ಅಂಗನವಾಡಿ ಕೇಂದ್ರ ಮುಚ್ಚುವ ಹುನ್ನಾರ : ಸರ್ಕಾರದ ವಿರುದ್ದ ಕಾರ್ಯಕರ್ತರ ಪ್ರತಿಭಟನೆ

ಚಿತ್ರದುರ್ಗ:

     ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ./ಯು.ಕೆ.ಜಿ. ಪ್ರಾರಂಭಿಸಿ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಧಿಕ್ಕರಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಿ.ಐ.ಟಿ.ಯು.ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

      ಯೂನಿಯನ್ ಪಾರ್ಕ್‍ನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಂಗನವಾಡಿ ವಿರೋಧಿ ನೀತಿ ಖಂಡಿಸಿ ಧಿಕ್ಕಾರಗಳನ್ನು ಕೂಗಿದರು.ಸಿ.ಐ.ಟಿ.ಯು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಲಿಯಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಖಾಸಗೀಕರಣ, ಉದಾರೀಕರಣ, ಜಾಗತೀಕರಣದ ಅನ್ವಯ ದೇಶದ ಪ್ರಧಾನಿ ನರೇಂದ್ರಮೋದಿ ಅಮೇರಿಕ ಹೇಳಿದಂತೆ ಕೇಳುತ್ತಿದ್ದಾರೆ.

      ಐದುನೂರು ಹಾಗೂ ಒಂದು ಸಾವಿರ ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದಲ್ಲದೆ ಜಿ.ಎಸ್.ಟಿ.ಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರು ತೊಂದರೆಗೊಳಗಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ./ಯು.ಕೆ.ಜಿ.ತೆರೆಯಲು ಹೊರಟಿರುವುದರಿಂದ ಅಲ್ಪವೇತನಕ್ಕಾಗಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬೀದಿಗೆ ಬೀಳಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುವುದನ್ನು ಬಿಟ್ಟು ಅಸಂಘಟಿತ ಕಾರ್ಮಿಕರ, ಅಂಗನವಾಡಿ ಕಾರ್ಯಕರ್ತೆಯರ ಹಿತ ಕಾಪಾಡುವಲ್ಲಿ ಗಮನ ಹರಿಸಲಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

       ಕೇಂದ್ರ ಸರ್ಕಾರ 2018 ಅಕ್ಟೋಬರ್‍ನಲ್ಲಿ ಹೆಚ್ಚಿಸಿದ 1500 ರೂ.ಗೌರವ ಧನವನ್ನು ಕೂಡಲೆ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.ಸಿ.ಐ.ಟಿ.ಯು.ಜಿಲ್ಲಾ ಖಜಾಂಚಿ ಸಿ.ಕೆ.ಗೌಸ್‍ಪೀರ್ ಪ್ರತಿಭಟನೆಯಲ್ಲಿ ಮಾತನಾಡಿ ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ ಎಲ್.ಐ.ಸಿ.ಆಧಾರಿತ ಪಿಂಚಣಿ ನೀಡಬೇಕು.

       ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಕೊಡುವ ಎನ್.ಪಿ.ಎಸ್.ಮಾನದಂಡಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಅನುಸರಿಸಬೇಕು.ನಿವೃತ್ತಿಯಾದ ಕಾರ್ಯಕರ್ತೆಯರು ಹಾಗೂ ಸಹಾಯಕರಿಯರಿಗೆ ಇಡಿಗಂಟು ತಕ್ಷಣ ಬಿಡುಗಡೆಗೊಳಿಸಬೇಕು. ಇಲಾಖೆಯ ಲೋಪದೋಷಗಳಿಂದ ಪಾನ್‍ಕಾರ್ಡ್ ಪಡೆಯದವರಿಗೆ ಹಣ ಕಡಿತ ಆಗದವರಿಗೂ ನಿವೃತ್ತಿ ಸೌಲಭ್ಯ ನೀಡಬೇಕು. ಈಗಾಗಲೆ ನಿವೃತ್ತಿಯಾಗಿರುವವರಿಗೆ ಕನಿಷ್ಟ ಮೂರು ಸಾವಿರ ರೂ.ಪಿಂಚಣಿ ನೀಡುವುದು ಸೇರಿದಂತೆ ಹದಿನಾರು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

         ರಾಜ್ಯದ ಹಲವಾರು ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮೂರ್ನಾಲ್ಕು ತಿಂಗಳಿನಿಂದ ಗೌರವ ಧನ ಪಾವತಿಯಾಗಿಲ್ಲ. ಮಕ್ಕಳಿಗೆ ನೀಡಲಾಗುವ ಮೊಟ್ಟೆ, ತರಕಾರಿ ಹಣ ಕೂಡ ಇನ್ನು ಕೇಂದ್ರಗಳಿಗೆ ಬಂದಿಲ್ಲ. ಅಡುಗೆ ಅನಿಲ ಸಮಯಕ್ಕೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಖಾಯಿಲೆಯಿಂದ ಹಾಸಿಗೆ ಹಿಡಿದಾಗ ಅಕಸ್ಮಾತ್ ಮರಣ ಹೊಂದಿದಾಗಲು ಅವರಿಗೆ ಹಣ ತಲುಪುತ್ತಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಟು ವಿರೋಧಿ ನೀತಿಗೆ ಕಿಡಿ ಕಾರಿದರು.

        ಸಿ.ಐ.ಟಿ.ಯು.ಜಿಲ್ಲಾಧ್ಯಕ್ಷ ಟಿ.ತಿಪ್ಪೇಸ್ವಾಮಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‍ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಕಾರ್ಮಿಕರಿಗೆ ಯಾವುದೇ ಅನುಕೂಲವಾಗಿಲ್ಲ. ಎಲ್ಲಾ ಸಬ್ಸಿಡಿಗಳನ್ನು ತೆಗೆದು ಹಾಕುತ್ತಿದ್ದಾರೆ. ಜನಪರ ಕಲ್ಯಾಣಗಳು ಯಾವುದೂ ಆಗುತ್ತಿಲ್ಲ. ಚಳುವಳಿ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಹೆಮ್ಮೆಟ್ಟಿಸಬೇಕಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಎಚ್ಚರಿಸಿದರು.

       ದಿನನಿತ್ಯದ ಆಹಾರ ಪದಾರ್ಥಗಳು, ಪೆಟ್ರೋಲ್-ಡೀಸೆಲ್ ಬೆಲೆಗಳು ಜಾಸ್ತಿಯಾಗಿದೆ. ಹಾಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ ಮಾಸಿಕ ಹದಿನೆಂಟು ಸಾವಿರ ರೂ.ವೇತನ ನೀಡಬೇಕು. ರಾಜ್ಯ ಸರ್ಕಾರ ಹತ್ತು ಸಾವಿರ ರೂ.ವೇತನ ನೀಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆದರೂ ಯಾವುದೂ ಪಾಲನೆಯಾಗುತ್ತಿಲ್ಲ. ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಯನ್ನು ಖಾಯಂಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

         ಕಾರ್ಮಿಕ, ರೈತ ವಿರೋಧಿ ನೀತಿ ಅನುಸರಿಸಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿವೆ. ಇದರ ವಿರುದ್ದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜಾಗೃತರಾಗಬೇಕೆಂದು ಸಲಹೆ ನೀಡಿದರು.
ಹೊಳಲ್ಕೆರೆಯ ಚಿತ್ತಪ್ಪ, ಇಂದಿರಮ್ಮ, ಗಂಗಮ್ಮ, ಸೌಭಾಗ್ಯಮ್ಮ, ಜಯಲಕ್ಷ್ಮಮ್ಮ, ಬಿ.ಬೋರಮ್ಮ, ಸುಧಮ್ಮ, ಗಂಗಮ್ಮ, ಅಂಜುಜಾಕ್ಷಿ, ಚೂಡಾಮಣಿ, ಸಿದ್ದಗಂಗಮ್ಮ, ಪುಟ್ಟಮ್ಮ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link