ದಾವಣಗೆರೆ:
ರಮೇಶ ಜಾರಕಿಹೊಳಿ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಬರೋರು ಬರಬಹುದು, ಹೋಗೋರು ಹೋಗಬಹುದು ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ.
ನಗರದ ಎಂಸಿಸಿ ಬಿ ಬ್ಲಾಕ್‍ನ ಐಎಂಎ ಹಾಲ್‍ನ ಮತಗಟ್ಚೆಯಲ್ಲಿ ಮಂಗಳವಾರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ಜೊತೆ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿಯೂ ಇಲ್ಲ. ಪಕ್ಷಕ್ಕೆ ಬರೋರು ಬರಬಹುದು, ಹೋಗೋರು ಹೋಗಬಹುದು ಎಂದರು.
ಯಡಿಯೂರಪ್ಪ ಅದೇನೋ ಆಪರೇಷನ್ ಕಮಲ ಅಂತಾ ಮಾಡುತ್ತಿದ್ದಾರೆ. ಅದೆಲ್ಲಾ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ನಡೆಯುವುದಿಲ್ಲ. ನಮ್ಮ ಪಕ್ಷದಿಂದ ಯಾರೂ ಸಹ ಬಿಜೆಪಿಯವರ ಆಪರೇಷನ್‍ಗೆ ಒಳಗಾಗುವುದೂ ಇಲ್ಲ ಎಂದು ಅವರು ತಿಳಿಸಿದರು.
ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ.ಮಂಜಪ್ಪಗೆ ಜನಬಲ, ಬೆಂಬಲವಿದೆ. ಜಿಲ್ಲೆಯ ಜನತೆ ಅಭಿವೃದ್ಧಿ ಪಥದತ್ತ ಸಾಗುವ ನಮ್ಮ ಅಭ್ಯರ್ಥಿ ಎಚ್.ಬಿ .ಮಂಜಪ್ಪಗೆ ಗೆಲ್ಲಿಸಲು ತೀರ್ಮಾನ ಕೈಗೊಂಡಿದ್ದಾರೆ. ಮೇ.23ರಂದು ಡಬ್ಬಿ ಒಡೆದಾಗ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಅಂತಾ ಗೊತ್ತಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.