ಬೆಂಗಳೂರು
ಮೇಕೆಗಳನ್ನು ಮೇಯಿಸಲು ಜಮೀನಿಗೆ ಹೋಗಿದ್ದ ರೈತರೊಬ್ಬರು ಆನೆ ತುಳಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕನಕಪುರದ ಕೆಂಚೇಗೌಡನ ದೊಡ್ಡಿಯಲ್ಲಿ ನಡೆದಿದೆ.
ಗಾಯಗೊಂಡಿರುವ ಕೆಂಚೇಗೌಡನ ದೊಡ್ಡಿಯ ರೈತ ಲಿಂಗರಾಜು(45)ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ಮುಂಜಾನೆ ಮೇಕೆಗಳನ್ನು ಜಮೀನಿನ ಬಳಿ ಮೇಯಿಸಲು ಲಿಂಗರಾಜು ಹೋಗಿದ್ದ ವೇಳೆ ಇದ್ದಕ್ಕಿದ್ದಂತೆ ಆನೆ ಪ್ರತ್ಯಕ್ಷವಾಗಿ ದಾಳಿ ನಡೆಸಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾತನೂರು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಎರಡು ದಿನಗಳ ಹಿಂದಷ್ಟೇ ಚನ್ನಪಟ್ಟಣ ತಾಲ್ಲೂಕಿನ ಸುಳ್ಳೇರಿ ಗ್ರಾಮದ ಕೆರೆಯಲ್ಲಿ 7 ಕಾಡಾನೆಗಳ ತಂಡ ಬೀಡುಬಿಟ್ಟು, ಗ್ರಾಮದಲ್ಲಿ ಭಯದ ವಾತಾವರಣ ಉಂಟು ಮಾಡಿದ್ದವು. ನೀರು ಮತ್ತು ಮೇವನ್ನು ಅರಸಿ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಆನೆಗಳು ಜನರಲ್ಲಿ ಆತಂಕ, ಭಯ ಮನೆ ಮಾಡುವಂತೆ ಮಾಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








