ವಿಧಾನ ಪರಿಷತ್ ಚುನಾವಣೆ: ಸವದಿ ಹಾದಿ ಸುಗಮಗೊಳಿಸಿದ ಅನಿಲ್ ಕುಮಾರ್

ಬೆಂಗಳೂರು

     ಕಾಂಗ್ರೆಸ್‍ನಿಂದ ಪೂರ್ಣಪ್ರಮಾಣದ ಬೆಂಬಲ ಸಿಗದ ಕಾರಣ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅನಿಲ್ ಕುಮಾರ್ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಉಪಮುಖ್ಯಮಂತ್ರಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿ ಗೆಲುವು ಖಚಿತವಾಗಿದೆ.

     ಫೆ. 17ರಂದು ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.ಮೇಲ್ಮನೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಉಪಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರಿಂದ ಈ ಸ್ಥಾನಕ್ಕೆ ಚುನಾವಣೆ ಎದುರಾಗಿದೆ.

     ಕೆಲವು ದಿನಗಳ ಹಿಂದೆ ಕಾಂಗ್ರೆಸ್‍ನ ಹಿರಿಯ ನಾಯಕ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅನಿಲ್ ಕುಮಾರ್ ಅವರನ್ನು ಕಣಕ್ಕೆ ಇಳಿಸಿದ್ದರು. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಜೊತೆ ಚರ್ಚಿಸದೇ ಅನಿಲ್ ಕುಮಾರ್ ಅವರನ್ನು ಶಿವಕುಮಾರ್ ಕಣಕ್ಕಿಳಿಸಿದ್ದು ಈ ಇಬ್ಬರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಹೀಗಾಗಿ ಡಿ.ಕೆ.ಶಿವಕುಮಾರ್ ಏಕಪಕ್ಷೀಯ ನಿರ್ಧಾರದಿಂದ ಬೇಸರಗೊಂಡ ಈ ಇಬ್ಬರು ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸದಿರಲು ನಿರ್ಧರಿಸಿದ್ದರು.

    ಹೀಗಾಗಿ ಪೂರ್ಣಪ್ರಮಾಣದ ಬೆಂಬಲ ದೊರೆಯದ ಕಾರಣ ಅನಿಲ್ ಕುಮಾರ್ ಶನಿವಾರ ವಿಧಾನಸಭೆ ಕಾರ್ಯದರ್ಶಿ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರನ್ನು ಭೇಟಿ ಮಾಡಿ ಚುನಾವಣಾ ನಿವೃತ್ತಿ ಘೋಷಿಸಿ ಪತ್ರ ಸಲ್ಲಿಸಿದರು. ಈಗಾಗಲೇ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿದ ಕಾರಣ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದು ನಿವೃತ್ತಿ ಘೋಷಿಸುವುದಾಗಿ ಅನಿಲ್ ಕುಮಾರ್ ಪತ್ರ ಸಲ್ಲಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ಕುಮಾರ್, ಚುನಾವಣೆಯಿಂದ ನಿವೃತ್ತಿ ಪಡೆಯುತ್ತಿದ್ದೇನೆ. ನನ್ನನ್ನು ಬೆಂಬಲಿಸಿದ
ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರಿಗೆ ಧನ್ಯವಾದಗಳು ಎಂದರು.

    ಕಾಂಗ್ರೆಸ್ ಪೂರ್ಣಪ್ರಮಾಣದ ಬೆಂಬಲ ನೀಡದ್ದನ್ನು ಅನುಕೂಲ ಮಾಡಿಕೊಂಡ ಬಿಜೆಪಿಯ ನಾಯಕರು ಅನಿಲ್ ಕುಮಾರ್ ಅವರನ್ನು ಹಿಂದೆ ಸರಿಯುವಂತೆ ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅನಿಲ್ ಕುಮಾರ್, ತಮಗೆ ಯಾರೂ ಬ್ಲಾಕ್ ಮೇಲ್ ಮಾಡಿಲ್ಲ.ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳಿಗೆ ತಮ್ಮಿಂದ ಮುಜುಗರವಾಗಬಾರದು ಎಂದು ತಮ್ಮ ಧಾರ್ಮಿಕ ಗುರುಗಳ ಆದೇಶ ಮಾಡಿದ್ದಾರೆ.ಹೀಗಾಗಿ ಕಣದಿಂದ ನಾನು ನಿವೃತ್ತಿಯಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲದೇ ಇದ್ದರೂ ಸವದಿ ಸಂಪುಟ ಸೇರಿದ್ದಾರೆ. ಉಪಮುಖ್ಯಮಂತ್ರಿ, ಸಚಿವರಾಗಿ ಮುಂದುವರೆಯಲು ಫೆ.18ರೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ಗೆ ಲಕ್ಷ್ಮಣ ಸವದಿ ಸದಸ್ಯರಾಗಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅನಿಲ್ ಕುಮಾರ್ ಸ್ಪರ್ಧೆ ಆರಂಭದಲ್ಲಿ ಲಕ್ಷ್ಮಣ್ ಸವದಿಗೆ ಅಡ್ಡಿಯಾಗಿತ್ತಾದರೂ ಈಗ ಅನಿಲ್ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿದ ಸವರಿ ಅವರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap