂಬಿಕೆಗೆ ಅನುಗುಣವಾಗಿ ಪಕ್ಷದ ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡುವ ನಿಟ್ಟಿನಲ್ಲಿ ಚಿಂತನೆ ಮಾಡಲಿದೆ ಎಂದರು.
ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಮಾತನಾಡಿ, ಈ ಕ್ಷೇತ್ರದಿಂದ ಹೆಚ್ಚಿನ ಮತಗಳಿಸುವಂತೆ ನಮ್ಮ ಪಕ್ಷದ ಹಿರಿಯ ಮುಖಂಡರು ನಿರ್ದೇಶನ ನೀಡಿದ್ದು, ಒಂದೆರಡು ದಿನಗಳಲ್ಲಿ ಪ್ರಚಾರ ಕಾರ್ಯ ಆರಂಭಿಸುವ ಭರವಸೆ ನೀಡಿದರು. ಈಗಾಗಲೇ ಏ.8ರಂದು ಚಿತ್ರದುರ್ಗಕ್ಕೆ ಆಗಮಿಸುವ ಪ್ರಧಾನಿಗಳ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಯೋಜನೆಯನ್ನು ಸಿದ್ದ ಪಡಿಸಿದ್ದು, ಈ ಬಾರಿ ಈ ಕ್ಷೇತ್ರದಿಂದ ಬಿಜೆಪಿ ಹೆಚ್ಚು ಮತಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಭರವಸೆ ನೀಡಿದರು.
ಬಿಜೆಪಿ ಮುಖಂಡ ಎಂ.ಎಸ್.ಜಯರಾಮ್, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ನಗರಸಭಾ ಸದಸ್ಯ ಎಸ್.ಜಯಣ್ಣ, ಚುನಾವಣಾ ಪ್ರಭಾರಿ ಟಿ.ಬೋರನಾಯಕ, ವಿಜಯೇಂದ್ರ, ಡಿ.ಎಂ.ತಿಪ್ಪೇಸ್ವಾಮಿ, ಟಿ.ಮಂಜುನಾಥ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್, ಹೊಟ್ಟೆಪ್ಪನಹಳ್ಳಿ ಮಂಜುನಾಥ, ಕರೀಕೆರೆ ತಿಪ್ಪೇಸ್ವಾಮಿ, ಮಂಜುನಾಥರೆಡ್ಡಿ, ಡಿ.ಕೆ.ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
