ಬೆಂಗಳೂರು
ಹುಟ್ಟುಹಬ್ಬದ ಸಂಭ್ರಮದ ವೇಳೆ ಕತ್ತಿಯಲ್ಲಿ ಕೇಕ್ ಕಟ್ ಮಾಡಿದ ನಟ ದುನಿಯಾ ವಿಜಯ್ ಮೇಲೆ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಗಿರಿನಗರದ ಸೀತಾ ವೃತ್ತದ ಬಳಿಯಿರುವ ತಮ್ಮ ನಿವಾಸದ ಬಳಿ ದುನಿಯಾ ವಿಜಿ ಭಾನುವಾರ ಮಧ್ಯರಾತ್ರಿ ತಮ್ಮ 46ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವಾಗ ಕತ್ತಿಯಲ್ಲಿ ಕೇಕ್ ಕಟ್ ಮಾಡಿದ್ದ ದೃಶ್ಯಗಳನ್ನು ನೋಡಿದ ಗಿರಿನಗರ ಪೊಲೀಸರು ದೃಶ್ಯಗಳ ಪರಿಶೀಲನೆ ನಡೆಸಿ ಕಾರಣ ನೀಡುವಂತೆ ನೋಟೀಸ್ ಜಾರಿ ಮಾಡಿದ್ದಾರೆ
ಅಲ್ಲದೇ ದುನಿಯಾವಿಜಿ ಹುಟ್ಟುಹಬ್ಬದ ವೇಳೆ ನಡೆದ ಗಲಾಟೆ ಕೂಗಾಟ ಕತ್ತಿಯಲ್ಲಿ ಕೇಕ್ ಕಟ್ ಮಾಡಿದ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ ನಗರ ಪೊಲೀಸ್ ಆಯುಕ್ತರಿಗೆ ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡುವ ಮೂಲಕ ದೂರು ನೀಡಿದ ಬೆನ್ನಲ್ಲೇ ಅವರ ಮೇಲೆ ಎಫ್‌ಐಆರ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ದುನಿಯಾ ವಿಜಿ ಅವರು ಕೇಕ್ ಕತ್ತರಿಸಲು ಬಳಸಿದ ಕತ್ತಿ ಹಾಗೂ ಅವರು ನೀಡುವ ಕಾರಣವನ್ನು ಪರಿಶೀಲಿಸಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಡಾ.ರೋಹಿಣಿ ಕಟೋಚ್ ಸೆಪಟ್ ತಿಳಿಸಿದ್ದಾರೆ.
ಕ್ಷಮೆ ಕೋರಿದ ವಿಜಿ
‘ಕೇಕ್ ಕತ್ತರಿಸುವ ಮೊದಲು ಯಾರೋ ನನ್ನ ಕೈಗೆ ಕತ್ತಿ ಕೊಟ್ಟರು. ನಾನು ಅದನ್ನು ಬಳಸಿ ಕೇಕ್ ಕತ್ತರಿಸಿದೆ. ಅದು ಖಂಡಿತವಾಗಿಯೂ ಅಪರಾಧ. ನಾನು ಹಾಗೆ ಮಾಡಿದ್ದನ್ನು ನೋಡಿ ಯಾರೂ ಉದ್ರಿಕ್ತರಾಗಬಾರದು. ಅಂತಹ ಕೆಲಸವನ್ನು ಯಾರೂ ಮಾಡಬಾರದು’ ಎಂದು ವಿಜಯ್ ಅವರು ತಿಳಿಸಿ ಕ್ಷಮೆ ಯಾಚಿಸಿದ್ದಾರೆ..
‘ನಾನು ಮಾಡಿದ್ದು ಖಂಡಿತ ತಪ್ಪು. ಆದರೆ ಅದು ಹೇಗೆ ನಡೆಯಿತು ಎಂಬುದು ಗೊತ್ತಾಗುತ್ತಿಲ್ಲ. ಯಾರೋ ಅಭಿಮಾನಿಗಳು ಕತ್ತಿ ಕೊಟ್ಟರು. ನಾನು ಕೇಕ್ ಕಟ್ ಮಾಡಿದೆ. ನನಗೆ ಗೊತ್ತಿಲ್ಲದೆ ಆಗಿರುವ ತಪ್ಪು ಇದು. ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ’ ಎಂದು ಅವರು ಸಮಜಾಯಿಷಿ ನೀಡಿದರು.ಈ ವಿಚಾರವಾಗಿ ಹೇಳಿಕೆ ಕೊಡುವಂತೆ ಪೊಲೀಸರು ಕರೆದರೆ, ತಾವು ಹೇಳಿಕೆ ನೀಡುವುದಾಗಿಯೂ ವಿಜಯ್ ಸ್ಪಷ್ಟಪಡಿಸಿದರು.
ಆಯುಕ್ತರಿಗೆ ದೂರು
ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಕಷ್ಟು ಅಭಿಮಾನಿಗಳು ಬಂದಿದ್ದರು. ಈ ವೇಳೆ ನನ್ನ ಕೈಗೆ ಯಾರು ಕತ್ತಿ ಕೊಟ್ಟರೋ ಗೊತ್ತಾಗಲಿಲ್ಲ ನನ್ನ ಗಮನಕ್ಕೆ ಬಾರದೇ ಎಡವಟ್ಟಾಗಿದೆ ಎಂದು ಹೇಳಿದ್ದಾರೆ.ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಕತ್ತಿಯಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು. ಈ ವೇಳೆ ತಮ್ಮ ‘ಸಲಗ’ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಲು ರಾಜ್ಯದ ಹಲವೆಡೆಯಿಂದ ಅಭಿಮಾನಿಗಳು ಬಂದಿದ್ದರು.
ಈ ನಡುವೆ ತಲ್ವಾರ್ ಬಳಸಿ ಕೇಕ್ ಕಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರದ ಸ್ಥಳೀಯರು ದುನಿಯಾ ವಿಜಯ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ ನಗರ ಪೊಲೀಸ್ ಆಯುಕ್ತರಿಗೆ ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡುವ ಮೂಲಕ ದೂರು ನೀಡಿದ್ದಾರೆ.
ಸಾರ್ವಜನಿಕರ ಆಕ್ರೋಶ
ರಾತ್ರಿ ಎರಡು ಗಂಟೆಯಾದರೂ ಜನರನ್ನು ಸೇರಿಸಿಕೊಂಡು ಗಲಾಟೆ ಮಾಡಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಓಡಾಟಕ್ಕೂ ತೊಂದರೆ ನೀಡಿದ್ದಾರೆ. ಧ್ವನಿ ವರ್ಧಕಗಳನ್ನು ಬಳಸಿ ಅಕ್ಕಪಕ್ಕ ಮನೆಯವರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.
ಸ್ಥಳೀಯರು ದೂರು ನೀಡಿದ ಹಿನ್ನಲೆ ಗಿರಿನಗರ ಠಾಣಾ ಪೊಲೀಸರು ಸ್ವಯಂಪ್ರೇರಿತ ಕೇಸ್ ಹಾಗೂ ಐಪಿಸಿ ಸೆಕ್ಷನ್ 283 ಅಡಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಕೇಸ್ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಅನುಮತಿ ಇಲ್ಲದೇ ತಡರಾತ್ರಿವರೆಗೂ ಧ್ವನಿವರ್ಧಕ ಬಳಸಿ, ರಸ್ತೆಯಲ್ಲಿ ಸಂಚಾರಕ್ಕೂ ಅಡಚಣೆ ಮಾಡಿದ್ದಾರೆ. ಗುಂಪು ಸೇರಿಸಿ ಅಕ್ಕಪಕ್ಕದ ಸ್ಥಳೀಯರಿಗೆ ತೊಂದರೆ ಉಂಟು ಮಾಡಿದ ಆರೋಪದ ಮೇಲೆ ಪೊಲೀಸರು ವಿಜಯ್ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








