ಚಿತ್ರದುರ್ಗ
ಕೇವಲ ಅಂಕ ಗಳಿಸುವ ಗುರಿಯೊಂದಿಗೆ ಶಿಕ್ಷಣ ಪಡೆಯುವುದು ಸರಿಯಲ್ಲ. ಪಠ್ಯದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ, ಡಾ| ಬಿ.ಆರ್ ಅಂಬೇಡ್ಕರ್, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳಿಗೆ 2019-20 ನೇ ಸಾಲಿನ 6ನೇ ತರಗತಿ ‘ದಾಖಲಾತಿಗೆ ಕೌನ್ಸಲಿಂಗ್’ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಮಕ್ಕಳಿಗೆ ಪಠ್ಯದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಮಕ್ಕಳಿಗೆ ಜೀವನದ ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ರೀತಿಯಲ್ಲಿ ಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹಿಸಬೇಕಿದೆ. ಜಿಲ್ಲೆಯಲ್ಲಿ 35 ವಸತಿ ಶಾಲೆಗಳಲ್ಲಿ ಸರ್ಕಾರದ ವತಿಯಿಂದ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಸತಿ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣದೊಂದಿಗೆ ಸಹ ಪಠ್ಯಗಳಾದ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿ ಕಲಿಯಬೇಕು. ದೇಶಕ್ಕೆ ಉತ್ತಮ ನಾಗರಿಕರಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಓದುವ ಮಕ್ಕಳು ಯಾವುದೇ ಶಾಲೆಯಾದರು ಓದುತ್ತಾರೆ, ಕಲಿಯುವ ವಾತಾವರಣವನ್ನು ಮಕ್ಕಳಿಗೆ ಪೋಷಕರು ಕಲ್ಪಿಸಬೇಕು. ವಸತಿ ಶಾಲೆಗಳಿಗೆ ಆಯ್ಕೆ ಮಾಡುವ ಪ್ರಕ್ರಿಯೆಯೂ ಪಾರದರ್ಶಕವಾಗಿದ್ದು, ಹೆಚ್ಚು ಅಂಕ ಗಳಿಸಿದವರಿಗೆ ಮೊದಲ ಆದ್ಯತೆ ಇರುತ್ತದೆ. ತಮಗೆ ಬೇಕಾದ ಶಾಲೆಗಳನ್ನು ವಿದ್ಯಾರ್ಥಿ ಆಯ್ಕೆ ಮಾಡಿಕೊಳ್ಳಬಹುದು.
ವಸತಿ ಶಾಲೆಗಳಲ್ಲಿ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲ ಸೌರ್ಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು. ಅವುಗಳನ್ನು ಬಳಸಿಕೊಂಡು ಚನ್ನಾಗಿ ಓದಿ, ಎಲ್ಲರೂ ಒಂದೊಂದು ಸಾಧನೆ ಮಾಡಬೇಕು ಎಂದು ಮಕ್ಕಳಿಗೆ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್ ಮಾತನಾಡಿ, ವಸತಿ ಶಾಲೆಗಳಿಗೆ ದಾಖಲಾತಿ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಮೆರಿಟ್ ಹಾಗೂ ಮೀಸಲಾತಿಯ ಆಧಾರದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಯಾವುದೇ ಲೋಪವಾಗದಂತೆ ಪ್ರವೇಶ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 35 ವಸತಿ ಶಾಲೆಗಳಿದ್ದು, 1760 ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಕೌನ್ಸಿಲಿಂಗ್ ಮೇ.8 ರಿಂದ 11 ರವರೆಗೆ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು ಎಂದು ಹೇಳಿದರು.
ಇದೆ ವೇಳೆ ವಸತಿ ಶಾಲೆಗಳ ಪ್ರವೇಶಾತಿಗಾಗಿ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿಕಲಚೇತನ ಮಕ್ಕಳಾದ ಸ್ನೇಹ, ನವ್ಯಶ್ರೀ, ಬಸವರಾಜ್, ನವೀನ್, ಗೋವಿಂದರಾಜ್ ಇವರಿಗೆ ಶಾಲಾ ದಾಖಲಾತಿ ಪ್ರಮಾಣಪತ್ರಗಳನ್ನು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ವಿತರಿಸಿದರು. ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
