ದಾವಣಗೆರೆ:
ನನ್ನ ವಿರುದ್ಧ ಅಪ ಪ್ರಚಾರ, ಅನಗತ್ಯ ಟೀಕೆ ಮಾಡುವುದೇ ಕಾಂಗ್ರೆಸ್ಸಿಗರ ಕೆಲಸವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಆರೋಪಿಸಿದರು.
ಚನ್ನಗಿರಿ ತಾಲೂಕಿನ ಕೆಂಪನಹಳ್ಳಿ, ವೆಂಕಟೇಶ್ವರ ಕ್ಯಾಂಪ್, ಈರಗನಹಳ್ಳಿ, ಕೆಂಪನಹಳ್ಳಿ, ಗೋಮಾಳ, ಗಿರಿಯಾಪುರ, ಹಿರೇಕೋಗಲೂರು, ಮಲ್ಲಾಪುರ, ಆಲೂರು, ಕರೇಕಟ್ಟೆ, ಹಳ್ಳಿಮಲ್ಲಾಪುರ, ಕಾಶೀಪುರ, ಸೋಮಲಾಪುರ, ಸೋಮಲಾಪುರ ತಾಂಡ, ಗೊಲ್ಲರಹಳ್ಳಿ, ಬೆಳ್ಳಿಗನೂಡು, ಭೀಮನೆರೆ, ತಣ ಗೆರೆ, ಮಂಗೇನಹಳ್ಳಿ, ಮೆದಿಕೆರೆ, ತೋಪೆನಹಳ್ಳಿ, ಯಕ್ಕೆಗೊಂದಿ, ಸಿದ್ದನಮಠ, ಕಸ್ತೂರಬಾ ಗ್ರಾಮ, ದೊಡ್ಡಬ್ಬಿಗೆರೆ, ಸಂತೇಬೆನ್ನೂರು, ಕುಳೇನೂರು, ಅರಳಿಕಟ್ಟೆ, ದೊಡ್ಡೇರಿಕಟ್ಟೆ, ಕಾಕನೂರು, ಕೊಂಡದಹಳ್ಳಿ, ಚಿಕ್ಕೂಡ, ಗೊಲ್ಲರಹಳ್ಳಿ ಹಾಗೂ ಚನ್ನಾಪುರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ಕಳೆದ ಐದು ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಗೆ 9,927 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ರೈತರ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಭತ್ತಕ್ಕೆ ಬೆಂಬಲ ಬೆಲೆ ನೀಡುವ ಮೂಲಕ ರೈತರ ಸಂಕಷ್ಟಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೆರವಾಗಿದೆ ಎಂದು ಹೇಳಿದರು.
ಅನೇಕ ಯೋಜನೆಗಳ ಮೂಲಕ ಬಡ, ಮಧ್ಯಮ ವರ್ಗ ಸೇರಿದಂತೆ ಎಲ್ಲಾ ಜನರಿಗೂ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣ ಹಾಗೂ ಹೊಗೆ ಮುಕ್ತ ಗ್ರಾಮ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಯಾವ ಭ್ರಷ್ಟಾಚಾರವಿಲ್ಲದೇ ಆಡಳಿತ ನಡೆಸಿದ್ದಾರೆ. ಅಸಂಘಟಿತ ಕಾರ್ಮಿಕರಿಗಾಗಿ ಪಿಂಚಣಿ ಸೌಲಭ್ಯ, ಆಯುಷ್ ಮಾನ್ ಯೋಜನೆಯಡಿ ಆರೋಗ್ಯ ಕಾರ್ಡು, ಯಾವುದೇ ಭ್ರಷ್ಠಾಚಾರವಿಲ್ಲದೇ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಯೋಜನೆಗಳ ಹಣ ಸಂದಾಯವಾಗುವಂತೆ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಪಟ್ಟಿಮಾಡಿದರು.
ನಮ್ಮ ದೇಶದ ಸೈನಿಕರ ಮೇಲೆ ನಡೆದ ದಾಳಿಯಿಂದ ಪಾಕಿಸ್ತಾನ ಹಾಗೂ ಉಗ್ರರಿಗೆ ತಕ್ಕ ಪಾಠ ಕಲಿಸಿದ್ದಾರೆ. ನಮ್ಮ ಸೈನಿಕರ ರಕ್ತ ನೆಲಕ್ಕೆ ಬೀಳಬಾರದೆಂದು ಏರ್ ಸ್ಟ್ರೈಕ್ ಮಾಡಿದ್ದಾರೆ.. ನಮ್ಮ ದೇಶದ ರಕ್ಷಣೆಗೆ ನರೇಂದ್ರ ಮೋದಿಯವರಂತ ನಾಯಕ ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ ಈ ಬಾರಿ ಮತ್ತೊಮ್ಮೆ ಬಿಜೆಪಿಗೆ ಬೆಂಬಲ ನೀಡಬೇಕೆಂದು ಜಿ.ಎಂ. ಸಿದ್ದೇಶ್ವರ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
