ತುಮಕೂರು
ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯ ಅವ್ಯವಸ್ಥೆ ಕುರಿತ ಪ್ರಜಾಪ್ರಗತಿ ವರದಿಗೆ ಎಚ್ಚೆತ್ತುಕೊಂಡ ಎಪಿಎಂಸಿ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಮುಂದಾಗಿದ್ದಾರೆ. ಬುಧವಾರ ಮಾರುಕಟ್ಟೆಯ ವ್ಯಾಪಾರ-ವಹಿವಾಟಿಕೆಗೆ ರಜೆ ಇದ್ದ ಕಾರಣ ಒಳಗಿನ ರಸ್ತೆಗಳ ಗುಂಡಿ ಮುಚ್ಚುವ, ಚರಂಡಿ ದುರಸ್ಥಿಗೊಳಿಸುವ ಕಾಮಗಾರಿ ಆರಂಭಿಸಿದರು.
ಸೋಮವಾರ ಸುರಿದ ಭಾರಿ ಮಳೆಗೆ ನೀರು ಮಾರುಕಟ್ಟೆಯೊಳಗೆ ನುಗ್ಗಿ ಅವಾಂತರ ಸೃಷ್ಠಿಸಿತ್ತು. ಗುಂಡಿಬಿದ್ದ ರಸ್ತೆಗಳಲ್ಲಿ ನೀರು ನಿಂತು ಮಾರುಕಟ್ಟೆಯಲ್ಲಿ ಜನ ಕಾಲಿಡಲಾಗದ ಪರಿಸ್ಥಿತಿ ಉಂಟಾಗಿತ್ತು. ಈ ಅವಸ್ಥೆ ವಿರುದ್ಧ ವ್ಯಾಪಾರಿಗಳು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದುರಸ್ಥಿಗೆ ಒತ್ತಾಯಿಸಿದ್ದರು. ಈ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಗಮನಿಸಿದ ಎಪಿಎಂಸಿ ಕಾರ್ಯದರ್ಶಿ ಡಿ. ಆರ್. ಪುಷ್ಪ ಹಾಗೂ ಇಂಜಿನಿಯರ್‍ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬುಧವಾರವೇ ರಸ್ತೆ ದುರಸ್ಥಿ ಕಾಮಗಾರಿ ಆರಂಭಿಸಿದರು.
ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು, ಡ್ರೈನೇಜ್‍ಗಳನ್ನ ದುರಸ್ಥಿಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಕ್ರಮ ತೆಗೆದುಕೊಳ್ಳಲಾಗುವುದು. ಮಾರುಕಟ್ಟೆಯೊಳಗೆ ಸಾರ್ವಜನಿಕ ವಾಹನ ಪ್ರವೇಶಿಸದಂತೆ ನಿರ್ಬಂಧ ಮಾಡಲಾಗುತ್ತದೆ, ಕಸ ನಿರ್ವಹಣೆಗೆ ಸೂಚಿಸಲಾಗುವುದು ಖರೀದಿದಾರರಿಗೆ ತೊಂದರೆ ಆಗುವ ರೀತಿ ವ್ಯಾಪಾರಿಗಳು ಅಂಗಡಿ ಮುಂದೆ ರಸ್ತೆವರೆಗೂ ತರಕಾರಿ ಇಟ್ಟು ಮಾರಟ ಮಾಡುವುದನ್ನು ತಡೆದು ನಿಗಧಿಪಡಿಸಿದ ಸ್ಥಳ ಬಳಸಿಕೊಳ್ಳುವ ರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪುಷ್ಪ ಹೇಳಿದರು.