ಬೆಂಗಳೂರು
ಅಪ್ರಾಪ್ತ ಹುಡುಗನೊಬ್ಬ ನಕಲಿ ಖಾತೆಯೊಂದರ ವಂಚನೆ ಜಾಲಕ್ಕೆ ಸಿಲುಕಿ ನಗ್ನ ಪೋಟೋ ಕಳುಹಿಸಿ ಮನೆಯಿಂದ ಚಿನ್ನ,ಬೆಳ್ಳಿ ಅಲ್ಲದೇ ಬರೋಬ್ಬರಿ 6.4 ಲಕ್ಷ ರೂಪಾಯಿ ಕಳವು ಮಾಡಿ ದುಷ್ಕರ್ಮಿಗಳಿಗೆ ನೀಡಿದ್ದಾನೆ.
ನಕಲಿ ಖಾತೆಯೊಂದರ ವಂಚನೆ ಜಾಲಕ್ಕೆ ಸಿಲುಕಿದ ಆರೋಪಿ ಹುಡುಗನಿಗೆ ಎರಡು ತಿಂಗಳಿಂದ ಬ್ಲಾಕ್ ಮೇಲ್ ಮಾಡುತ್ತಿದ್ದು ಇದನ್ನು ತಿಳಿದು ಪೋಷಕರು ದುಷ್ಕರ್ಮಿಗಳ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದುಷ್ಕರ್ಮಿಗಳು ಇನ್ ಸ್ಟಾಗ್ರಂನಲ್ಲಿ ಹುಡುಗಿಯ ಹೆಸರಿನಲ್ಲಿ ಖಾತೆ ತೆರೆದಿದ್ದು 17 ವರ್ಷದ ಅಪ್ರಾಪ್ತ ಹುಡುಗನನ್ನು ಪರಿಚಯ ಮಾಡಿಕೊಂಡಿದ್ದಾರೆ ದಿನ ಕಳೆದಂತೆ ಇನ್ ಸ್ಟಾಗ್ರಾಂನಲ್ಲಿ ಚಾಟಿಂಗ್ ಶುರು ಮಾಡಿ ಸ್ನೇಹಿತರಾಗಿದ್ದಾರೆ.
ಬಳಿಕ ನಕಲಿ ಖಾತೆಯ ಮೂಕಲವೇ ಆರೋಪಿ ಹುಡುಗನ ನಗ್ನ ಫೋಟೋವನ್ನು ಕಳುಹಿಸುವಂತೆ ಕೇಳಿದ್ದಾರೆ. ಹುಡುಗ ಕೂಡ ಆಕೆಯನ್ನು ಹುಡುಗಿ ಎಂದು ನಂಬಿಕೊಂಡು ಇನ್ ಸ್ಟಾಗ್ರಾಂನಲ್ಲಿ ತನ್ನ ಬೆತ್ತಲೆ ಫೋಟೋವನ್ನು ಹಂಚಿಕೊಂಡಿದ್ದಾನೆ.ಹುಡುಗನ ನಗ್ನ ಫೋಟೋ ಸಿಗುತ್ತಿದ್ದಂತೆ ಇನ್ನೊಂದು ಇನ್ ಸ್ಟಾಗ್ರಾಂ ಖಾತೆಯನ್ನು ತೆರೆದು ಹುಡುಗನಿಗೆ ಹಣ ಕೊಡುವಂತೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದಾರೆ.
ದುಷ್ಕರ್ಮಿಗಳು ಬರೋಬ್ಬರಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಒಂದು ವೇಳೆ ಹಣ ಕೊಡಲಿಲ್ಲ ಎಂದರೆ ಸಾಮಾಜಿಕ ಜಾಲತಾಣದಲ್ಲಿ ನಗ್ನ ಫೋಟೋ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆದರಿ ಕಳವು
ಭಯದಿಂದ ಹುಡುಗ ಮನೆಯಲ್ಲಿದ್ದ ಮೌಲ್ಯವಾದ ವಸ್ತುಗಳನ್ನು ಕಳವು ಮಾಡಲು ಶುರು ಮಾಡಿದ್ದಾನೆ. ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಹುಡುಗ ತನ್ನ ತಂದೆಗೆ ನಡೆದ ಎಲ್ಲ ಘಟನೆಯನ್ನು ವಿವರಿಸಿದ್ದು, ತಕ್ಷಣ ತಂದೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.
6.4 ಲಕ್ಷ ನಗದು ಹಾಗೂ 17 ಬೆಳ್ಳಿ ವಸ್ತುಗಳನ್ನು ಮನೆಯಿಂದ ಮಗ ಕಳವು ಮಾಡಿದ್ದನು ಎಂದು ತಿಳಿದು ಬಂದಿದೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
