ಜಂಟಿ ಅಧಿವೇಶನದಲ್ಲಿ ಏನು ಬೇಕಾದರೂ ಆಗಬಹುದು : ಯಡಿಯೂರಪ್ಪ

ಬೆಂಗಳೂರು

        ಕಾಂಗ್ರೆಸ್-ಜೆಡಿಎಸ್ ಮಧ್ಯೆ ಅತೃಪ್ತಿ ಅಸಮಾಧಾನ ಹೆಚ್ಚಾಗಿದ್ದು, ಜನವರಿಯಲ್ಲಿ ನಡೆಯುವ ಜಂಟಿ ಅಧಿವೇಶನದಲ್ಲಿ ಏನು ಬೇಕಾದರೂ ಆಗಬಹುದು ಎಂದು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

          ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿಲ್ಲ. ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ನಾಯಕರ ಕಚ್ಚಾಟದಿಂದಲೇ ಸರ್ಕಾರ ಬಿದ್ದುಹೋದರೆ ಅದನ್ನು ನೋಡಿ ಸುಮ್ಮನೆ ಕೂರುವುದಿಲ್ಲ. ಹೊಸ ವರ್ಷದ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

         ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿದೇಶ ಪ್ರವಾಸವನ್ನು ಟೀಕಿಸಿದ ಯಡಿಯೂರಪ್ಪ, ರಾಜ್ಯದ 156 ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ಕುಡಿಯುವ ನೀರು, ಜಾನುವಾರುಗಳ ಮೇವಿನ ಸಮಸ್ಯೆ ಮಿತಿಮೀರಿದೆ. ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಿಂಗಾಪೂರ್ ಗೆ ತೆರಳಿದ್ದಾರೆ. ಸಂಪುಟದ ಸಚಿವರೂ ಸಹ ರಾಜ್ಯದಲ್ಲಿ ಇಲ್ಲ. ಹೀಗಾಗಿ ರಾಜ್ಯದಲ್ಲಿ ಅರಾಜಕತೆ ಪರಿಸ್ಥಿತಿಯುಂಟಾಗಿದ್ದು, ಮುಖ್ಯಮಂತ್ರಿಗಳ ಬೇಜವಾಬ್ದಾರಿತನದ ವರ್ತನೆ ಎಷ್ಟರ ಮಟ್ಟಿಗೆ ಸರಿ..? ಎಂದು ಪ್ರಶ್ನಿಸಿದರು.

         ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್, ವಿಚಾರಣೆ ವೇಳೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ನವರ ವರ್ತನೆ ಚೋರ್ ಮಚಾಯೆ ಶೋರ್ ಎನ್ನುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ನಿಜವಾದ ಚೌಕಿದಾರ ಎಂಬುದು ಸಾಬೀತಾಗಿದ್ದು, ಕಾಂಗ್ರೆಸಿನವರೇ ನಿಜವಾದ ಕಳ್ಳರು ಎಂದು ಯಡಿಯೂರಪ್ಪ ಟೀಕಿಸಿದರು.

          ಸಾಲಮನ್ನಾಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳು ಸಹಕಾರ ನೀಡದೇ ಇರುವುದಕ್ಕೆ ಬಿಜೆಪಿ ಕಾರಣವಲ್ಲ. ಲೋಕಸಭೆ ಚುನಾವಣೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 12 ಸ್ಥಾನಗಳಿಗೆ ಬೇಡಿಕೆಯಿಟ್ಟಿದ್ದು, ಕಾಂಗ್ರೆಸಿನವರಿಗೆ ಈಗಾಗಲೇ ಪಟ್ಟಿಯನ್ನು ಸಲ್ಲಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವೊಬ್ಬ ಸಚಿವರೂ ಸಮಾಧಾನವಾಗಿಲ್ಲ. ಸರ್ಕಾರ ಅತಂತ್ರವಾಗಿರುವುದು ನಿಶ್ಚಿತ ಎಂದು ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap