ಹೇಮೆ: ಪೈಪ್‍ಲೈನ್ ಕಾಮಗಾರಿಗೆ ಅನುಮೋದನೆ

ಕುಣಿಗಲ್‍ಗೆ ಸಂಪರ್ಕ ಕಲ್ಪಿಸುವ ಪೈಪ್‍ಲೈನ್: 614 ಕೋಟಿ ರೂ. ವೆಚ್ಚ 

ತುಮಕೂರು:

    ಇಲ್ಲಿನ ಜನಪ್ರತಿನಿಧಿಗಳು ಹಾಗೂ ಕೆಲವು ರೈತ ಸಂಘಟನೆಗಳ ವಿರೋಧದ ನಡುವೆಯೂ ಹೇಮಾವತಿ ನಾಲೆ 70 ಕಿ.ಮೀ.ನಿಂದ 165 ಕಿ.ಮೀ.ವರೆಗೆ ಸಂಪರ್ಕ ಕಲ್ಪಿಸುವ ಪೈಪ್‍ಲೈನ್ ಕಾಮಗಾರಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಸರ್ಕಾರದ ಈ ನಡೆಗೆ ವಿವಿಧ ಜನಪ್ರತಿನಿಧಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅನುಮೋದನೆ ಆಗಿದ್ದರೂ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹಲವು ಮುಖಂಡರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

   ದಿನಾಂಕ: 26.6.2019ರಂದು ಸರ್ಕಾರಿ ಆದೇಶ ಹೊರಬಿದ್ದಿದ್ದು (ಜ.ಸಂ.ಇ.5 ಎನ್‍ಎಚ್‍ಪಿ 2019) 614 ಕೋಟಿ ರೂ.ಗಳ ಒಟ್ಟು ಮೊತ್ತದ ಯೋಜನೆ ಇದಾಗಿದ್ದು, ಮೊದಲ ಹಂತದ 350 ಕೋಟಿ ರೂ.ಗಳ ಟೆಂಡರ್ ಕರೆಯಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಹೇಮಾವತಿ ನಾಲಾ ವಲಯ ತುಮಕೂರು ವ್ಯಾಪ್ತಿಯಲ್ಲಿ 2 ನಾಲಾ ವಿಭಾಗಗಳು ಬರುತ್ತವೆ. ಬಾಗೂರು ನವಿಲೆ ಸುರಂಗ ನಿರ್ಗಮನದಿಂದ ಬರುವ ವೈ ನಾಲೆಯು 5.50 ಕಿ.ಮೀ.ವರೆಗೆ ಇದ್ದು, ನಂತರ ತುಮಕೂರು ಹಾಗೂ ನಾಗಮಂಗಲ ಶಾಖಾ ನಾಲೆಗಳಾಗಿ ಇಬ್ಬಾಗವಾಗುತ್ತದೆ .

      ತುಮಕೂರು ನಾಲೆಯು ಒಟ್ಟು 240 ಕಿ.ಮೀ. ಉದ್ದವಿದ್ದು, 1445 ಕ್ಯೂಸೆಕ್ಸ್ ನೀರನ್ನು ಹರಿಸಲು ವಿನ್ಯಾಸಗೊಳಿಸಲಾಗಿದೆ. ತುಮಕೂರು ಶಾಖಾ ನಾಲೆಯಲ್ಲಿ 1996ರಿಂದ ನೀರನ್ನು ಹರಿಸಲಾಗುತ್ತಿದೆ. ಗರಿಷ್ಠ 1100 ಕ್ಯೂಸೆಕ್ಸ್ ನೀರನ್ನು ಮಾತ್ರ ನಾಲೆಯಲ್ಲಿ ನೀರು ಹರಿಸಲು ಸಾಧ್ಯವಿದೆ.

      ನಾಲೆಯ 170 ಕಿ.ಮೀ.ಯಿಂದ ಮುಂದಕ್ಕೆ ಇದರಿಂದ ನೀರು ಹರಿಸಲು ಸಾಧ್ಯವಾಗದೆ ಕುಡಿಯುವ ನೀರು ಹಾಗೂ ನೀರಿನ ಯೋಜನೆಗಳಿಗೆ ತೊಂದರೆ ಎದುರಾಗಿತ್ತು. ಸದರಿ ನಾಲೆಯನ್ನು 25 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಪ್ರಸ್ತುತ ನಾಲೆಯಲ್ಲಿ ವಿನ್ಯಾಸದ ಪ್ರಮಾಣದ ನೀರನ್ನು ಕೊನೆಯ ಭಾಗಕ್ಕೆ ಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿತ್ತು.

      ನಾಲೆ ನಿರ್ಮಾಣವಾದಾಗಿನಿಂದಲೂ ತುಮಕೂರು ನಾಲೆಯ 170 ಕಿ.ಮೀ.ಯಿಂದ ಮುಂದಕ್ಕೆ ನಿಗದಿತ ನೀರು ಹರಿದಿರುವುದಿಲ್ಲ. ಇದರಿಂದ ಸಂಪರ್ಕ ಕಲ್ಪಿಸುವ ನಾಲೆಗೆ ಕೆಲವರಿಂದ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ 165 ಕಿ.ಮೀ.ವರೆಗೆ ಸಂಪರ್ಕ ಕಲ್ಪಿಸುವ ಪೈಪ್‍ಲೈನ್ ಕಾಮಗಾರಿ ವಿಷಯ ಹೆಚ್ಚು ಚರ್ಚೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಹೇಮಾವತಿ ಯೋಜನೆಯ ತುಮಕೂರು ನಾಲೆಯ 165 ಕಿ.ಮೀ.ವರೆಗೂ ಪೈಪ್‍ಲೈನ್ ಕಾಮಗಾರಿಯನ್ನು 614 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ತಯಾರಿಸಲಾಗಿದ್ದು, ಇದಕ್ಕೆ ಅನುಮೋದನೆ ನೀಡುವಂತೆ ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು.

     ಪ್ರಸ್ತಾಪಿತ ಯೋಜನೆಯನ್ನು ಎರಡು ಹಂತಗಳಲ್ಲಿ ಅಂದರೆ, ಮೊದಲನೇ ಹಂತ 350 ಕೋಟಿ, 2ನೇ ಹಂತ 264 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ಕೈಗೊಳ್ಳಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿರುತ್ತಾರೆ. ಈ ಎರಡೂ ಹಂತದ ಯೋಜನೆಗಳ ಪೈಕಿ ಪ್ರಸ್ತುತ ಮೊದಲನೇ ಹಂತಕ್ಕೆ ಮಾತ್ರವೇ ಟೆಂಡರ್ ಕರೆಯಲು ಅನುಮೋದಿಸಿರುತ್ತಾರೆ.

     ಲಿಂಕಿಂಗ್ ಕೆನಾಲ್ (ಕೊಳವೆ ಮಾರ್ಗ) ಮೂಲಕ ಮಾಗಡಿಯ ಪ್ರದೇಶಗಳಿಗೆ ನೀರು ತೆಗೆದುಕೊಂಡು ಹೋಗುವ ನಿರ್ಧಾರಕ್ಕೆ ಸಂಸದ ಜಿ.ಎಸ್.ಬಸವರಾಜು ಕಳೆದ ಒಂದು ವರ್ಷದಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು. ಈ ಸಂಬಂಧ ನಿಟ್ಟೂರಿನಲ್ಲಿ ರಸ್ತೆ ತಡೆ ಚಳವಳಿ ಸಹ ನಡೆಸಿದ್ದರು.

     ರೈತ ಸಂಘದ ಅಧ್ಯಕ್ಷ ಗೋವಿಂದರಾಜು ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿದ್ದವು. ತುಮಕೂರು ಜಿಲ್ಲೆಗೆ ಮೀಸಲಿಟ್ಟ ನೀರನ್ನು ಸಂಸದ ಡಿ.ಕೆ.ಸುರೇಶ್ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಆಸಕ್ತಿ ವಹಿಸಿ ರಾಮನಗರ, ಮಾಗಡಿಗೆ ನೀರು ಕೊಂಡೊಯ್ಯುತ್ತಿದ್ದಾರೆ. ಇದರಿಂದ ನಮ್ಮ ಜಿಲ್ಲೆಗೆ ಅನ್ಯಾಯವಾಗಲಿದೆ ಎಂದು ಆರೋಪಿಸಲಾಗಿತ್ತು.

      ಹೇಮಾವತಿ ನೀರನ್ನು ಕುಣಿಗಲ್ ಕೆರೆಗೆ ಹರಿಸುತ್ತಿಲ್ಲ. ನಿಯಮಾಳಿಯಂತೆ ಟೈಲ್ ಎಂಡ್ ಪ್ರದೇಶಗಳಿಗೆ ನೀರು ಹರಿಸಬೇಕು. ಆದರೆ ಅದು ಸಾಧ್ಯವಾಗದೆ ಇರುವುದರಿಂದ ಪೈಪ್‍ಲೈನ್ ಯೋಜನೆ ವಿನ್ಯಾಸಗೊಳಿಸಲಾಗಿದೆ. 34.53 ಕಿ.ಮೀ. ಉದ್ದದಲ್ಲಿ 388 ಕ್ಯೂಸೆಕ್ಸ್ ನೀರು ಹರಿಸುವ ಯೋಜನೆ ಇದಾಗಿದ್ದು, ಭೂಸ್ವಾಧೀನ ಸಮಸ್ಯೆ ತಪ್ಪಿಸಲು ಹಾಗೂ ರೈತರಿಗೆ ತೊಂದರೆಯಾಗದಿರಲೆಂದು ಕೊಳವೆ ಮಾರ್ಗದ ಮೂಲಕ ನೀರು ಹರಿಸಲಾಗುವುದು ಎಂದು ಕುಣಿಗಲ್ ಭಾಗ ಸೇರಿದಂತೆ ಆ ಪ್ರದೇಶದ ಕೆಲವರು ಪ್ರತಿಪಾದಿಸಿದ್ದರು.

     ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಈ ವಿಷಯ ಚರ್ಚೆಗೆ ಒಳಪಟ್ಟಿತ್ತು. ನೀರಾವರಿ ವಿಷಯವೇ ಹೆಚ್ಚು ಚರ್ಚೆಗೊಳಗಾಗಿ ಮಾಜಿ ಪ್ರಧಾನಿಯೂ ಆಗಿದ್ದ ಹೆಚ್.ಡಿ.ದೇವೇಗೌಡರು ತುಮಕೂರು ಕ್ಷೇತ್ರದಿಂದ ಸೋಲು ಅನುಭವಿಸಿದರು. ಇದಾದ ನಂತರ ಇದೀಗ ಕೆನಾಲ್ ಯೋಜನೆಗೆ ಅನುಮೋದನೆ ನೀಡಿರುವುದು ಮತ್ತೊಂದು ರಾಜಕೀಯ ವಿರಸಕ್ಕೆ ಕಾರಣವಾಗುತ್ತಿದೆ ಎಂದೇ ಕೆಲವರು ಹೇಳುತ್ತಿದ್ದಾರೆ.

     ಆದರೆ ಕುಣಿಗಲ್ ಶಾಸಕರ ಪ್ರಕಾರ ಈ ಯೋಜನೆ ಹಿಂದೆಯೇ ಇತ್ತು. ಇದೇನು ಹೊಸದೇನಲ್ಲ. ನಮಗೆ ಅನ್ಯಾಯವಾಗುತ್ತಿದೆ. ಅದನ್ನು ಸರಿಪಡಿಸಲು ಕೆನಾಲ್ ಮೂಲಕ ನೀರು ತೆಗೆದುಕೊಳ್ಳುತ್ತೇವೆ. ತುಮಕೂರು ಪಾಲಿನ ನೀರನ್ನು ನಾವೇನು ಬಳಸಿಕೊಳ್ಳುತ್ತಿಲ್ಲವಲ್ಲ ಎನ್ನುತ್ತಾರೆ.
ಬಾಕ್ಸ್‍ನಲ್ಲಿ ಬರಲಿ

ನಾಲೆ ಆಧುನೀಕರಣ ಮಾಡಿ

      ತುಮಕೂರು ನಾಲಾ ವಲಯದ ಆಧುನೀಕರಣ ಮತ್ತು ಅಗಲೀಕರಣಕ್ಕಾಗಿ ನಾವು ಒತ್ತಾಯಿಸುತ್ತಲೇ ಬಂದಿದ್ದೇವೆ. ನಾಲೆಯಲ್ಲಿ 1400 ಕ್ಯುಸೆಕ್ಸ್ ನೀರು ಹರಿಸಲು ಯೋಜನೆ ಇದ್ದು, ಕೇವಲ 700 ರಿಂದ 800 ಕ್ಯೂಸೆಕ್ಸ್ ನೀರು ಮಾತ್ರವೇ ಹರಿಯುತ್ತಿದೆ. ನಾಲೆ ಆಧುನೀಕರಣಗೊಂಡು 2000 ಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿಯುವಂತಾದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದನ್ನೇ ನಾವು ಒತ್ತಾಯಿಸುತ್ತಿರುವುದು.

      ನಾಲೆ ಆಧುನೀಕರಣಗೊಳಿಸುವ ಯೋಜನೆಗೆ ಮುಂದಾಗದೆ ಬೇರೆಲ್ಲಿಗೋ ಪೈಪ್‍ಲೈನ್ ಕಾಮಗಾರಿ ಯೋಜನೆ ಕೈಗೆತ್ತಿಕೊಂಡಿರುವುದು ಸರಿಯಾದ ಕ್ರಮವಲ್ಲ. ಇದಕ್ಕೆ ನಮ್ಮ ಬಲವಾದ ವಿರೋಧವಿದೆ. ನಮ್ಮ ಪಾಲು 24 ಟಿಎಂಸಿ ನೀರನ್ನು ನಮಗೆ ಕೊಟ್ಟು ಆನಂತರ ಏನಾದರೂ ಮಾಡಿಕೊಳ್ಳಲಿ.

      ನೀರಿನ ವಿಚಾರದಲ್ಲಿ ಕೆಲವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಚುನಾವಣೆಯ ನಂತರ ತುಮಕೂರು ಜಿಲ್ಲೆಯ ಜನತೆಯನ್ನು ನಿರ್ಲಕ್ಷಿಸುವ, ರಾಮನಗರ, ಮಾಗಡಿ, ಮಂಡ್ಯ ಇನ್ನಿತರೆ ಪ್ರದೇಶಗಳನ್ನು ಓಲೈಸುವ ರಾಜಕಾರಣ ನಡೆಯುತ್ತಿದೆ. ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶದ ಅನುಸಾರ ಇನ್ನು ಮುಂದೆ ನೀರು ಬಿಡಲಾಗುತ್ತದೆ. ಆ ಕೆಲಸವನ್ನು ಅವರು ಮಾಡುತ್ತಾರೆ. ಆದರೆ ನಾಲೆಯ ವಿಚಾರದಲ್ಲಿ ರಾಜಕೀಯ ಮಾಡುವುದು ನಿಲ್ಲಬೇಕು. 614 ಕೋಟಿ ರೂ.ಗಳ ಮೊತ್ತದಲ್ಲಿ ಸಂಪರ್ಕ ಕಲ್ಪಿಸುವ ಪೈಪ್‍ಲೈನ್ ಕಾಮಗಾರಿಗೆ ಅನುಮೋದನೆ ನೀಡಿದ್ದರೂ ಅದೇ ಅಂತಿಮವಲ್ಲ. ಅದು ಮುಂದೆ ಸ್ಥಿರೀಕರಣ ಆಗಬೇಕು. ಆಗದಂತೆ ನಾವು ತಡೆಯಲು ಸಿದ್ಧರಿದ್ದೇವೆ. ಇದಕ್ಕಾಗಿ ಹೋರಾಟಕ್ಕೂ ಸಿದ್ಧ.

ಜೆ.ಸಿ.ಮಾಧುಸ್ವಾಮಿ, ಶಾಸಕರು, ಚಿ.ನಾ.ಹಳ್ಳಿ.

ನ್ಯಾಯಾಲಯಕ್ಕೆ ಹೋಗುತ್ತೇವೆ

      ಕುಣಿಗಲ್‍ಗೆ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿಲ್ಲ. ಆದರೆ ನಮಗೆ ಬರಬೇಕಾಗಿರುವ ನೀರು ಕೊಡಿ. ಒಂದು ತಾಲ್ಲೂಕಿಗೆ ಅನುಕೂಲ ಮಾಡಲು ಹೋಗಿ ಉಳಿದ 10 ತಾಲ್ಲೂಕುಗಳಿಗೆ ತೊಂದರೆ ಮಾಡುವುದು ಸರಿಯಲ್ಲ. ನಾವು ಕೇಳುತ್ತಿರುವುದು ನಮ್ಮ ಪಾಲಿನ ನೀರು. ಒಂದು ವೇಳೆ ನಮ್ಮ ಒತ್ತಾಯ ಮೀರಿ ಸರ್ಕಾರ ಮುಂದುವರಿದಿದ್ದೇ ಆದಲ್ಲಿ ನಾವು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತರಲೂ ಸಿದ್ಧರಿದ್ದೇವೆ. ಸರ್ಕಾರ ನಾಲಾ ಆಧುನೀಕರಣಕ್ಕೆ ಹೆಚ್ಚು ಒತ್ತು ಕೊಡಲಿ.

ಮಸಾಲ ಜಯರಾಂ, ಶಾಸಕರು, ತುರುವೇಕೆರೆ.

ಇದು ಒಳ್ಳೆಯ ನಿರ್ಧಾರವಲ್ಲ

     ಕುಣಿಗಲ್ ಭಾಗಕ್ಕೆ ನೀರಿನ ಕೊರತೆ ಇದೆ ಎಂದು ಪೈಪ್‍ಲೈನ್ ಕಾಮಗಾರಿಯ ಮೂಲಕ ಹೇಮಾವತಿ ನಾಲಾ ನೀರನ್ನು ತೆಗೆದುಕೊಂಡು ಹೋಗುವುದು ಸರಿಯಾದ ನಿರ್ಧಾರವಲ್ಲ. ಮೊದಲು ನಾಲಾ ಅಗಲೀಕರಣವಾಗಲಿ. ಆಗ ಹೆಚ್ಚು ಪ್ರಮಾಣದ ನೀರು ಹರಿಯಲು ಸಾಧ್ಯವಾಗುತ್ತದೆ.

   ಮೊದಲು ಕುಣಿಗಲ್‍ಗೆ ನೀರು ಹರಿಸಲಿ. ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಈಗ ಮಾಡುತ್ತಿರುವ ಪೈಪ್‍ಲೈನ್ ಕಾಮಗಾರಿಯಿಂದ ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಅನ್ಯಾಯವಾಗಲಿದೆ. ಇದನ್ನು ನಿಲ್ಲಿಸುವುದೇ ಒಳಿತು.

ಎ.ಗೋವಿಂದರಾಜು, ಅಧ್ಯಕ್ಷರು, ರೈತ ಸಂಘ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap