ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ತಾತ್ಕಾಲಿಕ ಅಂತ್ಯ

ತುಮಕೂರು

     ಕಳೆದ ಎರಡು ದಿನಗಳಿಂದ ತುಮಕೂರು ನಗರದಲ್ಲಿ ಅಹೋರಾತ್ರಿ ಧರಣಿ ಕೈಗೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಲಿಖಿತ ರೂಪದ ಭರವಸೆಯ ಮೇರೆಗೆ ತಾತ್ಕಾಲಿಕವಾಗಿ ತಮ್ಮ ಹೋರಾಟವನ್ನು ವಾಪಸ್ ಪಡೆದಿದ್ದಾರೆ. ಡಿ.16ರ ಬೆಳಗ್ಗೆ 11 ಗಂಟೆಗೆ ವಿಧಾನ ಸೌಧದ ಕೊಠಡಿ ಸಂಖ್ಯೆ 320 ರಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಹ ಭಾಗವಹಿಸಲಿದ್ದಾರೆ. ಈ ಸಂಬಂಧ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಅಂತ್ಯಗೊಳಿಸಲಾಯಿತು.

     ಮಂಗಳವಾರ ಬೆಳಗ್ಗೆಯೆ ರಾಜ್ಯದ ವಿವಿಧೆÀಡೆಗಳಿಂದ ಅಂಗನವಾಡಿ ಕಾರ್ಯಕರ್ತೆಯರು ತುಮಕೂರಿನಲ್ಲಿ ಜಮಾಯಿಸಿದ್ದರು. ಇಲ್ಲಿನ ಗಾಜಿನ ಮನೆ ಆವರಣದಿಂದ ಮಧ್ಯಾಹ್ನ 1 ಗಂಟೆಗೆ ಜಾಥಾ ಆರಂಭವಾಗಬೇಕಿತ್ತು. ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯೊಟ್ಟಿಗೆ ಎಲ್‍ಕೆಜಿ-ಯುಕೆಜಿ ಶಿಕ್ಷಣ ನೀಡಿ, ಬದಲಾದ ಕಾಲಘಟ್ಟಕ್ಕನುಗುಣವಾಗಿ ಅಂಗನವಾಡಿಗಳಿಗೆ ಸೌಕರ್ಯ ಒದಗಿಸಿ, 3 ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿರುವ ಎಲ್‍ಕೆಜಿ ಯುಕೆಜಿಯನ್ನು ಪ್ರಾರಂಭಿಸದಂತೆ ತಡೆಯೊಡ್ಡಬೇಕು, 6 ಉದ್ದೇಶಗಳನ್ನು ಬಿಟ್ಟು ಉಳಿದ ಬೇರೆ ಬೇರೆ ಕೆಲಸಗಳನ್ನು ನೌಕರರಿಂದ ಮಾಡಿಸುವುದನ್ನು ನಿಲ್ಲಿಸಬೇಕು, ಪಿಂಚಣಿ ಯೋಜನೆ ಜಾರಿಗೆ ತರಬೇಕು ಇತ್ಯಾದಿ ಸುಮಾರು 15 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಜಾಥಾ ಆರಂಭಿಸಲಾಗಿತ್ತು.

      ಜಾಥಾ ಆರಂಭವಾಗುವುದಕ್ಕೂ ಮುನ್ನವೆ ತುಮಕೂರಿನಲ್ಲಿ ತಡೆಯೊಡ್ಡಲಾಯಿತು. ಹೀಗಾಗಿ ರಾತ್ರಿಯಿಡಿ ಚಳಿಯನ್ನು ಲೆಕ್ಕಿಸದೆ ಕಾರ್ಯಕರ್ತೆಯರು ಅಮಾನಿಕೆರೆ ಪ್ರದೇಶ ಸುತ್ತಮುತ್ತ ತಂಗಿದ್ದರು. ಮಾರನೆಯ ದಿನವೂ ತುಮಕೂರಿನಲ್ಲಿಯೆ ವಾಸ್ತವ್ಯ ಇದ್ದು, ಧರಣಿ ಮುಂದುವರೆಸಿದ್ದರು. ಅಲ್ಲದೆ, ಜಾಥಾ ಮುಂದುವರೆಸುವ ಬಗ್ಗೆ ಚಿಂತನೆ ನಡೆಸಿದ್ದರು. ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯ ಜನಪ್ರತಿನಿಧಿಗಳು ರಾಜ್ಯ ಸರ್ಕಾರದ ಗಮನಕ್ಕೂ ತಂದಿದ್ದರು. ಅಲ್ಲದೆ, ಸಂಘಟನೆಯ ಪ್ರತಿನಿಧಿಗಳೊಂದಿಗೆ ಮಾತುಕತೆ ಕೂಡ ನಡೆಸಲಾಗಿತ್ತು. ಮುಖ್ಯಮಂತ್ರಿಗಳು ಸೋಮವಾರವೆ ಮಾತನಾಡಲು ಅವಕಾಶ ಕಲ್ಪಿಸಿದ್ದರೆಂದು ಹೇಳಲಾಗಿದೆ.

     ಈ ಎಲ್ಲ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಮತ್ತು ಅಂಗನವಾಡಿ ನೌಕರರ ಹೋರಾಟ ತೀವ್ರಗೊಳ್ಳುವ ಲಕ್ಷಣಗಳ ಹಿನ್ನೆಲೆಯಲ್ಲಿ ಸರ್ಕಾರದಿಂದ ಒಂದು ಲಿಖಿತ ಪತ್ರ ರವಾನೆಯಾಗಿ ಸದರಿ ಪತ್ರವನ್ನು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಎಸ್ಪಿ ಡಾ.ಕೆ.ವಂಶಿಕೃಷ್ಣ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರುಗಳು ಧರಣಿ ನಿರತರ ಸ್ಥಳಕ್ಕೆ ತೆರಳಿ ಸರ್ಕಾರದ ಪತ್ರವನ್ನು ಓದಿ ಹೇಳಿದರು. ಡಿ.16 ರಂದು ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ನಿಗದಿಪಡಿಸಿರುವುದಾಗಿ, ಅಲ್ಲಿಯವರೆಗೆ ಹೋರಾಟವನ್ನು ಕೈಬಿಡುವಂತೆ ಮನವಿ ಮಾಡಲಾಗಿರುವ ವಿಷಯವನ್ನು ತಿಳಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು, ಅಂಗನವಾಡಿ ಕಟ್ಟಡಗಳ ಸ್ಥಿತಿ ಹೇಗಿದೆ ಎಂಬುದು ನಮ್ಮ ಗಮನಕ್ಕೂ ಬಂದಿದೆ. ಸಾಕಷ್ಟು ಸುಧಾರಣೆಗಳು ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ. ಬೇಡಿಕೆಗಳನ್ನು ಈಡೇರಿಸಬಹುದಾದ ವಿಷಯಗಳ ಬಗ್ಗೆ ಸರ್ಕಾರ ಆಸಕ್ತಿ ವಹಿಸುತ್ತಿದ್ದು, ಡಿ.16 ರ ಸಭೆಯಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಅಲ್ಲಿಯವರೆಗೆ ಹೋರಾಟ ಕೈ ಬಿಡುವಂತೆ ಮನವಿ ಮಾಡಿದರು.

     ಈ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗುವ ನಿರ್ಧಾರ ಕೈಗೊಂಡರು. ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಅಧ್ಯಕ್ಷೆ ಕಮಲ ಅವರು ಸರ್ಕಾರದ ಲಿಖಿತ ಭರವಸೆಯ ಮೇರೆಗೆ ಹೋರಾಟವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸುತ್ತಿರುವುದಾಗಿಯೂ, ಮುಂದಿನ ನಿರ್ಧಾರಗಳ ಬಗ್ಗೆ ಡಿ.16 ರ ನಂತರ ತೀರ್ಮಾನಿಸುವುದಾಗಿ ಹೇಳಿದರು.

    ಇದಕ್ಕೂ ಮುನ್ನ ಬೆಳಗ್ಗೆ ಮುಷ್ಕರನಿರತರನ್ನು ಉದ್ದೇಶಿಸಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಮಾತನಾಡಿ ತುಮಕೂರಿನ ಸ್ವಾತಂತ್ರ್ಯ ಚೌಕದಿಂದ ಪಾದಯಾತ್ರೆ ಆರಂಭಿಸಬೇಕಿತ್ತು. ಈ ಚೌಕ ಬ್ರಿಟೀಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಹುತಾತ್ಮಕ ಸ್ಥಳವಾಗಿದೆ. ಆದರೆ ಅಂಗನವಾಡಿ ನೌಕರರ ಹೋರಾಟವನ್ನು ರಾಜ್ಯ ಸರ್ಕಾರ ಹತ್ತಿಕ್ಕಿದೆ. ಇದನ್ನು ಪ್ರತಿಯೊಬ್ಬರೂ ಖಂಡಿಸುತ್ತೇವೆ ಎಂದರು.

     ಮೀನಾಕ್ಷಿ ಸುಂದರಂ ಮಾತನಾಡಿ ಅಂಗನವಾಡಿ ನೌಕರರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಸಂಘದ ಪದಾಧಿಕಾರಿಗಳ ನಿಯೋಗವನ್ನು ಬೆಂಗಳೂರಿಗೆ ಕರೆಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಕೇವಲ ಮನವಿಯನ್ನು ಸ್ವೀಕರಿಸಿ ವಾಪಸ್ ಕಳುಹಿಸಿದರು. ಈ ಬಗ್ಗೆ ಚರ್ಚಿಸಿ ಮಾತನಾಡುವ ಔದಾರ್ಯತೆಯು ಅವರಲಿಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ ಅವರು, ಹೋರಾಟ ಇಂದಿಗೆ ಮುಗಿಯುವುದಿಲ್ಲ, ಡಿ.16ರ ನಂತರ ಮುಂದಿನ ಬೆಳವಣಿಗೆಗಳನ್ನು ನಿರ್ಧರಿಸಲಾಗುತ್ತದೆ ಎಂದರು.

      ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ನವೀನ್ ಕುಮಾರ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಎಲ್ಲಾ ಯೋಜನೆಗಳನ್ನು ಮನೆಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಶಾಲಾ ಪೂರ್ವ ಶಿಕ್ಷಣವನ್ನು ಅಂಗನವಾಡಿಗಳಲ್ಲೇ ಆರಂಭಿಸಬೇಕೆಂಬ ಬೇಡಿಕೆ ಸರಿಯಾಗಿದೆ. ಅದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

        ಅಂಗನವಾಡಿ ನೌಕರರನ್ನು ಉದ್ದೇಶಿಸಿ ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಪಳ್ಳ. ಮುಖಂಡರಾದ ಬಸವರಾಜ್ ಪೂಜಾರ್, ಗಾಂವಕರ್, ಎಚ್.ಎಸ್. ಸುನಂದ ಶಾಂತ ಘಂಟಿ, ನಾಗರತ್ನ, ಮೊದಲಾದವರು ಮಾತನಾಡಿದರು.ವೇದಿಕೆಯಲ್ಲಿ ಮುಖಂಡರಾದ ಜಿ. ಕಮಲ, ಗುಲ್ಜಾರ್ ಬಾನು, ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ, ಅನಸೂಯ, ಪಾರ್ವತಮ್ಮ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link