ಚಳ್ಳಕೆರೆ
ಸರ್ಕಾರದ ನಿರ್ಲಕ್ಷ್ಯ ಹಾಗೂ ಸೂಕ್ತ ಮಾರ್ಗದರ್ಶನವಿಲ್ಲದೆ ರೈತ ಸಮುದಾಯ ಹೆಚ್ಚು ಆಹಾರ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮಳೆ ವೈಪಲ್ಯದಿಂದ ಯಾವುದೇ ರೈತ ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ. ರೈತರ ದಾರುಣ್ಯ ಸ್ಥಿತಿಯ ಬಗ್ಗೆ ಸರ್ಕಾರ ಹಾಗೂ ಸಮಾಜ ಸೂಕ್ತ ಗಮನಹರಿಸಬೇಕೆಂದು ಭಾರತಿಯ ಕಿಸಾನ್ ಸಂಘದ ಕಾರ್ಯದರ್ಶಿ ಏಕಾಂತಪ್ಪ ತಿಳಿಸಿದ್ಧಾರೆ.
ಅವರು, ತಾಲ್ಲೂಕಿನ ಹಿರೇಮಧುರೆ ಗ್ರಾಮದಲ್ಲಿ ನಗರದ ವರ್ಧಮಾನ್ ಪಬ್ಲಿಕ್ ಶಾಲೆ ಮಕ್ಕಳು ಆಯೋಜಿಸಿದ್ದ ‘ರೈತರಲ್ಲಿ ಅನ್ನ ಭಿಕ್ಷೆ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿಗೂ ಸಹ ರೈತರು ತಮ್ಮ ಬದುಕಿನ ಬಗ್ಗೆ ಹೆಚ್ಚು ನಿರಾಸೆಯನ್ನು ಹೊಂದಿದ್ಧಾರೆ. ಕಾರಣ ತಲತಲಾಂತರದಿಂದ ಪೂರ್ವಜರಿಂದ ಪಡೆದ ಕೃಷಿ ಚಟುವಟಿಕೆ ಇವರ ಬದುಕಿಗೆ ಆಸರೆಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹಲವಾರು ವೈಪಲ್ಯಗಳ ಹಿನ್ನೆಲೆಯಲ್ಲಿ ರೈತ ಕಷ್ಟಕ್ಕೆ ಈಡಾಗಿದ್ದಾನೆ. ವಿಶೇಷವಾಗಿ ಗ್ರಾಮೀಣ ಭಾಗದ ನೂರಾರು ಎಕರೆಯ ಭೂ ಮಾಲೀಕರು ಸಹ ಬದಕಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ದೇಶದ ಬೆನ್ನೆಲುಬಾದ ಅನ್ನದಾತನ ಬಗ್ಗೆ ಸರ್ಕಾರದ ನಿರ್ಲಕ್ಷತನ ಖಂಡನೀಯವೆಂದರು.
ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ವಿರೂಪಾಕ್ಷಪ್ಪ ಮಾತನಾಡಿ, ಸರ್ಕಾರ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ರೇಷ್ಮ ಇಲಾಖೆ ಮೂಲಕ ಹಲವಾರು ಸೌಭ್ಯಗಳನ್ನು ನೀಡುತ್ತಾ ಬಂದಿದೆ. ರೈತರ ಯಾವುದೇ ಬೆಳೆ ಲಾಭದಾಯವಾಗಬೇಕಾದಲ್ಲಿ ಎಲ್ಲಾ ಬೆಳೆಗಳಿಗೂ ಸಮರ್ಪಕವಾದ ನೀರು, ಗುಣಮಟ್ಟದ ಗೊಬ್ಬರ, ಬೀಜ ಮುಂತಾದವುಗಳು ಬೇಕಾಗಿದೆ. ಸರ್ಕಾರ ಸಬ್ಸಿಡಿ ದರದಲ್ಲಿ ಎಲ್ಲವನ್ನೂ ರೈತ ಸಮುದಾಯಕ್ಕೆ ಕಲ್ಪಿಸಿದ್ದರೂ ಸಹ ಪ್ರಕೃತಿ ಮುನಿಸಿನಿಂದ ರೈತ ಸಂಕಷ್ಟಕ್ಕೊಳಗಾಗುತ್ತಿದ್ದಾನೆಂದರು.
ಸಂಸ್ಥೆಯ ಕಾರ್ಯದರ್ಶಿ ರಾಜೇಶ್‍ಗುಪ್ತ ಮಾತನಾಡಿ, ನಗರದ ಪ್ರದೇಶಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ರೈತರ ಮತ್ತು ಬೆಳೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ರೈತನ ಮನೆಯಿಂದಲೇ ದವಸ ಧಾನ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಅನಾಥಶ್ರಮಕ್ಕೆ ನೀಡುವ ಅನ್ನ ಭಿಕ್ಷೆ ಕಾರ್ಯಕ್ರಮ ಇದಾಗಿದೆ. ಜೊತೆಯಲ್ಲಿಯೇ ರೈತರ ಪರಿಸ್ಥಿತಿಯ ಬಗ್ಗೆ ಸಂವಾದವನ್ನು ಸಹ ಹಮ್ಮಿಕೊಳ್ಳುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮಕ್ಕಳು ಗ್ರಾಮದ ಮನೆಗಳಿಗೆ ತೆರಳಿ ದವಸ, ಧಾನ್ಯ ಹಾಗೂ ಕಾಳು ಕಡಿಗಳನ್ನು ಸಂಗ್ರಹಿಸಿದರು. ಶಾಲೆಯ ಸಲಹೆಗಾರ ಗಜೇಂದ್ರ ಎಂ.ನಾಯ್ಕ, ಎಸ್‍ಡಿಎಂಸಿ ಅಧ್ಯಕ್ಷ ಗೌರೀಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಂ.ಸುರೇಶ್, ಸಂಸ್ಥೆಯ ಅಧ್ಯಕ್ಷೆ ಜಿ.ಪದ್ಮಪ್ರಭು, ಅಶ್ವಿನಿ, ರುಕ್ಸಾನ, ಮೆಹಬೂಬ್, ವನಜಾ, ಚೆಂದನ್‍ಕುಮಾರಿ ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








