ಹುಳಿಯಾರು ಕೃಷಿ ಸಂಘಕ್ಕೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ

ಹುಳಿಯಾರು

      ಹುಳಿಯಾರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಪೆಕ್ಸ್ ಬ್ಯಾಂಕ್‍ನಿಂದ ತಾಲ್ಲೂಕಿನ ಉತ್ತಮ ಸಂಘ ಪ್ರಶಸ್ತಿ ಲಭಿಸಿದೆ ಎಂದು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಡಿ.ಶಿವಣ್ಣ ತಿಳಿಸಿದರು.

      ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಹುಳಿಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ 2017-18 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಮಹಾಸಭೆಯಲ್ಲಿ ಅವರು ಮಾತನಾಡಿದರು.

     ಹಿಂದಿನ ಸರ್ಕಾರದಲ್ಲಿ ಸಾಲಮನ್ನಾ ಯೋಜನೆಯಡಿ ಸಂಘದಿಂದ ರೈತರಿಗೆ ನೀಡಿದ್ದ 2.84 ಕೋಟಿ ರೂ. ಸಾಲ ಮನ್ನಾವಾಗಿದೆ. ಈಗಿನ ಸರ್ಕಾರದ ಯೋಜನೆಯಿಂದ 1106 ರೈತರಿಗೆ ಬೆಳೆಸಾಲವಾಗಿ ನೀಡಿದ್ದ 3.02 ಕೋಟಿ ರೂ. ರೈತರ ಸಾಲ ಮನ್ನಾವಾಗಿದೆ. ಆದರೆ ಸಾಲ ಮನ್ನಾದ ಹಣದ ಬಾಬ್ತು ಇನ್ನೂ ಸರ್ಕಾರದಿಂದ ಬಾರದಿದ್ದರಿಂದ ಹೊಸ ಸಾಲ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು ಸರ್ಕಾರದಿಂದ ದುಡ್ಡು ಬಂದ ತಕ್ಷಣ ಹೊಸ ಸಾಲ ನೀಡಲಾಗುವುದು ಎಂದು ತಿಳಿಸಿದರು.

      ಸಂಘದ ನಿಧಿಯಿಂದ ಇಲ್ಲಿಯವರೆವಿಗೆ 45 ಲಕ್ಷ ರೂ. ಚಿನ್ನಾಭರಣ ಸಾಲ, 15 ಲಕ್ಷ ರೂ. ವಾಹನ ಸಾಲ, 1.26 ಕೋಟಿ ರೂ. ವೈಯಕ್ತಿಕ ಸಾಲ ನೀಡಲಾಗಿದೆ. ಆದರೆ ವಾಹನ ಸಾಲದ ಮರುಪಾವತಿ ಉತ್ತಮವಾಗಿಲ್ಲದ ಕಾರಣ ವಾಹನ ಸಾಲ ನೀಡುವುದನ್ನು ಸ್ಥಗಿತ ಮಾಡಲಾಗಿದೆ ಎಂದರಲ್ಲದೆ, ಸಂಘ ಉತ್ತಮವಾಗಿ ನಡೆಯುತ್ತಿದ್ದು ಠೇವಣಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಿಂತ ಶೇ.1 ರಷ್ಟು ಬಡ್ಡಿ ಹೆಚ್ಚು ನೀಡಲಾಗುತ್ತಿದೆ. ಜೊತೆಗೆ ಇದೊಂದು ಕೃಷಿ ಬ್ಯಾಂಕ್ ಆಗಿರುವುದರಿಂದ ತೆರಿಗೆ ವಿನಾಯಿತಿ ಸಹ ಇರುವುದರಿಂದ ಗ್ರಾಹಕರು ಠೇವಣಿ ಇಡುವ ಮೂಲಕ ಸದ್ಬಳಕೆಗೆ ಮುಂದಾಗಬೇಕು ಎಂದರು.

       ಸಂಘದ ಅಧ್ಯಕ್ಷ ಎಂ.ನಾಗರಾಜು ಅವರು ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಬಿ.ಎಸ್.ರಾಮಯ್ಯ, ಟಿ.ಜಿ.ಜಗದೀಶ್, ಎಚ್.ಆರ್.ರಾಜಣ್ಣ, ಗುರುವಯ್ಯ, ಕೆಂಚಮ್ಮ, ಇಂದ್ರಮ್ಮ, ಎನ್.ಜಿ.ಬೋರಲಿಂಗಯ್ಯ, ನೌಕರ ವರ್ಗ ಹೆಚ್.ಡಿ.ಶಿವಣ್ಣ, ಡಿ.ಆರ್.ಮಾರುತಿ, ವಿನುತ, ವೀಣಾ, ಪರಮೇಶ್, ಟಿ.ಸಿ.ಮಾರುತಿ ಹಾಗೂ ಸದಸ್ಯರು ಹಾಜರಿದ್ದರು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link