ಬೆಂಗಳೂರು
ಗ್ರಹಣ ಹಿಡಿದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರಾಜ್ಯ ಭೇಟಿ ಸಂದರ್ಭದಲ್ಲಿ ಮೋಕ್ಷ ಸಿಗಲಿದೆಯೇ? ಸಂಪುಟ ವಿಸ್ತರಣೆ ಮುಹೂರ್ತ ನಿಗದೆಯಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಕ್ರಾಂತಿ ನಂತರ ತಮ್ಮ ವಿದೇಶ ಪ್ರವಾಸಕ್ಕೂ ಮುನ್ನವೆ ಸಂಪುಟ ವಿಸ್ತರಿಸಲು ಬಯಸಿದ್ದರು. ಆದರೆ ಅದು ಕೈಗೂಡಿಲ್ಲ. ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ದೆಹಲಿ ಭೇಟಿಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವಕಾಶ ನೀಡಲಿಲ್ಲ. ಹಾಗಾಗಿ ಸಂಪುಟ ವಿಸ್ತರಣೆಗೆ ಗ್ರಹಣ ಹಿಡಿದಿತ್ತು.
ಸಂಪುಟ ವಿಸ್ತರಣೆ ಸಂಬಂಧ ದೆಹಲಿ ಭೇಟಿ ರದ್ದಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈ ತಿಂಗಳ 17 ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಆ ಸಂದರ್ಭದಲ್ಲೆ ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ನಡೆಸುತ್ತೇನೆ ಎಂದು ಹೇಳಿದ್ದರು. ಹಾಗಾಗಿ ಅಮಿತ್ ಶಾ ಅವರ ರಾಜ್ಯ ಭೇಟಿ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಬಹುದು ಎಂದು ಸಚಿವಾಕಾಂಕ್ಷಿಗಳು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ರಾಜ್ಯ ಭೇಟಿ ಮಹತ್ವ ಪಡೆದುಕೊಂಡಿದೆ.
ಈ ತಿಂಗಳ 17ರ ಸಂಜೆ ನಗರಕ್ಕೆ ಆಗಮಿಸುವ ಅಮಿತ್ ಶಾ ಅವರು ಅಂದು ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಿ ಮರುದಿನ ಬೆಳಗ್ಗೆ ಅಂದರೆ ಜ. 18 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಸಂಜೆ ಬೆಂಗಳೂರಿಗೆ ವಾಪಸ್ಸಾಗಿ ಅರಮನೆ ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, 18ರ ಸಂಜೆಯೆ ದೆಹಲಿಗೆ ತೆರಳುವರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಮಿತ್ ಶಾ ಅವರ ಜತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ತೀರ್ಮಾನಿಸಿದ್ದಾರೆ. ಅದರಂತೆ ಜ. 17ರ ರಾತ್ರಿ ಇಲ್ಲವೇ 18ರ ಬೆಳಗ್ಗೆ ಅಮಿತ್ ಶಾ ಅವರ ಜತೆ ಸಂಪುಟ ವಿಸ್ತರಣೆ ಕುರಿತು ಚರ್ಚಿಸಿ ಅವರ ಅನುಮತಿ ಪಡೆದು ಮುಹೂರ್ತ ನಿಗದಿ ಮಾಡುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಈ ತಿಂಗಳ 19 ರಿಂದ ವಿದೇಶ ಪ್ರವಾಸ ಕೈಗೊಳ್ಳುವುದರಿಂದ ಅದಕ್ಕೂ ಮುನ್ನವೇ ಸಂಪುಟ ವಿಸ್ತರಣೆಯಾಗುತ್ತದೆಯೋ, ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮನವೊಲಿಸಿ ಯಡಿಯೂರಪ್ಪನವರು ಸಂಪುಟ ವಿಸ್ತರಣೆಗೆ ಅನುಮತಿ ಪಡೆಯುತ್ತಾರೋ, ಇಲ್ಲವೇ ಸಂಪುಟ ವಿಸ್ತರಣೆ ಮತ್ತಷ್ಟು ಮುಂದಕ್ಕೆ ಹೋಗುತ್ತದೆಯೋ ಎಂಬ ಪ್ರಶ್ನೆ ಈಗ ಎಲ್ಲರ ಮನದಲ್ಲಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅದೇಕೋ, ಏನೋ ಯಡಿಯೂರಪ್ಪನವರ ಮೇಲೆ ಮುನಿಸಿಕೊಂಡಂತೆ ಕಾಣುತ್ತಿದೆ.
ಉಪಚುನಾವಣೆಯ ಗೆಲುವಿನ ನಂತರ ಯಡಿಯೂರಪ್ಪನವರಿಗೆ ಅಭಿನಂದನೆ ಹೇಳಿ, ಬೆನ್ನುತಟ್ಟಿದ್ದ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಸಂಪುಟ ವಿಸ್ತರಣೆ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿರುವುದರ ಹಿಂದಿನ ಸ್ಪಷ್ಟ ಕಾರಣ ಯಾರಿಗೂ ಅರಿವಾಗಿಲ್ಲ.
ಸ್ವತಃ ಯಡಿಯೂರಪ್ಪನವರೆ ಸಂಪುಟ ವಿಸ್ತರಣೆಗೆ ವರಿಷ್ಠರು ಒಪ್ಪದಿರುವುದಕ್ಕೆ ಕಸಿವಿಸಿಗೊಂಡಿದ್ದಾರೆ. ವರಿಷ್ಠರ ನಡೆಗೆ ಕಾರಣ ಏನು ಎಂಬುದು ಗೊತ್ತಾಗದೇ ಗೊಂದಲಕ್ಕೆ ಒಳಗಾಗಿದ್ದಾರೆ.ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದಿದ್ದಾಗ ತುಮಕೂರಿನ ರೈತ ಸಮಾವೇಶದಲ್ಲಿ ಯಡಿಯೂರಪ್ಪನವರು ಕೇಂದ್ರದಿಂದ ನೆರೆ ಪರಿಹಾರ ಬಾರದ ಬಗ್ಗೆ ಆಡಿದ ಮಾತು ವರಿಷ್ಠರಲ್ಲಿ ಸಿಟ್ಟು ತರಿಸಿದೆ ಎಂದು ಹೇಳಲಾಗುತ್ತಿದೆಯಾದರೂ, ಇದು ನಿಜವೋ, ಸುಳ್ಳೋ ಯಾರಿಗೂ ಗೊತ್ತಿಲ್ಲ. ಹಾಗೆಯೇ ಸರ್ಕಾರದ ಮಟ್ಟದಲ್ಲಿ ಯಡಿಯೂರಪ್ಪನವರ ಕುಟುಂಬದವರ ಹಸ್ತಕ್ಷೇಪಗಳು ಹೆಚ್ಚಿವೆ. ಇದಕ್ಕೆ ಕಡಿವಾಣ ಹಾಕಿ ಎಂಬ ಸಂದೇಶವನ್ನು ವರಿಷ್ಠರು ಈ ಹಿಂದೆ ನೀಡಿದ್ದು, ಅದು ಪಾಲನೆಯಾಗಿಲ್ಲ ಎಂಬ ಅಸಮಾಧಾನವೂ ವರಿಷ್ಠರಿಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಸಂಪುಟ ವಿಸ್ತರಣೆಗೆ ಅವರು ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.
ಇಂತಹ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ರಾಜ್ಯ ಭೇಟಿಗೆ ಪ್ರಾಮುಖ್ಯತೆ ಬಂದಿದೆ.ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವರಿಷ್ಠರ ನಡುವಿನ ಮುನಿಸು ಶಮನವಾಗಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುತ್ತದೆಯೇ? ವರಿಷ್ಠರ ಮನವೊಲಿಸಿ ಯಡಿಯೂರಪ್ಪನವರು ಎಲ್ಲವನ್ನೂ ಸರಿಪಡಿಸಿಕೊಂಡು ಸಂಪುಟ ವಿಸ್ತರಿಸಿ ಒಳ್ಳೆಯ ಆಡಳಿತದತ್ತ ಗಮನ ನೀಡಲು ಶಕ್ತರಾಗುವರೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.ಈ ಎಲ್ಲದಕ್ಕೂ ಅಮಿತ್ ಶಾ ಅವರ ರಾಜ್ಯ ಭೇಟಿ ಸಂದರ್ಭದಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ