ಹೊನ್ನಾಳಿ:
ಭಕ್ತರ ಕಲ್ಯಾಣಕ್ಕಾಗಿ ಮಠ-ಮಾನ್ಯಗಳಲ್ಲಿ ವಿವಿಧ ಧಾರ್ಮಿಕ ಸಭೆ-ಸಮಾರಂಭಗಳನ್ನು ಆಯೋಜಿಸಲಾಗುತ್ತಿದ್ದು, ಇವುಗಳಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಇಲ್ಲಿನ ಹಿರೇಕಲ್ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಛಟ್ಟಿ ಅಮಾವಾಸ್ಯೆ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯ ತನ್ನ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಬದುಕಿನುದ್ದಕ್ಕೂ ಹೋರಾಟ ನಡೆಸುತ್ತಾನೆ. ಧನ-ಧಾನ್ಯ ಸಂಪಾದನೆಯ ಭರದಲ್ಲಿ ದೇವರು-ಧರ್ಮ, ಮಠ-ಮಾನ್ಯಗಳು, ಗುರು-ಹಿರಿಯರನ್ನು ಮರೆಯುತ್ತಾನೆ. ಆದರೆ, ಒಮ್ಮೆಲೇ ಬದುಕಿನಲ್ಲಿ ಅವಘಡಗಳು ಸಂಭವಿಸಲು ಪ್ರಾರಂಭವಾದಾಗ ಆತನಿಗೆ ದೇವರ ನೆನಪಾಗುತ್ತದೆ. ಹೀಗೆ, ಸಂಕಟ ಬಂದಾಗ ದೇವರನ್ನು ನೆನೆಯುವ ಬದಲು ಸದಾ ಭಗವಂತನ ಸ್ಮರಣೆಯಲ್ಲಿ ತೊಡಗಬೇಕು.
ತನ್ನ ಜೀವಿತದ ಕೊನೆಯ ಅವಧಿಯನ್ನು ದೇವರ ಸನ್ನಿಧಾನಕ್ಕೆ ತೆರಳುವ ಮೋಕ್ಷ ಸಂಪಾದನೆಗೆ ಮೀಸಲಿಡಬೇಕು. ಮನುಷ್ಯರು ಸದಾ ಒಂದಿಲ್ಲೊಂದು ಕಷ್ಟದಲ್ಲಿ ಸಿಲುಕುವುದು ಸಹಜ ಕಷ್ಟಗಳು ಬಂದಾಗ ಮಾತ್ರ ದೇವರ ಮೊರೆ ಹೋಗದೇ ಸದಾ ಪರಮಾತ್ಮನ ಧ್ಯಾನದೊಂದಿಗೆ ಕಾಯಕದಲ್ಲಿ ತೊಡಗಿದರೆ ಕಷ್ಟಗಳು ಮಂಜುಗಡ್ಡೆಯಂತೆ ಕರಗಿ ಹೋಗುತ್ತವೆ ಎಂದು ವಿವರಿಸಿದರು.
ಮನುಕುಲದ ಒಳಿತಿಗಾಗಿ ಧರ್ಮ ಇರುವುದು. ಎಲ್ಲರೂ ಧರ್ಮದಿಂದ ನಡೆಯುವುದು ಇಂದು ಅವಶ್ಯಕವಾಗಿದೆ. ಶರೀರದ ಸೌಂದರ್ಯ ಶಾಶ್ವತವಲ್ಲ. ಆದರೆ, ಅಧ್ಯಾತ್ಮಿಕತೆಯ ಮಾರ್ಗದಲ್ಲಿ ನಡೆದಾಗ ಮಾತ್ರ ಮನುಷ್ಯನ ಬದುಕು ಹಾಗೂ ವ್ಯಕ್ತಿತ್ವ ಸುಖಮಯವಾಗಿರುತ್ತದೆ. ಹಾಗಾಗಿ, ಮನುಷ್ಯ ಈ ಮಾರ್ಗದಲ್ಲಿ ನಡೆದು ಪುನೀತನಾಗಬೇಕು ಎಂದು ತಿಳಿಸಿದರು.
ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು ಅವರ ಎಲ್ಲಾ ಕಾರ್ಯಕ್ರಮಗಳನ್ನೂ ಮುಂದುವರಿಸಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು 70ರ ದಶಕದಲ್ಲಿ ಹಿರೇಕಲ್ಮಠಕ್ಕೆ ಪಟ್ಟವಾಗಿ ಅಧಿಕಾರ ಸ್ವೀಕರಿಸಿದ ನಂತರ ಅನ್ನ ದಾಸೋಹದೊಂದಿಗೆ ಅಕ್ಷರ ದಾಸೋಹ ಕೈಂಕರ್ಯ ಹಮ್ಮಿಕೊಂಡು ಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಅನೇಕ ಸಂಸ್ಥೆಗಳನ್ನು ತೆರೆದು ಬಡವರ ಪಾಲಿಗೆ ದಾರಿದೀಪವಾದರು ಎಂದು ವಿವರಿಸಿದರು.
ಇಂದು ಅನೇಕರು ಸಂಪಾದನೆಯೊಂದನ್ನೇ ತಮ್ಮ ಬದುಕಿನ ಗುರಿಯನ್ನಾಗಿಸಿಕೊಂಡು ಸಾಗುತ್ತಿದ್ದಾರೆ. ಇದು ಶುದ್ಧ ತಪ್ಪು. ಸಂಪಾದನೆಯೊಂದಿಗೆ ಶಾಂತಿ ಲಭಿಸಲು ದುಡಿದ ಭಾಗದಲ್ಲಿ ಅಲ್ಪ ಪ್ರಮಾಣದ ದಾನ ಮಾಡುವುದನ್ನು ನಾವು ಕಲಿಯಬೇಕಿದೆ ಎಂದು ಹೇಳಿದರು.
ದೇವರು ಹಾಗೂ ಗುರುಗಳನ್ನು ಸ್ಮರಿಸುವ ಗುಣ ನಮ್ಮಲ್ಲಿ ಬೇರೂರಿದಾಗ ಅಧ್ಯಾತ್ಮಿಕ ಚಿಂತನೆಗಳು ಬೆಳೆಯುತ್ತವೆ. ಇದರಿಂದ ಉತ್ತಮ ಭವಿಷ್ಯ ರೂಪಿತವಾಗುತ್ತದೆ ಎಂದರು.
ಶಿವಮೊಗ್ಗ ವರ್ತಕ ಎಸ್.ಎಂ. ಕೊಟ್ರಯ್ಯ, ಬೆಂಗಳೂರಿನ ಕೋರಮಂಗಲದ ಸಿಪಿಐ ಗದ್ದಿಗೆಪ್ಪ, ಕಡದಕಟ್ಟೆ ಸಿದ್ಧಪ್ಪ, ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ, ಬಸವರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
