ಚಿತ್ರದುರ್ಗ:
ನಿವೃತ್ತಿಯಾಗಿರುವ ಹಾಗೂ ಮುಂದಿನ ದಿನಗಳಲ್ಲಿ ನಿವೃತ್ತಿಯಾಗಲಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪಿಂಚಣಿ ಸೌಲಭ್ಯ ಹಾಗೂ ಸೇವಾ ಹಿರಿತನದ ಆಧಾರದ ಮೇಲೆ ಗೌರವಧನ ನಿಗಧಿಪಡಿಸುವಂತೆ ಒತ್ತಾಯಿಸಿ ಡಿ.26 ಮತ್ತು 27 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯಾಧ್ಯಕ್ಷ ಕಾಂ.ಹೆಚ್.ಕೆ.ರಾಮಚಂದ್ರಪ್ಪ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಗೋವಾ ಮತ್ತು ತಮಿಳುನಾಡು ಸರ್ಕಾರದ ಮಾದರಿಯಂತೆ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸೇವಾ ಹಿರಿತನದ ಆಧಾರದ ಮೇಲೆ ಸಂಬಳ ನೀಡಬೇಕು. ವರ್ಷಕ್ಕೆ ಇನ್ನೂರು ರೂ.ಗಳನ್ನು ಹೆಚ್ಚಿಸಿ ಪ್ರತಿ ತಿಂಗಳು ಐದನೇ ತಾರೀಖು ಗೌರವ ಧನ ತಪ್ಪದೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ಬೆಂಗಳೂರು ಚಲೋಗೆ ಮುಂದಾಗಿದ್ದೇವೆಂದು ಹೇಳಿದರು.
ಕಾರ್ಯಕರ್ತೆಯರಿಗೆ ಎಂಟು ಸಾವಿರ ಹಾಗೂ ಸಹಾಯಕಿಯರಿಗೆ ತಿಂಗಳಿಗೆ ನಾಲ್ಕು ಸಾವಿರ ರೂ.ವೇತನ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ ಎನ್ನುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಲು ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಮಕ್ಕಳಿಗೆ ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರ ನೀಡಿದರೆ ಅಪೌಷ್ಟಿಕತೆ ಕಡಿಮೆಯಾಗಲಿದೆ ಎಂದರು.
ಯಾವುದೇ ಸರ್ಕಾರಗಳಾಗಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಜೀತದಾಳುಗಳಂತೆ ನೋಡಿಕೊಳ್ಳುವುದನ್ನು ನಾವುಗಳು ಸಹಿಸುವುದಿಲ್ಲ. ಕನಿಷ್ಟ ಕೂಲಿ ನೀಡಿ ಕೆಲಸದ ಭದ್ರತೆ ಒದಗಿಸಿ ಎಂದು ಒತ್ತಾಯಿಸಿದ ಕಾಂ.ಹೆಚ್.ಕೆ.ರಾಮಚಂದ್ರಪ್ಪ ಎಲ್.ಕೆ.ಜಿ/ಯು.ಕೆ.ಜಿ.ಯನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಆರಂಭಿಸಿ ಅಲ್ಲಿಂದಲೆ ವರ್ಗಾವಣೆ ಪತ್ರ ನೀಡುವಂತೆ ಸರ್ಕಾರ ಆದೇಶಿಸಿದರೆ ಕಡ್ಡಾಯವಾಗಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಲು ಅನುಕೂಲವಾಗಲಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂಬುದು ನಮ್ಮ ಬೇಡಿಕೆ ಎಂದು ತಿಳಿಸಿದರು.
ಅರವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಹಾಗೂ ಮುಂದೆ ನಿವೃತ್ತಿಯಾಗಲಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮಾಸಿಕ ಕನಿಷ್ಟ ಮೂರು ಸಾವಿರ ರೂ.ಗಳ ಪಿಂಚಣಿ ನೀಡಬೇಕೆಂದು ಬೆಂಗಳೂರು ಚಲೋ ಚಳುವಳಿಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದೆಂದರು.ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಗೌರವಾಧ್ಯಕ್ಷ ಕಾಂ.ಸಿ.ವೈ.ಶಿವರುದ್ರಪ್ಪ, ಓಂಕಾರಮ್ಮ, ವೇದಾವತಿ, ನಾಗರತ್ನಮ್ಮ, ರಾಧಮ್ಮ, ಸಾವಿತ್ರಿ, ವಿನೋದಮ್ಮ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








