ಹಿರಿಯೂರು :
ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರಸರ್ಕಾರ ಹೆಚ್ಚಿಸಿರುವ ತಿಂಗಳ ವೇತನ ರೂ 1500 ಇನ್ನೂ ನಮ್ಮ ಕೈಗೆ ಬಂದಿಲ್ಲ ಎಂಬುದಾಗಿ ಎಐಟಿಯುಸಿ ಕಾರ್ಯದರ್ಶಿ ತಿಪ್ಪಮ್ಮ ಆರೋಪಿಸಿದರು.
ನಗರದ ಲಕ್ಷ್ಮಮ್ಮ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಯಕರ್ತೆಯರಿಗೆ ತಿಂಗಳ ವೇತನವನ್ನು 18ಸಾವಿರ ಹಾಗೂ ಸಹಾಯಕಿಯರಿಗೆ 15ಸಾವಿರಕ್ಕೆ ಹೆಚ್ಚಿಸಬೇಕು. ಪತ್ರಿ ತಿಂಗಳು 5ನೇ ತಾರೀಕಿನೊಳಗೆ ಗೌರವ ಧನ ಪಾವತಿಸಬೇಕು. ಇಲ್ಲವಾದಲ್ಲಿ ಚುನಾವಣೆ ನಂತರ ಅನಿರ್ದಿಷ್ಟ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ತಿಪ್ಪಮ್ಮ ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮುಖಂಡ ಎಸ್.ಸಿ.ಕುಮಾರ್ ಏಪ್ರಿಲ್ ಮೇ ತಿಂಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ರವರಿಗೆ ನಡೆಸಲು ಅದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಬಿಸಿಲಿನ ತಾಪಕ್ಕೆ ಮಕ್ಕಳ ಆರೋಗ್ಯ ಹಾಳಾಗುತ್ತದೆ ಎಂದು ಹೇಳಿದರು.ಈ ಸಭೆಯಲ್ಲಿ ವೇದಾವತಿ, ಪುಟ್ಟಮ್ಮ, ಮಂಜುಳ, ವಿಜಯಲಕ್ಷ್ಮಿ, ನಾಗಮ್ಮ, ಮಲ್ಲಿಕಾ, ಜಯಮ್ಮ, ಸುನಂದ, ಶಾರದ, ರಂಗಮ್ಮ, ಪಿ.ಜಿ.ಮಂಜುಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸುಜಾತ ಸ್ವಾಗತಿಸಿ, ವಂದಿಸಿದರು.