ತುಮಕೂರು
ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅಕ್ಷರಶಃ ಅನುಸರಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿಯಲ್ಲಿಂದು ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂಬೇಡ್ಕರ್ ತತ್ವಾದರ್ಶಗಳನ್ನು ಓದಿದರಷ್ಟೆ ಸಾಲದು, ಆಚರಣೆಗೆ ತರಬೇಕು ಎಂದರಲ್ಲದೆ ಅಧಿಕಾರಿಗಳು ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಅಂಬೇಡ್ಕರ್ ಅವರ ಮಾರ್ಗದರ್ಶನವನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದರೊಂದಿಗೆ ತಮ್ಮ ಕರ್ತವ್ಯವನ್ನು ಪುನರಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ಬಾಲರಾಜು ಮಾತನಾಡಿ ಅಂಬೇಡ್ಕರ್ ಸಾಗಿ ಬಂದ ದಾರಿಯನ್ನು ಸ್ಮರಿಸಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಾಲಾಜಿ ಮಾತನಾಡಿ ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಕನಕರಾಜು, ವಿವಿಧ ಇಲಾಖೆಗಳ ಅಧಿಕಾರಿ, ನೌಕರರು ಪಾಲ್ಗೊಂಡಿದ್ದರು.