ಪಾಲಿಕೆ ಅಧ್ಯಯನ ಪ್ರವಾಸ: ಫಲಪ್ರದವಲ್ಲದ ವೆಚ್ಚ

ತುಮಕೂರು

    ತುಮಕೂರು ಮಹಾನಗರ ಪಾಲಿಕೆಯ ಈ ಹಿಂದಿನ ಚುನಾಯಿತ ಮಂಡಲಿ ಸದಸ್ಯರು 2016 ರಲ್ಲಿ ಕೈಗೊಂಡಿದ್ದ ಅಧ್ಯಯನ ಪ್ರವಾಸವನ್ನು ಫಲಪ್ರದವಲ್ಲದ ವೆಚ್ಚ ಎಂದು 2016-17 ನೇ ಸಾಲಿನ ಆಡಿಟ್ ವರದಿಯಲ್ಲಿ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ತೀಕ್ಷ್ಣವಾಗಿ ಆಕ್ಷೇಪ ವ್ಯಕ್ತಪಡಿಸಿರುವ ವಿಷಯ ಬೆಳಕಿಗೆ ಬಂದಿದೆ.

    ತುಮಕೂರಿನ ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲದ ಜಂಟಿ ನಿರ್ದೇಶಕರು ಪಾಲಿಕೆಯ 2016-17 ನೇ ಸಾಲಿನ ಆಡಿಟ್ ವರದಿಯನ್ನು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸಲ್ಲಿಸಿದ್ದು, ಆ ವರದಿಯಲ್ಲಿ ಅಧ್ಯಯನ ಪ್ರವಾಸದ ಬಗ್ಗೆ ಈ ರೀತಿಯ ಆಕ್ಷೇಪಣೆಯನ್ನು ವ್ಯಕ್ತಪಡಿಸಲಾಗಿದೆ.

ಷರತ್ತುಗಳನ್ನು ಪಾಲಿಸಿಲ್ಲ

    ಮಹಾನಗರ ಪಾಲಿಕೆ ಸದಸ್ಯರು ಪಂಜಾಬ್ ರಾಜ್ಯದ ಚಂಡೀಗಡ ನಗರ, ನವದೆಹಲಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲು ಪೌರಾಡಳಿತ ನಿರ್ದೇಶಕರು ತಮ್ಮ ಅಧಿಕೃತ ಜ್ಞಾಪನ (ಸಂಖ್ಯೆ: 14017, ದಿನಾಂಕ: 30-11-2016)ದಲ್ಲಿ ಅನುಮತಿ ನೀಡಿದ್ದರು. ಅನುಮತಿ ನೀಡುವಾಗ 1)ಅಧ್ಯಯನ ಪ್ರವಾಸದ ನಂತರ ಖರ್ಚು ವೆಚ್ಚಗಳ ಮಹಿತಿಯನ್ನು ದಾಖಲೆಗಳ ಮತ್ತು ರಶೀದಿ ಸಮೇತ ಪಾಲಿಕೆಯ ಲೆಕ್ಕ ಶಾಖೆಗೆ ಸಲ್ಲಿಸಬೇಕು, 2) ಪ್ರವಾಸದ ಪ್ರಯೋಜನ ಕುರಿತಂತೆ 15 ದಿನಗಳೊಳಗೆ ವಿವರವಾದ ವರದಿಯನ್ನು ಪಾಲಿಕೆ ವೆಬ್ ಸೈಟ್ ನಲ್ಲಿ ಅಪ್‍ಲೋಡ್ ಮಾಡಬೇಕು ಎಂಬ ಷರತ್ತುಗಳನ್ನು ವಿಧಿಸಿದ್ದರು. ಆದರೆ ಈ ಎರಡು ಷರತ್ತುಗಳನ್ನೂ ಪಾಲಿಸಿರುವುದಿಲ್ಲ ಎಂದು ಆಡಿಟ್ ವರದಿಯಲ್ಲಿ ಬೊಟ್ಟುಮಾಡಿ ತೋರಿಸಲಾಗಿದೆ.

ನಿಯಮ ಬಾಹಿರ

    ಟ್ರೂ ವ್ಯಾಲ್ಯೂ ಹಾಲಿಡೇಸ್ ಸಂಸ್ಥೆಗೆ ಈ ಪ್ರವಾಸದ ವೆಚ್ಚವನ್ನು ಯಾವ ಆಧಾರದ ಮೇಲೆ ಪಾವತಿಸಲಾಗಿದೆ ಎಂಬುದರ ದಾಖಲೆಗಳನ್ನು ಒದಗಿಸಿರುವುದಿಲ್ಲ. ಒಂದು ಲಕ್ಷ ರೂ. ಮೇಲ್ಪಟ್ಟು ಸಾಮಗ್ರಿ ಖರೀದಿ ಅಥವಾ ಸೇವೆ ಪಡೆಯಲು ಪಾರದರ್ಶಕ ನಿಯಮಾನುಸಾರ ಟೆಂಡರ್ ಕರೆಯಬೇಕಾಗಿದ್ದು, ಟೆಂಡರ್ ಕರೆದು ಪ್ರವಾಸ ಕೈಗೊಂಡಿರುವುದು ದಾಖಲೆಗಳಿಂದ ಕಂಡುಬರುವುದಿಲ್ಲ. ಟೆಂಡರ್ ಕರೆಯದೆ ರೂ. 10.08 ಲಕ್ಷ ಅಂದಾಜು ಕೆಲಸವನ್ನು ಈ ಸಂಸ್ಥೆಗೆ ವಹಿಸಿರುವುದು ಪಾರದರ್ಶಕ ನಿಯಮಕ್ಕೆ ವ್ಯತಿರಿಕ್ತವಾಗಿರುತ್ತದೆ.

    ಈ ಸಂಸ್ಥೆಯು ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರುವ ಬಗ್ಗೆಯಾಗಲಿ, ನೋಂದಣಿಯಾಗಿರುವ ಬಗ್ಗೆಯಾಗಲಿ ದಾಖಲೆಗಳಿಲ್ಲ. ಟೆಂಡರ್ ಕರೆಯದೆ ಈ ಪ್ರವಾಸದ ಕಾರ್ಯಕ್ರಮ ರೂಪಿಸಿ ನೋಂದಾಯಿತವಲ್ಲದ ಸಂಸ್ಥೆಗೆ ವೆಚ್ಚ ಪಾವತಿಸಿರುವುದು ನಿಯಮಬಾಹಿರವಾಗಿದ್ದು ಈ ಬಗ್ಗೆ ವಿವರಣೆ ಕೋರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಸದಸ್ಯರು ಕೈಗೊಂಡ ಪ್ರವಾಸದ ಅಧ್ಯಯನ ವರದಿ ಸಲ್ಲಿಸದಿರುವುದರಿಂದ ಈ ವೆಚ್ಚ ಫಲಪ್ರದವಲ್ಲದ ವೆಚ್ಚವೆಂದು ಭಾವಿಸಬಹುದಾಗಿದೆ. ಟೆಂಡರ್ ಕರೆಯದೆ ಪ್ರವಾಸದ ವೆಚ್ಚವೆಂದು ಪಾವತಿಸಿರುವ ಮೊತ್ತ 10,01.064 ರೂ.ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ ಎಂದು ಸದರಿ ಆಡಿಟ್ ವರದಿಯಲ್ಲಿ ಸ್ಪಷ್ಟಶಬ್ದಗಳಲ್ಲಿ ಹೇಳಲಾಗಿದೆ.

ಚರ್ಚಾಸ್ಪದ ಸಂಗತಿ

     ಆಡಿಟ್ ವರದಿಯಲ್ಲಿರುವ ಈ ಅಂಶ ಬೆಳಕಿಗೆ ಬರುತ್ತಿದ್ದಂತೆಯೇ ಅಧ್ಯಯನ ಪ್ರವಾಸದ ಈ ವಿಚಾರವು ಇದೀಗ ಚರ್ಚಾಸ್ಪದವಾಗಿದೆ. ತೀರಾ ಇತ್ತೀಚೆಗಷ್ಟೇ ಪಾಲಿಕೆ ಸದಸ್ಯರು ಮತ್ತೊಮ್ಮೆ ಅಧ್ಯಯನ ಪ್ರವಾಸ ಮಾಡಿಬಂದಿರುವುದರಿಂದ ಹಿಂದಿನ ಪ್ರವಾಸದ ಬಗೆಗಿನ ಆಡಿಟ್ ವರದಿ ಬಿಸಿಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link