ಹುಳಿಯಾರು
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಬದುಕಲು ದಾರಿ ದೀಪವಾಗಿರುವ ಸಿದ್ಧಗಂಗಾಶ್ರೀಗಳ ನಿಸ್ವಾರ್ಥ ಸೇವೆ ಮನುಕುಲಕ್ಕೆ ಮಾದರಿ ಎಂದು ಹುಳಿಯಾರು ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಆರ್.ಬಾಲಾಜಿ ಅವರು ತಿಳಿಸಿದರು.
ಹುಳಿಯಾರು ಎಪಿಎಂಎಸಿಯಲ್ಲಿ ಎಪಿಎಂಸಿ ವರ್ತಕರು, ಕೂಲಿ ಕಾರ್ಮಿಕರ ಸಂಘದಿಂದ ಗುರುವಾರ ಸಿದ್ಧಗಂಗಾಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಅನ್ನಸಂತರ್ಪಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ಪ್ರಚಾರ ಇಲ್ಲದೆ ಸಿದ್ಧಗಂಗಾಶ್ರೀಗಳು ಕಾಯಕ ಮಾಡಿದ ಫಲ ಇಂದು ವಿಶ್ವದಾದ್ಯಂತ ಅವರ ಹೆಸರು ಪ್ರಚಾರದಲ್ಲಿದೆ. ಲಕ್ಷಾಂತರ ಮನೆಗಳಲ್ಲಿ ಅವರ ಪೋಟೊಗಳಿವೆ, ಕೋಟ್ಯಾಂತರ ಮಂದಿಯ ಹೃದಯ ಸಾಮ್ರಾಜ್ಯದಲ್ಲಿ ಅವರು ನೆಲೆಸಿದ್ದಾರೆ. ರಾಜ್ಯದ ಹಳ್ಳಿಹಳ್ಳಿಗಳಲ್ಲಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಅನ್ನಸಂತರ್ಪಣೆ ನಡೆಯುತ್ತಿದೆ. ಹಾಗಾಗಿ ಪ್ರಚಾರ, ಪ್ರತಿಫಲ ಯಾವುದನ್ನೂ ಬಯಸದೆ ನಿಷ್ಠೆಯಿಂದ ಆತ್ಮತೃಪ್ತಿಗಾಗಿ ಕಾಯಕ ಮಾಡುವ ಗುಣವನ್ನು ಎಲ್ಲರೂ ಅದರಲ್ಲೂ ರಾಜಕಾರಣಿಗಳು ಮಾಡಬೇಕಿದೆ ಎಂದರು.
ದಾನಿಗಳಾದ ಬ್ಯಾಂಕ್ ಮರುಳಪ್ಪ ಅವರು ಮಾತನಾಡಿ ಕಾಯಕವೇ ಕೈಲಾಸ ಎಂಬ ಶರಣ ವಾಣಿಯಂತೆ, ತಾವು ಮಾಡುವ ಕೆಲಸದಲ್ಲಿ ಭಗವಂತನನ್ನು ಕಂಡವರು ಶಿವಕುಮಾರ ಸ್ವಾಮಿಗಳು. ಅವರೇ ಹೇಳುವಂತೆ “ನಾನು ನನ್ನ ವಿದ್ಯಾರ್ಥಿಗಳ ಮೂಲಕ ಭಗವಂತನನ್ನು ಕಾಣುತ್ತಿದ್ದೇನೆ” ಎಂಬ ಮಾತು ಅವರಿಗಿರುವ ಕಾಯಕ ಪ್ರಜ್ಞೆ, ಕಳಕಳಿಗೆ ಸಾಕ್ಷಿ. ಬಡ, ಮಧ್ಯಮ ವರ್ಗದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ವಸತಿ, ವಿದ್ಯೆಯನ್ನು ನೀಡಿ ಅವರ ಜೀವನ ಕ್ರಮ ಬದಲಾಯಿಸಿ ದೇಶಾದ್ಯಂತ ಉನ್ನತ ಹುದ್ದೆಗಳಿಗೆ ಹೋಗುವಂತೆ ಮಾಡಿದ ಪವಾಡ ಪುರುಷ ಎಂದು ಬಣ್ಣಿಸಿದರು.
ಎಪಿಎಂಸಿ ವರ್ತಕರಾದ ಕೆ.ಬಿಎಂ ಸತೀಶ್, ನಜರುಲ್ಲಾಖಾನ್, ಕಂಪನಹಳ್ಳಿಕುಮಾರ್, ಗಜಣ್ಣ, ಪ್ರದೀಪ್, ಕೆ.ಎಸ್.ಗದ್ದಿಗಪ್ಪ, ನಿಂಗರಾಜು, ಎಪಿಎಂಸಿ ಕೂಲಿಕಾರ್ಮಿಕರಾದ ಮೈಲಾರಪ್ಪ, ರಾಜು, ಲಕ್ಷ್ಮಣ, ರಿಯಾಜ್, ನಾಗರಾಜು, ರಂಗಸ್ವಾಮಿ, ಎಚ್.ಎಸ್.ರಾಜಣ್ಣ, ಕರಿಯಪ್ಪ, ಜಯಣ್ಣ, ಪ್ರಕಾಶ್, ಎಂಜಪ್ಪ, ಕೃಷ್ಣಮೂರ್ತಿ, ಸುರೇಶ್, ಶೇಖರ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ