ಬೆಂಗಳೂರು
ಏಕಾಎಕಿ ನಗರ ಪೊಲೀಸ್ ಆಯುಕ್ತರ ಸ್ಥಾನದಿಂದ ವರ್ಗಾವಣೆ ಮಾಡಿದ್ದ ರಾಜ್ಯಸರ್ಕಾರದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಅಲೋಕ್ ಕುಮಾರ್‍ರವರು ತಮ್ಮ ಅರ್ಜಿಯನ್ನು ದಿಢೀರ್ ವಾಪಸ್ ಪಡೆದುಕೊಂಡಿರುವುದರಿಂದ ಹಾಲಿ ಆಯುಕ್ತ ಭಾಸ್ಕರರಾವ್ ನಿರಾಳರಾಗಿದ್ದಾರೆ
ಕೇವಲ 45 ದಿನಗಳಿಗೆ ತಮ್ಮನ್ನು ವರ್ಗಾವಣೆ ಮಾಡಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಿಐಟಿಗೆ ಅರ್ಜಿ ಸಲ್ಲಿಸಿದ್ದ ಅಲೋಕ್ ಕುಮಾರ್‍ರವರು ಕಳೆದ ಬುಧವಾರ ನಡೆದ ವಿಚಾರಣೆಯಲ್ಲಿ ತಾವೇ ಖುದ್ದು ಹಾಜರಾಗಿದ್ದರು.ಅಂದು ಅಡ್ವೋಕೇಟ್ ಜನರಲ್ ವಾದ ಮಂಡಿಸಲು ಕಾಲಾವಕಾಶವನ್ನು ನೀಡುವಂತೆ ಸರ್ಕಾರದ ಪರ ವಕೀಲರು ಕೇಳಿದ್ದರಿಂದ ಶುಕ್ರವಾರಕ್ಕೆ ವಿಚಾರಣೆ ಮುಂದೂಡಲಾಗಿತ್ತು.
ಸರ್ಕಾರದ ಪರವಾಗಿ ವಾದ ಮಂಡಿಸಲು ಶುಕ್ರವಾರ ಸಿಐಟಿ ಮುಂದೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಹಾಜರಾಗಿದ್ದರು. ಆದರೆ, ವರ್ಗಾವಣೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅಲೋಕ್ ಕುಮಾರ್‍ರವರು, ತಮ್ಮ ಅರ್ಜಿಯನ್ನು ವಕೀಲರ ಮೂಲಕ ಹಿಂಪಡೆದುಕೊಂಡಿದ್ದರಿಂದ ವಿಚಾರಣೆಯನ್ನು ಅಂತ್ಯಗೊಳಿಸಲಾಗಿದೆ.
ಇದರಿಂದ ಹಾಲಿ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ನಿಟ್ಟುಸಿರುವ ಬಿಡುವಂತಾಗಿದೆ.ತಾವು ನಗರ ಪೊಲೀಸ್ ಆಯುಕ್ತರಾಗಿದ್ದ ವೇಳೆ ಫೋನ್ ಕದ್ದಾಲಿಕೆ ನಡೆದಿದ್ದು, ಅದರಲ್ಲಿ ತಮ್ಮ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಲೋಕ್ ಕುಮಾರ್,ದಿಢೀರನೇ ಅರ್ಜಿ ವಾಪಸ್ ತೆಗೆದುಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








