ಚಳ್ಳಕೆರೆ
ವಿಶ್ವದೆಲ್ಲೆಡೆ ಸಂಭ್ರಮ ಸಡಗರಗಳಿಂದ ಆಚರಣೆ ಮಾಡುವ ಯೇಸುಕ್ರಿಸ್ತನ ಜನ್ಮದಿನವಾದ ಕ್ರಿಸ್‍ಮಸ್ ಹಬ್ಬ ಸಂಭ್ರಮದ ಆಚರಣೆಯ ಜೊತೆಯಲ್ಲಿಯೇ ಈ ಹಬ್ಬದ ಹಿನ್ನೆಲೆಯನ್ನು ಸಹ ಅರಿತುಕೊಳ್ಳಬೇಕು. ಸಮಸ್ತ ಮಾನವ ಕುಲದ ಏಳಿಗಾಗಿ ಸಂಕಷ್ಟಗಳನ್ನು ಎದುರಿಸಿ ಶಿಲುಬೆಗೆ ಏರಿದ ಏಸುಕ್ರಿಸ್ತ ಭಗವಂತನ ಅವತಾರವೆಂದು ಇನ್‍ಫೆಂಟ್ ಜೀಸಸ್ ಶಾಲೆಯ ಮುಖ್ಯಶಿಕ್ಷಕ, ಕ್ಯಾಥೋಲಿಕ್ ಚರ್ಚೆನ ಆಡಳಿತಾಧಿಕಾರಿ ಕೆ.ಎ.ಜಾರ್ಜ್ ತಿಳಿಸಿದರು.
ಅವರು, ಕ್ರಿಸ್‍ಮಸ್ ಹಬ್ಬದ ಆಚರಣೆ ಕುರಿತು ಇಲ್ಲಿನ ಕ್ಯಾಥೋಲಿಕ್ ಚರ್ಚ್ ಆವರಣದಲ್ಲಿ ನಡೆಯುತ್ತಿದ್ದ ಸಿದ್ದತೆಗಳ ಪರಿಶೀಲನೆ ನಡೆಸಿದರಲ್ಲದೆ, ಕ್ರಿಸ್‍ಮಸ್ ಹಬ್ಬದ ಹಿನ್ನೆಲೆ ಹಾಗೂ ಮಹತ್ವವನ್ನು ಕುರಿತು ಪತ್ರಿಕೆಯೊಂದಿಗೆ ಮಾತನಾಡಿದರು. ಕಳೆದ ಹಲವಾರು ದಶಕಗಳಿಂದ ಕ್ರಿಸ್‍ಮಸ್ ಹಬ್ಬವನ್ನು ಎಲ್ಲಾ ಸಮುದಾಯದವರೂ ಸೇರಿ ಆಚರಣೆ ಮಾಡುತ್ತಾ ಬಂದಿದ್ದು, ವಿಶೇಷವಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ಈ ಹಬ್ಬ ಮಹತ್ವಪೂರ್ಣವುಳ್ಳದ್ದು. ಇತ್ತಿದಿನ ದಿನಗಳಲ್ಲಿ ಯೇಸುವಿನ ಜೀವನ ಚರಿತ್ರೆಯನ್ನು ಅರಿತವರು ಎಲ್ಲಾ ಧರ್ಮಗಳ ಉಳಿವಿಗಾಗಿ ಏಸುಕ್ರಿಸ್ತ ಮಾಡಿದ ತ್ಯಾಗಕ್ಕಾಗಿ ಇಂದು ಕ್ರಿಸ್‍ಮಸ್ ಹಬ್ಬವನ್ನು ಎಲ್ಲಾ ಸಮುದಾಯದವರೂ ಸೇರಿ ಆಚರಣೆ ಮಾಡುತ್ತಾ ಬಂದಿದ್ಧಾರೆ. ಪವಿತ್ರವಾದ ದಿನವೆಂದು ನಾವೆಲ್ಲರೂ ಭಾವಿಸಿದ್ದು, ಯೇಸುಕ್ರಿಸ್ತ ಸದಾಕಾಲ ಎಲ್ಲರ ಅಂತರಂಗದಲ್ಲಿ ಭದ್ರವಾಗಿ ನೆಲೆಯೂರಿದ್ದಾನೆಂದರು.
ಚಳ್ಳಕೆರೆ ನಗರದ ಕ್ಯಾಥೋಲಿಕ್ ಚರ್ಚೆನಲ್ಲಿ ವಿಶೇಷವಾದ ದೇವಸ್ಥಾನದ ಒಳಗೆ ಬಾಲಯೇಸುವಿನ ಮೂರ್ತಿಯನ್ನು ಸ್ಥಾಪಿಸಿದ್ದು, ಇದು ಜಿಲ್ಲೆಯ ಏಕೈಕ ಬಾಲಯೇಸು ದೇವಸ್ಥಾನ ಹೊಂದಿರುವ ಕೇಂದ್ರವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹಾಗೂ ರಾಜ್ಯದ ವಿವಿಧೆಡೆಗಳಿಂದಲೂ ಸಹ ಇಲ್ಲಿಗೆ ಜನ ಆಗಮಿಸುತ್ತಾರೆ. ತಮ್ಮ ಇಷ್ಟ ದೇವರನ್ನು ಕಣ್ತುಂಬಿಕೊಂಡು ಹರ್ಷ ವ್ಯಕ್ತಪಡಿಸುತ್ತಾರೆ. 1975ರಲ್ಲಿ ಇಲ್ಲಿನ ಚರ್ಚ ಆವರಣದಲ್ಲಿ ಬಾಲಯೇಸುವಿನ ಮಂದಿರವನ್ನು ನಿರ್ಮಿಸಲಾಯಿತು. ಚಿತ್ರದುರ್ಗ ಮತ್ತು ದಾವಣಗೆರೆ ವ್ಯಾಪ್ತಿಯಲ್ಲಿ ಪರಿಶೀಲಿಸಿದರೆ ಕೇವಲ ಚಳ್ಳಕೆರೆ ನಗರದಲ್ಲಿ ಮಾತ್ರ ಬಾಲಯೇಸುವಿನ ಮಂದಿರವಿರುವುದು ವಿಶೇಷ.
ಸ್ವಾರ್ಥ, ದ್ವೇಷ, ಅಸೂಯೆ, ಮತ್ಸರ ಮುಂತಾದ ಲೌಕಿಕ ಸಮಸ್ಯೆಗಳಿಂದ ಹೊರ ಬರಲು ನಾವು ಪ್ರತಿನಿತ್ಯ ಎಲ್ಲರ ಆರಾಧ್ಯದೈವವಾದ ಯೇಸುವನ್ನು ಪ್ರಾರ್ಥಿಸಬೇಕಿದೆ. ಕಡೇಯ ಪಕ್ಷ ದಿನಕ್ಕೆ ಎರಡು ಬಾರಿಯಾದರೂ ಚರ್ಚಗೆ ತೆರಳಿ ಪ್ರಾರ್ಥನೆ ಮಾಡಬೇಕಿದೆ. ಸಂಪ್ರದಾಯ ಬದ್ದ ಪುಣ್ಯಭೂಮಿಯಾದ ಭಾರತದಲ್ಲಿ ಎಲ್ಲಾ ಧರ್ಮಗಳ ಧಾರ್ಮಿಕ ವಿಚಾರಗಳ ಆಚರಣೆಗೆ ಮುಕ್ತವಾದ ಅವಕಾಶವನ್ನು ಎಲ್ಲಾ ಸಮುದಾಯಕ್ಕೂ ನೀಡಲಾಗಿದೆ. ಅದೇ ರೀತಿ ರಾಷ್ಟ್ರದೆಲ್ಲೆಡೆ ಡಿ.25ರ ಮಂಗಳವಾರ ನಡೆಯುವ ಕ್ರಿಸ್‍ಮಸ್ ಹಬ್ಬಕ್ಕೆ ಸಿದ್ದತೆಗಳು ಬರದಿಂದ ಸಾಗಿದ್ದು, ಯೇಸುವಿನ ಬಗ್ಗೆ ಶ್ರದ್ದಾ ಭಕ್ತಿ ಇರುವ ಪ್ರತಿಯೊಬ್ಬರೂ ಚರ್ಚಗೆ ಭೇಟಿ ನೀಡಿ ಪ್ರಾರ್ಥನೆ ಮೂಲಕ ಸಂಕಷ್ಟಗಳ ನಿವಾರಣೆಗೆ ಮುಂದಾಗಬೇಕೆಂದು ಅವರು ಭಕ್ತರನ್ನು ವಿನಂತಿಸಿದ್ಧಾರೆ.
ಚಿತ್ರದುರ್ಗ ರಸ್ತೆಯಲ್ಲಿರುವ ಇನ್‍ಫೆಂಟ್ ಜೀಸಸ್ ಶಾಲಾ ಆವರಣದಲ್ಲಿ ಡಿ.25 ದಿಂದ ಒಂದು ವಾರಗಳ ಕಾಲ ಕ್ರಿಸ್‍ಮಸ್ ಆಚರಣೆ ನಡೆಯಲಿದ್ದು, ಅದಕ್ಕಾಗಿ ಬಾಲ ಯೇಸುವಿನ ಜನನವಾದ ದನದ ಕೊಟ್ಟಿ, ಗ್ರಾಮೀಣ ಭಾಗದ ಜನಜೀವನ, ಯೇಸುವಿನ ಬಾಲ್ಯದ ಹೀಗೆ ಹಲವಾರು ರೂಪಗಳನ್ನು ಸಿದ್ದಪಡಿಸಿದ್ದು, ಸಾರ್ವಜನಿಕರು ಬಂದು ವೀಕ್ಷಿಸಬಹುದಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ