ಅಮವಾಸ್ಯೆ ಧರ್ಮಸಭೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

ಹೊನ್ನಾಳಿ:

      ಯಾವ ಕೃತಿಯು ಓದಿಕೊಂಡು ಹೋಗುವಂತೆ ಎಲ್ಲರನ್ನು ಪ್ರೇರೇಪಿಸುತ್ತದೆಯೋ ಅಂತಹ ಕೃತಿ ನೈಜ ಬದುಕಿನ ಕೈಗನ್ನಡಿಯಾಗಿ ಹೆಚ್ಚು ಕಾಲ ಜನಮಾನಸದಲ್ಲಿ ಉಳಿಯಲು ಸಾಧ್ಯವಾಗುತ್ತದೆ ಎಂದು ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಹಿರೇಕಲ್ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಮವಾಸ್ಯೆ ಧರ್ಮಸಭೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

      ಬರಹಗಾರರು ಕಾಟಾಚಾರಕ್ಕೆ ಬರೆಯದೆ ಅಥವಾ ಬೇರೆಯವರ ಕೃತಿಚೌರ್ಯ ಮಾಡದೇ ಸ್ವ ಸಾಹಿತ್ಯ ಆಸಕ್ತಿ ಬೆಳೆಸಿಕೊಂಡು ಆಳವಾದ ಜ್ಞಾನ ಹೊಂದಿ ಕತೆ, ಕವನ, ಚುಟುಕು ಬರೆದರೆ ಅದಕ್ಕೊಂದು ಅರ್ಥವಿರುತ್ತದೆ ಎಂದು ತಿಳಿಸಿದರು.

      ಎಲ್ಲರೂ ಕವಿಗಳಾಗಲು, ಕಲಾವಿದರಾಗಲು ಸಾಧ್ಯವಿಲ್ಲ. ಓದಿನಲ್ಲಿ ಆಸಕ್ತಿ ಇರುವ, ಅಪಾರ ಜ್ಞಾನ ಹೊಂದಿರುವರು ಮಾತ್ರ ಸಾಹಿತ್ಯ, ಕಲಾ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯ ಎಂದ ಅವರು, ಎಲ್ಲರೂ ಬರೆಯುತ್ತಾರೆ ನಾನೂ ಬರೆಯುತ್ತೇನೆ ಎಂದರೆ ಅಂಥವನ ಸ್ಥಿತಿ “ಕಂಡೋರ್ ಕಂಡು ಕವದಿ ಹೊಲಿದ್ರೆ ದಾಟು ಹೊಲಿಗೆ ಬೀಳುತ್ತದೆ” ಎನ್ನುವ ನಾಣ್ಣುಡಿಯಂತೆ ಆಗುತ್ತದೆ ಎಂದು ಕೆಲ ಸ್ವ ಘೋಷಿತ ಕವಿಗಳಿಗೆ ಕಿವಿ ಮಾತು ಹೇಳಿದರು.

     ಇದೇ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪನವರ “ನಾ ಕಂಡ ಕನಸು” ಕೃತಿ ಬಿಡುಗಡೆ ಮಾಡಲಾಯಿತು.
ಸಾಹಿತಿ ಯು.ಎನ್. ಸಂಗನಾಳಮಠ ಮಾತನಾಡಿ, ನಾ ಕಂಡ ಕನಸು ಕೃತಿಕಾರರಾಗಿರುವ ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪನವರು ತಮ್ಮ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ವಿಷಯವಾಗಿ ಕೃತಿ ರಚಿಸಿದ್ದಾರೆ. ಕೃತಿಯ ಪೂರ್ವಾರ್ಧದಲ್ಲಿ ಲೇಖಕರ ಬಾಲ್ಯ, ವೈವಾಹಿಕ ಜೀವನ, ಸಂಸಾರದ ಸುಖ-ದುಃಖಗಳ ಹೂರಣವಿದೆ. ಉತ್ತರಾರ್ಧದಲ್ಲಿ ತಮ್ಮ ಪತ್ನಿ ದಿ. ಲಲಿತಮ್ಮ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ಪತ್ನಿ ಸ್ವರ್ಗದಲ್ಲಿ ಸುಖವಾಗಿದ್ದಾರೆ ಎಂಬ ವಿಷಯವಾಗಿ ಕನಸಲ್ಲಿ ಕಂಡ ಅಲ್ಪ ದೃಶ್ಯದ ವಿಷಯ ವಿಸ್ತರಿಸಿ 32 ಪುಟಗಳಲ್ಲಿ ಓದುಗರಿಗೆ ಅರ್ಪಿಸಿದ್ದಾರೆ ಎಂದು ವಿವರಿಸಿದರು.

       ತಾಲೂಕು ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ ಮಾತನಾಡಿ, 4 ಜನರ ಅಜೀವ ಸದಸ್ಯತ್ವದಿಂದ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಇದೀಗ 4 ಲಕ್ಷ ಸದಸ್ಯರನ್ನು ಹೊಂದಿದೆ. 104 ವರ್ಷಗಳ ಭವ್ಯ ಇತಿಹಾಸ ಹೊಂದಿದ ಪರಿಷತ್ತು 6 ಕೋಟಿ ಕನ್ನಡಿಗರನ್ನು ಹತೋಟಿಗೆ ತರುವ ಸಾಂಸ್ಕೃತಿಕ ಸಂಸ್ಥೆಯಾಗಿ ರೂಪುಗೊಂಡಿದೆ ಎಂದು ಹೇಳಿದರು.

     ಹಿರೇಕಲ್ಮಠದಲ್ಲಿ ಚನ್ನಚೇತನ ಪ್ರಕಾಶನವಿದ್ದು, ಅದರಡಿಯಲ್ಲಿ ಅನೇಕ ಗ್ರಂಥಗಳು ಪ್ರಕಟವಾಗುವುದರ ಮೂಲಕ ಹೆಚ್ಚು ಕೃತಿಗಳನ್ನು ಹೊರತರುವಲ್ಲಿ ಸಹಕಾರಿಯಾಗಿದೆ ಎಂದರು.ಕೋರಿ ಗುರುಲಿಂಗಪ್ಪ, ಕೋರಿ ಶಶಿಕಲಾ, ಕಸಾಪ ಮಾಜಿ ಅಧ್ಯಕ್ಷ ಕೆ. ರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link