ಹುಳಿಯಾರು
ನಾಡಿನ ನೆಲ ಜಲದ ಮೇಲೆ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗಿದ್ದ ಬದ್ಧತೆ ಇತರೆ ರಾಜಕಾರಣಿಗಳಿಗೆ ಮಾದರಿ ಎಂದು ವಕೀಲ ಪ್ರವೀಣ್ ಕುಮಾರ್ ಅವರು ಅಭಿಪ್ರಾಯಪಟ್ಟರು.
ಹುಳಿಯಾರಿನ ಕೆಂಪೇಗೌಡ ಪತ್ತಿನ ಸಹಕಾರ ಸಂಘದಿಂದ ಏರ್ಪಡಿಸಿದ್ದ ಅಂಬರೀಷ್ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೆಲ-ಜಲ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಅಂಬರೀಷ್ ಅವರು ಅಧಿಕಾರಕ್ಕೆ ಅಂಟಿ ಕೂರದೆ ಸಿಡಿದೇಳುತ್ತಿದ್ದರು. ಇದಕ್ಕೆ ಕಾವೇರಿಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಿದರ್ಶನವಾಗಿದೆ. ಹೀಗೆ ಕಾವೇರಿ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯವಾದಾಗ ರಾಜಕಾರಣಿಗಳು ಪಕ್ಷ-ಜಾತಿ ಬಿಟ್ಟು ರಾಜೀನಾಮೆ ನೀಡಿದ್ದರೆ ಇಷ್ಟೊತ್ತಿಗೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿತ್ತು ಎಂದರು.
ಹಿರಿಯ ವಕೀಲ ಶ್ರೀನಿವಾಸ್ ಮೂರ್ತಿ ಅವರು ಮಾತನಾಡಿ ಅಂಬರೀಷ್ ಅವರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದಲ್ಲದೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರನ್ನು ಜಾತಿಯಲ್ಲಿ ಬಂಧಿಸಿಟ್ಟುಕೊಳ್ಳದೆ ಸಾಧಕರ ಪಟ್ಟಿಯಲ್ಲಿ ಸೇರಿಸಬೇಕು ಎಂದರಲ್ಲದೆ ಅಂಬರೀಷ್ ಅವರು ಮಾತಿನಲ್ಲಿ ಒರಟುತನವಿದ್ದರೂ ಮನಸ್ಸು ಬೆಣ್ಣೆಯಂತ್ತದ್ದು. ಹಾಗಾಗಿಯೇ ಇಡೀ ಚಿತ್ರರಂಗ ಅವರು ಹಾಕಿದ ಗೆರೆ ದಾಟದಂತೆ ಗೌರವಿಸುತ್ತಿತ್ತು ಎಂದರು.
ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಗಂಗಯ್ಯ, ನೇಗಿಲಯೋಗಿ ಸಂಘದ ಡಿ.ವಿ.ಕುಮಾರಸ್ವಾಮಿ, ಸಿದ್ಧನಕಟ್ಟೆ ಎಸ್.ಸತೀಶ್, ಗ್ರಾಪಂ ಸದಸ್ಯ ಗಿರೀಶ್, ಲೋಹಿತ್, ಎ.ಆರ್.ಶಂಕರೇಗೌಡ, ಚೇತನ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ