ಬೆಂಗಳೂರು
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು, ಅಗತ್ಯಬಿದ್ದಲ್ಲಿ ಸರ್ವಪಕ್ಷಗಳ ನಿಯೋಗ ಕರೆಯಬೇಕೆಂದು ಕೇಂದ್ರ ಸರ್ಕಾರವನ್ನು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಆಗ್ರಹಪಡಿಸಿದ್ದಾರೆ.
ಕೆಲವೆಡೆ ಪ್ರವಾಹದಿಂದ 30 ಸಾವಿರ ಕೋಟಿ ರೂ. ನಷ್ಟು ನಷ್ಟ ಉಂಟಾಗಿದೆ. ಮತ್ತೆ ಕೆಲವೆಡೆ 40 ಸಾವಿರ ಕೋಟಿ ರೂ. ನಷ್ಟು ನಷ್ಟ ಉಂಟಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಹಾಗಾಗಿ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವ ಡಿ.ಕೆ. ಶಿವಕುಮಾರ್ ಅವರು, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ, ಬಹುಮತ ಇರುವ ಶಕ್ತಿಶಾಲಿ ಸರ್ಕಾರ. ಹಾಗಾಗಿ ಅವರು, ರಾಜ್ಯದ ಜನತೆಗೆ ಒಳಿತು ಮಾಡಬೇಕು ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಅವರದೇ ಸರ್ಕಾರವಿದೆ. ಕೇಂದ್ರದಲ್ಲೂ ಮಂತ್ರಿಗಳಿದ್ದಾರೆ, ಅವರೆಲ್ಲರೂ ಪ್ರವಾಹ ಸಂತ್ರಸ್ಥ ಜನರಿಗೆ ಸೂಕ್ತ ಪರಿಹಾರ ನೀಡಬೇಕು. ಪ್ರವಾಹ ಸಂತ್ರಸ್ಥರ ಪರಿಹಾರ ವಿಚಾರದಲ್ಲಿ ರಾಜಕಾರಣ ನಡೆಸುವುದಿಲ್ಲ, ಈ ವಿಚಾರದಲ್ಲಿ ಪಕ್ಷಬೇಧ ಮರೆತು, ಜನರ ನೋವಿಗೆ ಸ್ಪಂದಿಸಬೇಕಿದೆ ಎಂದು ಅವರು ತಿಳಿಸಿದರು.
ಸರ್ಕಾರ, ಅದು ಮಾಡಿಲ್ಲ, ಇದು ಮಾಡಿಲ್ಲ, ಎಂದು ಸರ್ಕಾರದ ಮೇಲೆ ಆರೋಪ ಮಾಡುವ ಸಮಯ ಇದಲ್ಲ. ಈಗಿನ ಪರಿಸ್ಥಿತಿಯಲ್ಲಿ ರಾಜಕಾರಣ ಬೆರೆಸದೆ, ಪಕ್ಷಬೇಧ ಮರೆತು ಸಂತ್ರಸ್ಥರನ್ನು ಕಾಪಾಡಲು ಕೈಜೋಡಿಸಬೇಕೆಂದು ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








