ಅನಂತ್ ಕುಮಾರ್ ಹೆಗಡೆಗೆ ಮಾಡಲು ಕೆಲಸ ಇಲ್ಲಾ : ಡಿ ಕೆ ಶಿವಕುಮಾರ್

ಬೆಂಗಳೂರು

    ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ತಮ್ಮ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಅನಂತಕುಮಾರ್ ಹೆಗಡೆಗೆ ಅವರಿಗೆ ಕೆಲಸ ಇಲ್ಲ. ಹೀಗಾಗಿ ತಮ್ಮನ್ನು ಗುರಿಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

      ಸುದ್ದಿಗಾರರ ಜತೆ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಈಗ ಕೆಲಸ ಇಲ್ಲದೇ ಸುಮ್ಮನೆ ಕುಳಿತಿದ್ದಾರೆ. ಅವರು ನನಗೆ ಆತ್ಮೀಯರು. ಅವರಿಗೆ ಈಗ ಕೆಲಸ ಬೇಕಾಗಿದೆ. ದೇಶದಲ್ಲಿ ಬದಲಾವಣೆ ಮಾಡಬೇಕು ಅಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಸ್ತಕ ಸುಡಬೇಕು ಎಂದು ಕಾಯುತ್ತಿದ್ದಾರೆ. ಅದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೆ ನನ್ನನ್ನು ನೆನೆಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ, ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು.

    ಯೇಸುವಿನ ಪ್ರತಿಮೆ ವಿಚಾರವಾಗಿ ಎರಡು ವರ್ಷಗಳ ಹಿಂದೆ ನನ್ನ ಕ್ಷೇತ್ರದ ಕ್ರೈಸ್ತ ಸಮುದಾಯದವರಿಗೆ ಮಾತು ಕೊಟ್ಟಿದ್ದೆ. ಈಗ ಅದು ಸಾಕಾರಗೊಳ್ಳುತ್ತಿದೆ. ಪ್ರತಿಮೆ ಸ್ಥಾಪನೆಗೆ ಯಾವುದೇ ಸಮಸ್ಯೆ ಇಲ್ಲ. ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿಬೆಟ್ಟದಲ್ಲಿ ಯೇಸುವಿನ ಕಲ್ಲಿನ ಪ್ರತಿಮೆ ನಿರ್ಮಿಸಲು ಇತ್ತೀಚೆಗೆ ಭೂಮಿ ಪೂಜೆ ನಡೆದಿದೆ. ಇದನ್ನೇ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ ಎಂದರು.

     ನನ್ನ ಕ್ಷೇತ್ರದಲ್ಲಿ ಎಲ್ಲ ಧರ್ಮ ಹಾಗೂ ಸಮಾಜದ ಜನರಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದಿಂದ ವಿಧಾನಸಭೆವರೆಗೂ ನನ್ನನ್ನು ಬೆಳೆಸಿದ್ದಾರೆ. ನಾನು ಕಷ್ಟ ಕಾಲದಲ್ಲಿದ್ದಾಗ ಹಗಲು ರಾತ್ರಿ ಪ್ರಾರ್ಥನೆ ಮಾಡಿ, ಮೌನ ಪ್ರತಿಭಟನೆ ಮಾಡಿ ನನ್ನ ಬೆನ್ನಿಗೆ ನಿಂತಿದ್ದಾರೆ.

     ಎರಡು ವರ್ಷಗಳ ಹಿಂದೆ ಪ್ರತಿಮೆ ಮಾಡಲು ಮುಂದಾಗಿದ್ದರು. ಆಗ ನಾನೇ ತಡೆದು ಸರ್ಕಾರಿ ಜಾಗದಲ್ಲಿ ಪ್ರತಿಮೆ ಮಾಡಿದರೆ ಭವಿಷ್ಯದಲ್ಲಿ ತೊಂದರೆ ಎದುರಾಗಬಹುದು ಎಂಬ ಕಾರಣದಿಂದ ನಾನೇ ತಡೆದಿದ್ದೇ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 10 ಎಕರೆ ಜಮೀನು ಮಂಜೂರು ಮಾಡಿಸಿದ್ದಾಗಿ ತಿಳಿಸಿದರು.

     ಈ ಜಾಗಕ್ಕೆ ನಾನೇ ಸರ್ಕಾರಕ್ಕೆ ದುಡ್ಡು ಕಟ್ಟಿ ಮಂಜೂರು ಮಾಡಿಸಿದ್ದು, ಮೊನ್ನೆ ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಅವರಿಗೆ ಹಕ್ಕು ಪತ್ರ ನೀಡಲಾಗಿದೆ. ನೂರಾರು ಎಕರೆ ಬೆಟ್ಟ ಪ್ರದೇಶದಲ್ಲಿ ಸರ್ಕಾರದಿಂದಲೇ ಭೂ ಮಂಜೂರಾಗಿರುವ ಹಿನ್ನೆಲೆಯಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದರು.

    ಕೇವಲ ಇದೊಂದೇ ಅಲ್ಲ. ನನ್ನ ಕನಕಪುರ ಕ್ಷೇತ್ರದಲ್ಲಿ ಸರ್ಕಾರಿ ವಿದ್ಯಾಸಂಸ್ಥೆಗೆ ನನ್ನದೇ ಸ್ವಂತ ಜಾಗ ನೀಡಿದ್ದೇವೆ. ನೂರಾರು ದೇವಸ್ಥಾನ ಕಟ್ಟಿಸಿಕೊಟ್ಟಿದ್ದೇವೆ. ಯಶವಂತಪುರದಲ್ಲೂ ರಾಮನ ದೇವಾಲಯ, ಮಂಗಳಕರಿ ಮಾರಮ್ಮ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳಿವೆ. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆದರೆ ಈ ದೇವಸ್ಥಾನಕ್ಕೆ ಜಾಗ ಕೊಡಿಸುವುದಾಗಿ ಹರಕೆ ಹೊತ್ತಿದ್ದೆ. ಮೈಸೂರಿನಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದ ದಾಖಲೆ ತೆಗೆಸಿ ನೋಡಿ, ಮಹಾರಾಣಿ ಅವರ ಬಳಿ ಖರೀದಿ ಮಾಡಿ ಗಿಫ್ಟ್ ಆಗಿ ಕೊಟ್ಟಿದ್ದೇನೆ. ಬೇಕಿದ್ದರೆ ದಾನ ಪತ್ರದ ದಾಖಲೆ ತೆಗೆಸಿ ನೋಡಿ ಎಂದರು.

     ನನಗೆ ಯಾವುದೇ ಪ್ರಚಾರ ಮಾಡುವ ಉದ್ದೇಶ ಇಲ್ಲ. ಯಾವುದೋ ಸಂದರ್ಭದಲ್ಲಿ ಜನರಿಗೆ ಮಾತು ಕೊಟ್ಟಿರುತ್ತೇವೆ. ಸೇವೆ ಮಾಡುವುದು ನಮ್ಮ ಕರ್ತವ್ಯ ಅದನ್ನು ಮಾಡಿದ್ದೇನೆ. ಹಾರೋಬೆಲೆಯಲ್ಲಿ ಕನ್ನಡಕ್ಕಾಗಿ ರಾಜ್ಯಕ್ಕಾಗಿ ಶ್ರಮಿಸಿದ 36 ಪಾದ್ರಿಗಳಿದ್ದಾರೆ. ಅದೊಂದೇ ಗ್ರಾಮದಿಂದ ನೂರಾರು ಜನ ಸಿಸ್ಟರ್ ಗಳನ್ನು ಸಮಾಜಕ್ಕೆ ನೀಡಿಲಾಗಿದೆ. ಅನೇಕ ಸಂದರ್ಭಗಳಲ್ಲಿ ಅವರೊಂದಿಗೆ ಕೂಡಿ ಹೋರಾಟ ಮಾಡಿದ್ದೇನೆ. ಈ ಪವಿತ್ರ ಸ್ಥಳದಲ್ಲೇ ನಾನು ಸೂರ್ಯ ರೈತ ಕಾರ್ಯಕ್ರಮ ಆರಂಭಿಸಿದ್ದು, ಇದು ಯಶಸ್ವಿಯಾದ ಕಾರಣ ರಾಷ್ಟ್ರಮಟ್ಟದಲ್ಲಿ ಈ ಕಾರ್ಯಕ್ರಮ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap