ತುಮಕೂರು
ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವಯಂ ದಾಖಲಿಸುವ “ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಕೆಯ ಪ್ರಾತ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ವೀಕ್ಷಿಸಿದರು.
ತಾಲೂಕಿನ ಕೋರ ಹೋಬಳಿಯ ಟಿ ಗೊಲ್ಲಹಳ್ಳಿಯ ರೈತ ಬಸವರಾಜು ಅವರ ಜಮೀನಿನಲ್ಲಿ ಬೆಳೆದ ಬೆಳೆಗಳ ಫೋಟೋ ಅಪ್‍ಲೋಡ್ ಮಾಡುವ ಮೂಲಕ ವೀಕ್ಷಿಸಿದರು. ನಂತರ ಮಾತನಾಡಿದ ಅವರು. ಈ ಮೊದಲು ಆಯಾ ಗ್ರಾಮದ ಪಿಆರ್‍ಒಗಳು ರೈತರ ಜಮೀನುಗಳಿಗೆ ಬಂದು ಬೆಳೆಯ ಫೋಟೋ ತೆಗೆಯುತ್ತಿದ್ದರು. ಆದರೆ ಪ್ರಸಕ್ತ ವರ್ಷದಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರ ತೆಗೆದು ರೈತರೇ ಸ್ವಯಂ ಅಪ್‍ಲೋಡ್ ಮಾಡಬಹುದಾಗಿದೆ ಎಂದರು.
ಪಹಣಿಯಲ್ಲಿ ಬೆಳೆಯ ವ್ಯತ್ಯಾಸದಿಂದ ಬೆಂಬಲ ಬೆಲೆಗೆ ಬೆಳೆಗಳನ್ನು ರೈತರು ಮಾರಾಟ ಮಾಡಲು ಸಾಧ್ಯವಾಗದೇ ಎಪಿಎಂಸಿಯಿಂದ ರೈತರು ಬೆಳೆದ ಬೆಳೆಯನ್ನು ತೆಗೆದುಕೊಳ್ಳದೇ ಹಿಂದಿರುಗುತ್ತಿದ್ದರು. 2-3 ಬೆಳೆಗಳನ್ನು ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ರೈತರು ತಾವು ಬೆಳೆದ ಬೆಳೆಯ ಮಾಹಿತಿಯನ್ನು ಆಪ್ ಮೂಲಕ ಸರ್ಕಾರಕ್ಕೆ ಕಳುಹಿಸಬಹುದಾಗಿದೆ. ಅಲ್ಲದೇ ಇದು ದಾಖಲೆಯಾಗುತ್ತದೆ ಎಂದು ಅವರು ತಿಳಿಸಿದರು. ರೈತರು ಕೂಡಲೇ ಕಾರ್ಯಪ್ರವೃತ್ತರಾಗಿ ತಮ್ಮ ಜಮೀನಿನ ಬೆಳೆ ವಿವರಗಳನ್ನು ಮೊಬೈಲ್ ಮೂಲಕ ಸ್ವಯಂ ದಾಖಲಿಸಬೇಕು. ರೈತರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ|| ಕೆ ರಾಕೇಶ್ ಕುಮಾರ್. ಜಿಲ್ಲಾ ಪಂಚಾಯಿತಿ ಸಿಇಓ ಶುಭಾ ಕಲ್ಯಾಣ್. ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ. ತಹಶೀಲ್ದಾರ್ ಮೋಹನ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಘು ಸೇರಿದಂತೆ ರೈತರು, ಕೃಷಿ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಪೋಸ್ಟರ್ ಗಳನ್ನು ಸಚಿವರು ಬಿಡುಗಡೆಗೊಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
