ಚಿತ್ರದುರ್ಗ:
ಭಾರತ ಜಾತ್ಯಾತೀತ ದೇಶವಾಗಿ ಉಳಿಯಬೇಕಾದರೆ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಬಿ.ಜೆ.ಪಿ.ಸರ್ಕಾರ ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ದೇಶದ ಜನ ಬೀದಿಯಲ್ಲಿ ಬಂದು ನಿಲ್ಲುವ ಪರಿಸ್ಥಿತಿ ಎದುರಾಗಲಿದೆ ಎಂದು ಎಂ.ಎಲ್.ಸಿ. ಸಿ.ಎಂ.ಇಬ್ರಾಹಿಂ ಕಿಡಿಕಾರಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಿ.ಎ.ಎ., ಎನ್.ಪಿ.ಆರ್., ಎನ್.ಆರ್.ಸಿ. ರೂಪುರೇಶೆಗಳೆ ಗೊತ್ತಿಲ್ಲದ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವರಿಗೆ ಆಡಳಿತ ನಡೆಸುವ ಸಾಮಾನ್ಯ ಜ್ಞಾನವೇ ಇದ್ದಂತಿಲ್ಲ. ಕುರುಡನ ಕೈಗೆ ಆನೆ ಕೊಟ್ಟಂತಾಗಿದೆ. ಪೌರತ್ವ ಕಾಯಿದೆ ತಿದ್ದುಪಡಿಗೆ 1600 ಕೋಟಿ ರೂ.ಗಳು ಬೇಕು. ಕೇಂದ್ರ ಎಲ್ಲಿಂದ ತರುತ್ತದೆ.
ಪೌರತ್ವ ತಿದ್ದುಪಡಿ ಕಾಯಿದೆಯಿಂದ ಮುಸಲ್ಮಾನರು ಹೆದರುವುದಿಲ್ಲ. ಸಂವಿಧಾನ ಹೋಗುತ್ತದೆಂಬ ಆತಂಕವಿದೆ. ರೈಲ್ವೆ, ಬಿ.ಎಸ್.ಎನ್.ಎಲ್. ಏರ್‍ಪೋರ್ಟ್ ಎಲ್ಲವನ್ನು ಖಾಸಗಿಕರಣಗೊಳಿಸಲು ಹೊರಟಿರುವ ಪ್ರಧಾನಿ ಮೋದಿ ಅಮಿತ್‍ಷಾ ಹಿಂದೆ ಕಾಣದ ಕೈಗಳಿವೆ ಎನ್ನುವ ಅನುಮಾನ ಕಾಡುತ್ತಿದೆ. ಆದ್ದರಿಂದ ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಸ್ವಾತಂತ್ರ ಸಂಗ್ರಾಮ ಮಾದರಿಯಲ್ಲಿ ಚಳುವಳಿ ನಡೆಯಲಿದೆ ಎಂದು ಹೇಳಿದರು.
ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತಿದ್ದು, ಆರ್ಥಿಕ ಪರಿಸ್ಥಿತಿ ಕುಸಿದಿದೆ. ಕೈಗಾರಿಕೆಗಳು ಮುಚ್ಚುತ್ತಿವೆ. ವಿದ್ಯುತ್ ಉತ್ಪಾದನೆ ಕಮ್ಮಿಯಾಗಿದೆ. ಅಕ್ಕಿಯಲ್ಲಿ ಕಲ್ಲು ಹುಡುಕುವ ಬದಲು ಕಲ್ಲು ಹಾಕಿ ಅಕ್ಕಿ ಹುಡುಕುವ ಕೆಲಸವಾಗಬಾರದು. ಡಾ.ಬಿ.ಆರ್.ಅಂಬೇಡ್ಕರ್ ಸರ್ವಧರ್ಮಗಳಿಗೂ ಸಮಾನತೆ ನೀಡಿದ್ದಾರೆ. ವಲಸಿಗರನ್ನು ಕಂಡುಹಿಡಿಯಲು ನಾವುಗಳು ಸಲಹೆ ಕೊಡುತ್ತೇವೆ. ಪೌರತ್ವ ಕಾಯಿದೆ ತಿದ್ದುಪಡಿ ಹಿಂದಕ್ಕೆ ಪಡೆಯಬೇಕು. ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್, ಯಶವಂತ್ ಸಿನ್ಹ, ಅರುಣ್‍ಶೌರಿ ಜೊತೆ ಚರ್ಚೆ ನಡೆಸಲಿ ಎಂದರು.
ಕೆ.ಪಿ.ಸಿ.ಸಿ.ವಕ್ತಾರ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಇವರುಗಳು ಆಧುನಿಕ ಭಸ್ಮಾಸುರರಾಗಿ ದೇಶಕ್ಕೆ ವಕ್ಕರಿಸಿದ್ದಾರೆ. 2014-19 ರಲ್ಲಿ ದೇಶದ ಜನತೆಗೆ ನೀಡಿದ್ದ ಭರವಸೆಗಳನ್ನೆ ಇನ್ನು ಈಡೇರಿಸಲು ಆಗದ ಇವರು ತಮ್ಮ ಹುಳಕು ಮುಚ್ಚಿಕೊಂಡು ಜನರ ಗಮನವನ್ನು ಬೇರೆಡೆ ಸೆಳೆಯಲು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತಂದಿದ್ದಾರೆಂದು ವ್ಯಂಗ್ಯವಾಡಿದರು.
ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಹಾಕುವುದಾಗಿ ಕಳೆದ ಚುನಾವಣಾ ಪೂರ್ವದಲ್ಲಿ ನಂಬಿಸಿ ಜನತೆಯನ್ನು ವಂಚಿಸಿರುವ ಪ್ರಧಾನಿ ಮೋದಿ ವರ್ಷಕ್ಕೆ ಎರಡು ಕೋಟಿ ಯುವಕ-ಯುವತಿಯರಿಗೆ ಉದ್ಯೋಗ ನೀಡುವುದಾಗಿ ಹೇಳಿ ವಂಚಿಸಿದ್ದಾರೆ. ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ. ಕೈಗಾರಿಕೆಗಳು ಮುಚ್ಚುತ್ತಿವೆ.
ಆರ್.ಬಿ.ಐ.ನಿಂದ 1 ಲಕ್ಷ 73 ಸಾವಿರ ಕೋಟಿ ರೂ.ಗಳನ್ನು ಮೋದಿ ತೆಗೆದಿದ್ದಾರೆ. ಯೋಧರಿಗೆ ನೀಡುವ ಅನುದಾನದಲ್ಲಿ ಒಂದು ಲಕ್ಷ ಕೋಟಿ ಕಡಿಮೆಯಾಗಿದೆ. 2867 ಕೋಟಿ ರೂ.ಉದ್ಯೋಗ ಖಾತ್ರಿ ಹಣ ಬಾಕಿ ಉಳಿದಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರವಾಹ ಪೀಡಿತರಿಗೆ ನೆರವು ನೀಡಿ ಎಂದು ಅಂಗಲಾಚುತ್ತಿದ್ದಾರೆ. ಧರ್ಮ ಜಾತಿ ಆಧಾರದ ಮೇಲೆ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತರಲು ಹೊರಟಿದ್ದಾರೆ ಇದು ನಡೆಯುವುದಿಲ್ಲ ಎಂದು ಹೇಳಿದರು.
ಬರ್ಮ, ಸಿಲೋನ್, ನೇಪಾಳದಿಂದ ಬಂದವರಿಗೇಕೆ ಪೌರತ್ವ ಕೊಡುತ್ತಿಲ್ಲ. ದಲಿತರ ಬಗ್ಗೆ ಇವರಿಗೆ ಯಾವಾಗ ಜ್ಞಾನೋದಯವಾಯಿತು. ಇದು ಅಪ್ಪಟ ಶ್ರೇಣಿಕೃತ ಜಾತಿ ವ್ಯವಸ್ಥೆ ಎನ್ನುವುದು ಗೊತ್ತಾಗುತ್ತದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೆ ಇಂದಿರಾಗಾಂಧಿ. ಹಾಗಾಗಿ ಅಸಂಬಂದ ಹೇಳಿಕೆಗಳನ್ನು ಮೊದಲು ಪ್ರಧಾನಿ ಮೋದಿ, ಅಮಿತ್‍ಷಾ ನಿಲ್ಲಿಸಲಿ ಎಂದು ಎಚ್ಚರಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಸಿ.ಶಿವುಯಾದವ್, ಮಾಜಿ ಅಧ್ಯಕ್ಷ ಫಾತ್ಯರಾಜನ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷಿ, ಜಿ.ಪಂ.ಸದಸ್ಯ ನರಸಿಂಹರಾಜು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
