ತಿಪಟೂರು 

ಭಾರತದ ಬೆನ್ನೆಲುಬಾದ ರೈತರ ನಡುವನ್ನೆ ಮುರಿಯಲು ಹೊರಟಿರುವ ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯದೆ ಹೋದರೆ ಲಾಕ್‍ಡೌನ್ ಅನ್ನು ಮರೆತು ಉಗ್ರ ಹೋರಾಟ ಮಾಡುವುದಾಗಿ ಎ.ಪಿ.ಎಂ.ಸಿ ಅಧ್ಯಕ್ಷ ಮಡೇನೂರು ಲಿಂಗರಾಜು ಎಚ್ಚರಿಸಿದ್ದಾರೆ.
ನಗರದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಷ್ಟು ದಿನ ಎ.ಪಿ.ಎಂ.ಸಿ ಯು ರೈತರಿಗೆ ಜೀವಾಳವಾಗಿದ್ದು, ಈಗ ಅದನ್ನೇ ಕಿತ್ತುಕೊಳ್ಳಲು ಹೊರಟಿದೆ. ಕೇಂದ್ರದ ಸುಗ್ರೀವಾಜ್ಞೆಯ ಪ್ರಕಾರ ರಾಜ್ಯ ಸರ್ಕಾರವು ಮಂಡಿಸಿರುವ ಎ.ಪಿ.ಎಂ.ಸಿ ಕಾಯ್ದೆಯನ್ನು ತಕ್ಷಣವೆ ವಾಪಸ್ ಪಡೆದು ರೈತರ ಹಿತವನ್ನು ಕಾಯಬೇಕು. ಇಲ್ಲದಿದ್ದರೆ ರೈತಪರ ಸಂಘಟನೆಗಳ ಮುಖಾಂತರ ಉಗ್ರಹೋರಾಟ ಮಾಡಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಸಿದರು.
ಎ.ಪಿ.ಎಂ.ಸಿ ಉಪಾಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ, ಈಗಿರುವ ವ್ಯವಸ್ಥೆಯಲ್ಲಿಯೇ ರೈತರಿಗೆ ಅನ್ಯಾಯವಾಗುತ್ತಿತ್ತು. ಇನ್ನೂ ಕಾರ್ಪೊರೇಟ್ ಕಂಪನಿಗಳ ಕೈಗೆ ರೈತರನ್ನು ನೀಡಿರುವುದನ್ನು ನೋಡಿದರೆ, ಮತ್ತೆ ರೈತರು ನಮ್ಮೊಳಗಿನ ರಾಜಕಾರಣಿಗಳ ವಿರುದ್ಧ ಹೋರಾಟ ಮಾಡಬೇಕಾಗಿ ಬರಬಹುದು ಎಂದರು.
ಬಸ್ತಿಹಳ್ಳಿ ರಾಜಣ್ಣ ಮಾತನಾಡಿ, ಎಲ್ಲವನ್ನೂ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಖಾಸಗಿಗೆ ವಹಿಸುವುದಾದರೆ ಸರಕಾರ, ಪ್ರಜಾಪ್ರಭುತ್ವ ಏಕೆ ಬೇಕು? ಸಾರ್ವಜನಿಕರಿಗೆ ಉಪಯೋಗವಾಗದ ಮಂತ್ರಿಗಳು ಏಕೆ ಬೇಕು? ಸರಕಾರವನ್ನು ಖಾಸಗಿಗೆ ವಹಿಸಿ ಎಂದು ತಿಳಿಸಿದರು.
ಆರ್.ಕೆ.ಎಸ್ ಸ್ವಾಮಿ, ರೈತರನ್ನು ಬಲಿ ಕೊಟ್ಟು ಕಂಪನಿಗಳನ್ನು ಉದ್ದಾರ ಮಾಡುವ ಹುನ್ನಾರವಿದು. ಮುಕ್ತ ವ್ಯಾಪಾರ ನೀತಿಯಿಂದ ಸಣ್ಣ ಪುಟ್ಟ ವ್ಯಾಪಾರಸ್ಥರು ಕೂಡ ಬೀದಿಗೆ ಬರಬೇಕಾಗುತ್ತದೆ. ಯಾವುದೇ ತೊಂದರೆಯಾದರೂ ಎ.ಪಿ.ಎಂ.ಸಿ ವ್ಯಾಪ್ತಿಗೆ ಒಳಪಡುವುದಿಲ್ಲ. ಕಾರ್ಪೊರೇಟ್ ಕಂಪನಿಗಳು ಮೊದಲಿಗೆ ರೈತರಿಗೆ ಒಳ್ಳೆಯ ಬೆಲೆ ನೀಡುತ್ತಾರೆ. ನಂತರ ಇವರ ಹಿಡಿತಕ್ಕೆ ಬಂದ ಮೇಲೆ ಎಲ್ಲವೂ ತಮ್ಮ ಬೆಲೆಗಳ ಮೇಲೆ ನಿಗದಿ ಮಾಡಲಾಗುವುದು. ಲಕ್ಷಾಂತರ ಕೋಟಿ ಬಂಡವಾಳ ಹಾಕುವವರಿಗೆ ಮಣೆ ಹಾಕಿ ಎಲ್ಲರನ್ನೂ ನಾಶ ಮಾಡಲಾಗುತ್ತದೆ ಎಂದು ತಿಳಿಸಿದರುಸುದ್ದಿಗೋಷ್ಠಿಯಲ್ಲಿ ರೈತಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಬೆಲೆಕಾವಲು ಸಮಿತಿ ಶ್ರೀಕಾಂತ್, ಮನೋಹರ್ ಪಟೇಲ್, ತಾ.ಪಂ ಸದಸ್ಯ ನ್ಯಾಕೇನಹಳ್ಳಿ ಸುರೇಶ್ ಮತ್ತಿತರ ಸಂಘಟನೆಗಳ ಸದಸ್ಯರುಗಳು ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
