ಬೆಂಗಳೂರು
ರಾಜ್ಯದಲ್ಲಿ ನಡೆಯುತ್ತಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮತ್ತಷ್ಟು ಗಟ್ಟಿಯಾಗಿದೆ. ದೋಸ್ತಿ ಸರ್ಕಾರ ಇನ್ನಷ್ಟು ಭದ್ರವಾಗಿದೆ.
ಚುನಾವಣೆಯಲ್ಲಿ ಸೀಟುಗಳ ಹಂಚಿಕೆ, ಅಭ್ಯರ್ಥಿಗಳ ಆಯ್ಕೆ, ಕೊಟ್ಟು ಕಳೆದುಕೊಳ್ಳುವ ತ್ಯಾಗ ಧೋರಣೆ, ಚುನಾವಣಾ ತಂತ್ರಗಾರಿಕೆಗೆ ಮೈತ್ರಿ ಪಕ್ಷಗಳ ಹಿರಿಯ ನಾಯಕರಿಂದ ಕಂಡು ಬರುತ್ತಿರುವ ಉತ್ಸಾಹ ಇದಕ್ಕೆ ಪುಷ್ಠಿ ನೀಡುತ್ತದೆ. ಮುಂಬರುವ ಲೋಕಸಭಾ ಚುನಾವಣೆಗೆ ಇದು ಪೂರ್ವ ತಯಾರಿಯಂತಿದೆ. ಈ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಒಗ್ಗಟ್ಟಿನ ಪ್ರದರ್ಶನವಾಗುತ್ತಿದ್ದು, ಮುಂದಿನ ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸುತ್ತೇವೆ ಎಂಬ ಸಂದೇಶವನ್ನು ಕೇಂದ್ರ ಬಿಜೆಪಿ ನಾಯಕರಿಗೆ ರವಾನಿಸಲು ಸಿದ್ಧತೆ ನಡೆಸಿದ್ದಾರೆ.
ಉಪಚುನಾವಣೆ ಫಲಿತಾಂಶ ಸಮ್ಮಿಶ್ರ ಸರ್ಕಾರದ ಸಾಧನೆಯ ಅಳತೆಗೋಲಾಗುವ ಜತೆಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಪವಿತ್ರವೋ, ಅಪವಿತ್ರವೋ ಎಂಬುದನ್ನು ನಿರ್ಧರಿಸುತ್ತದೆ. ಅಪವಿತ್ರ ಮೈತ್ರಿ ಎನ್ನುವವರಿಗೆ ಈ ಚುನಾವಣೆ ಉತ್ತರ ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಬಹಿರಂಗವಾಗಿ ಹೇಳಿರುವುದು ಮೈತ್ರಿ ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.
ಈ ಚುನಾವಣೆ ಹಲವು ಸಂಪ್ರದಾಯಕ ಎದುರಾಳಿಗಳನ್ನು ಹತ್ತಿರಕ್ಕೆ ಪರಸ್ಪರ ಹತ್ತಿರಕ್ಕೆ ತರುತ್ತಿದೆ. ಜೆಡಿಎಸ್ ನಾಯಕರಿಗೆ ಅಪಥ್ಯವಾಗಿರುವ ವಿ.ಎಸ್. ಉಗ್ರಪ್ಪ ಅವರನ್ನು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಿಸಿದೆ. ಅಪ್ಪ ಮಕ್ಕಳು ಎಂದು ಉಗ್ರವಾಗಿ ಟೀಕಿಸುತ್ತಿದ್ದ ಉಗ್ರಪ್ಪ ಪರವಾಗಿ ಇದೀಗ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಪ್ರಚಾರ ನಡೆಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಇದೀಗ ರಾಮನಗರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಪತ್ನಿ ಅನಿತಾ ಕುಮಾರ ಸ್ವಾಮಿ ಪರವಾಗಿ ಪ್ರಚಾರ ನಡೆಸಬೇಕಾಗಿದೆ.
ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದ ಡಿ.ಕೆ. ಶಿವಕುಮಾರ್‍ಗೆ ತಮ್ಮ ಪರಮಾಪ್ತ ವಿ.ಎಸ್. ಉಗ್ರಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಟಿಕೆಟ್‍ಗಾಗಿ ಪೈಪೋಟಿ ನಡೆಸುತ್ತಿದ್ದ ಎರಡೂ ಬಣದ ಶಾಸಕರನ್ನು ಸಮಾಧಾನಪಡಿಸುವ ಜತೆಗೆ ತಮ್ಮವರಿಗೆ ಟಿಕೆಟ್ ನೀಡಬೇಕು ಎನ್ನುತ್ತಿದ್ದ ರಮೇಶ್ ಜಾರಕಿಹೊಳಿ ಬಣವನ್ನು ಸಂತೈಸಿದ್ದಾರೆ. ಇದೀಗ ಉಗ್ರಪ್ಪ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಸಹ ಡಿ.ಕೆ.ಶಿವಕುಮಾರ್ ಹೆಗಲಿಗೆ ಬಿದ್ದಿದೆ. ಹೀಗೆ ಒಂದಕ್ಕೊಂದು ಕರುಳಬಳ್ಳಿ ಸಂಬಂಧ ಬೆಸೆದುಕೊಂಡಿದೆ.
ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಐದು ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದಾಗಿ ದೇವೇಗೌಡರು ಈಗಾಗಲೇ ಘೋಷಿಸಿದ್ದಾರೆ. ಈ ಉಪಚುನಾವಣೆ ಮೈತ್ರಿ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್, ಕಾಂಗ್ರೆಸ್ ಟೊಂಕ ಕಟ್ಟಿ ನಿಂತಿರುವುದು ಎರಡೂ ಪಕ್ಷಗಳ ನಾಯಕರ ಮೇಲ್ನೋಟದ ವರ್ತನೆಗಳು ನಿರೂಪಿಸುತ್ತವೆ.
ಇನ್ನು ಈ ಬಾರಿ ಬಹುತೇಕ ಕ್ಷೇತ್ರಗಳಲ್ಲಿ ಹಿಂದೆಂದೂ ಇಲ್ಲದಷ್ಟು ಕುಟುಂಬ ರಾಜಕಾರಣ ಮೇಳೈಸಿದೆ. ಶಿವಮೊಗ್ಗದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಪಕ್ಷದ ಪರವಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಪುತ್ರ ಮಧು ಬಂಗಾರಪ್ಪ, ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಹಾಗೂ ಜೆಡಿಯುನಿಂದ ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಪುತ್ರ ಮಹಿಮಾ ಪಟೇಲ್ ಕಣದಲ್ಲಿದ್ದಾರೆ.
ರಾಮನಗರದಲ್ಲಿ ಅನಿತಾ ಕುಮಾರ ಸ್ವಾಮಿ, ಬಳ್ಳಾರಿಯಲ್ಲಿ ಶ್ರೀರಾಮುಲು ಸಹೋದರಿ ಜೆ. ಶಾಂತಾ, ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ದೊಡ್ಡಬೋರೇಗೌಡರ ಸೋದರ ಸಂಬಂಧಿ ಡಾ. ಸಿದ್ದರಾಮಯ್ಯ, ಜಮಖಂಡಿ ಶಾಸಕರಾಗಿದ್ದ ಸಿದ್ದುನ್ಯಾಮಾಗೌಡರ ಆನಂದ್ ನ್ಯಾಮಾಗೌಡ ಕಾಂಗ್ರೆಸ್‍ನಿಂದ ಕಣಕ್ಕಿಳಿದಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕುಟುಂಬದ ಹಿನ್ನೆಲೆ ಹೊಂದಿದ್ದು, ಹೀಗಾಗಿ ಕುಟುಂಬ ರಾಜಕಾರಣ ಈ ಬಾರಿಯ ಚುನಾವಣೆ ಪ್ರಮುಖ ವಿಷಯವಲ್ಲ.
ಉಪಚುನಾವಣೆ ಅಖಾಡ ನಿಧಾನವಾಗಿ ರಂಗೇರುತ್ತಿದೆ. ಬಿಜೆಪಿಗೂ ಸಹ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಬಿಜೆಪಿ ಪ್ರಮುಖ ನಾಯಕರಾದ ಈಶ್ವರಪ್ಪ, ಶ್ರೀರಾಮುಲು, ಅಶೋಕ್, ಜಗದೀಶ್‍ಶೆಟ್ಟರ್, ಸದಾನಂದಗೌಡರು ಸಹ ತಮ್ಮ ಸಾಮಥ್ರ್ಯ ಸಾಬೀತುಪಡಿಸುವ ಸಂದಿಗ್ಧತೆಗೆ ಸಿಲುಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
