ಮೊಳಕಾಲ್ಮೂರು
ಚಿತ್ರದುರ್ಗ ಜಿಲ್ಲೆಯು ಪ್ರತಿ ವರ್ಷ ಬರಗಾಲಕ್ಕೆ ತುತ್ತಾಗಿ, ಹಿಂದುಳಿದ ಹಾಗೂ ಬಡ ಜಿಲ್ಲೆಯಾಗಿ ಮಾರ್ಪಟ್ಟಿದ್ದು, ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ದೊರಕಲಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ತಿಳಿಸಿದರು.
ಮೊಳಕಾಲ್ಮುರು ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ವತಿಯಿಂದ ಆಯೋಜಿಸಿದ್ದ ದೇವಸಮುದ್ರ ಹೋಬಳಿ ಮಟ್ಟದ ಜನಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ನಡೆ ಗ್ರಾಮದ ಕಡೆ, ನಮ್ಮ ನಡೆ ಅಭಿವೃದ್ಧಿಯ ಕಡೆ ಎಂಬ ಧ್ಯೇಯವಾಕ್ಯದೊಂದಿಗೆ ಹೋಬಳಿ ಮಟ್ಟದ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ.
ಈ ಮೂಲಕ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬಂದು ಸೌಲಭ್ಯಗಳನ್ನು ವ್ಯವಸ್ಥಿತವಾಗಿ ದೊರಕಿಸುವಂತೆ ಮಾಡಲಾಗುತ್ತದೆ. ಜಿಲ್ಲೆಯು ಹಿಂದುಳಿದಿದೆ, ಹಳ್ಳಿಗಳಲ್ಲಿನ ಜನರು ತುಂಬಾ ಬಡತನದಿಂದ ಬಳಲುತ್ತಿದ್ದು, ಅವರು ಸರ್ಕಾರಿ ಕಛೇರಿಗಳಿಗೆ ದಿನಂಪ್ರತಿ ಅಲೆಯಬೇಕಾಗುತ್ತದೆ.
ಹಾಗಾಗಿ ಗ್ರಾಮಸ್ಥರ ಸಮಸ್ಯೆಗಳನ್ನು ಹೋಗಲಾಡಿಸಲು ಈ ರೀತಿಯ ಜನಸಂಪರ್ಕ ಸಭೆಗಳನ್ನು ಹಮ್ಮಿಕೊಂಡು ಅಭಿವೃದ್ಧಿ ಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ವಿಶಾಲಾಕ್ಷಿ ನಟರಾಜ್ ಹೇಳಿದರು.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸುಶೀಲಮ್ಮ ಮಾತನಾಡಿ, ಮೊಳಕಾಲ್ಮುರು ತಾಲ್ಲೂಕಿನ ಜನರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕಾಣಬೇಕಾದರೆ, ಚಿತ್ರದುರ್ಗಕ್ಕೆ ಸುಮಾರು 80 ರಿಂದ 90 ಕಿಲೋಮೀಟರ್ ದೂರದ ಪ್ರಯಾಣ ಮಾಡಬೇಕು ದಿನಪೂರ್ತಿ ಸಮಯ ವ್ಯರ್ಥವಾಗುತ್ತದೆ.
ಇಂತಹ ಜನಸಂಪರ್ಕ ಸಭೆಗಳನ್ನು ಹಮ್ಮಿಕೊಳ್ಳುವುದರಿಂದ ತಾಲ್ಲೂಕಿನ ಬಡ ಜನತೆಗೆ ಉಪಯೋಗವಾಗುತ್ತದೆ. ಗ್ರಾಮಸ್ಥರು ಅಗತ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಇದಾಗಿದ್ದು ಸದುಪಯೋಗಪಡಿಸಿಕೊಳ್ಳಿ ಎಂದು ಅವರು ಹೇಳಿದರು.ಜಿಲ್ಲಾ ಪಂಚಾಯತ್ ಸದಸ್ಯ ಮುಂಡರಗಿ ನಾಗರಾಜ್ ಮಾತನಾಡಿ, ಜನಸಂಪರ್ಕದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜನರ ಸಮಸ್ಯೆಗಳನ್ನು ಬಗೆಹರಿಸಿದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಜನರಿಗೆ ನಂಬಿಕೆ ಬರುತ್ತದೆ.
ರಾಜ್ಯದಲ್ಲಿಯೇ ಮೊಳಕಾಲ್ಮುರು ತಾಲ್ಲೂಕು ಅತ್ಯಂತ ಹಿಂದುಳಿದಿದೆ. ಮಳೆಯಾಧಾರಿತ ಕೃಷಿ ಚಟುವಟಿಕೆ ಜನರ ಮೂಲ ಕಸುಬಾಗಿದ್ದು, ಮಳೆಯ ಕೊರತೆಯಿಂದ ಈ ಭಾಗದ ಜನ ನಲುಗಿ ಹೋಗಿದ್ದಾರೆ. ಇಲ್ಲಿನ ಜನರ ಅನುಕೂಲಕ್ಕಾಗಿ ಟೆಕ್ಸ್‍ಟೈಲ್ ಪಾರ್ಕ್ ನಿರ್ಮಿಸಿ ಉದ್ಯೋಗ ಒದಗಿಸುವ ಕಾರ್ಯವಾಗಲಿ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ.ಸತ್ಯಭಾಮ ಅವರು ತಮ್ಮ ಪ್ರಾಸ್ತವಿಕವಾಗಿ ಮಾತನಾಡಿ ಜನರ ಸಮಸ್ಯೆಗಳನ್ನು ಅರಿತು ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಲು ಹಾಗೂ ಸರ್ಕಾರದ ಯೋಜನೆಗಳನ್ನು ತಿಳಿಸಲು ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ. ಮೊದಲನೇ ಜನಸಂಪರ್ಕ ಸಭೆ ದೇವಸಮುದ್ರದ ದೇವಮೂಲೆಯಿಂದಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ದೇವಸಮುದ್ರದಲ್ಲಿ ಒಟ್ಟಾರೆಯಾಗಿ 6 ಗ್ರಾಮಪಂಚಾಯಿತಿಗಳು ಒಳಪಡುತ್ತವೆ. ಹೋಬಳಿವಾರು ಜನಸಂಪರ್ಕ ಸಭೆಯನ್ನು ಆಯೋಜಿಸಿ ಜನರಿಗೆ ಗೊತ್ತಿರದ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಿ, ತಲುಪಿಸುವ ಮೂಲಕ ಸಂಪೂರ್ಣ ಯೋಜನೆಗಳ ಸದುಪಯೋಗ ಪಡೆಯಲೆಂದು ಈ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಗ್ರಾಮೀಣ ಮಹಿಳೆಯರಿಗಾಗಿ ಇರುವ ಮಾತೃಪೂರ್ಣ ಯೋಜನೆ, ಮಾತೃಶ್ರೀ ಯೋಜನೆ, ಮಾತೃವಂದನಾ ಯೋಜನೆ, ಭಾಗ್ಯಲಕ್ಷ್ಮೀ ಬಾಂಡ್‍ಗಳ ಬಗ್ಗೆ ವಿವರ ನೀಡಿ ಜನರು ಇದರ ಉಪಯೋಗ ಹೊಂದಬೇಕು. ಗ್ರಾಮೀಣ ಗರ್ಭಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ನೇರವೇರಿಸಿ, ಅವರಿಗೆ ಒಂದು ಮಗು ಬೇಕು ಎರಡು ಸಾಕು ಎಂಬ ಕಿವಿಮಾತನ್ನು ಹೇಳಿದರು.
ಸರ್ಕಾರವೇ ನಿಮ್ಮ ಮನೆಬಾಗಿಲಿಗೆ ಬಂದಿದೆ, ಎಲ್ಲಾ ಅಧಿಕಾರಿಗಳನ್ನು ಪರಿಚಯಿಸಿಕೊಳ್ಳಿ, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಅರ್ಜಿರೂಪದಲ್ಲಿ ನಮಗೆ ಕೊಡಿ ಎಂದು ತಿಳಿಸಿದರು. ಇಲ್ಲಿನ ಜನತೆಯ ಸಮಸ್ಯೆಯ ಮಹಾಪೂರವೇ ಹರಿಯಿತು. ಮೂಲಭೂತ ಸೌಕರ್ಯಗಳ ಈಡೇರಿಕೆಗಾಗಿ ಹಲವಾರು ಅರ್ಜಿಗಳು ಬಂದವು.
ಜೊತೆಗೆ ಸರ್ಕಾರಿ ಪ್ರೌಢಶಾಲೆ, ಕಾಲೇಜುಗಳ ಸ್ಥಾಪನೆ, ವಿದ್ಯುತ್ ಸೌಲಭ್ಯ, ವಸತಿ ಶಾಲೆ ಕೊಠಡಿ ನಿರ್ಮಾಣ, ವ್ಯವಸಾಯಕ್ಕೆ ಆದ್ಯತೆ, ಗೋಶಾಲೆ ನಿರ್ಮಾಣ, ಕೆರೆಗಳ ನಿರ್ಮಾಣ, ಬೀದಿದೀಪ ನಿರ್ವಹಣೆ, ವೈದ್ಯರ ಕೊರತೆ ಹಾಗೂ ಶಿಕ್ಷಕರ ಕೊರೆತೆ ಹೀಗೆ ಹಲವಾರು ಸಮಸ್ಯೆಗಳ 341 ಅರ್ಜಿಗಳನ್ನು ಗ್ರಾಮಸ್ಥರು ಅಧಿಕಾರಿಗಳ ಮುಂದಿಟ್ಟರು.
ಇದರಲ್ಲಿ ಕೈಗಾರಿಕೆ ಕೇಂದ್ರ 5, ಕಂದಾಯ ಇಲಾಖೆಗೆ 86, ಕುಡಿಯುವ ನೀರು ಪೂರೈಕೆ ವಿಭಾಗಕ್ಕೆ 3, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ 1, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 8, ಸಣ್ಣ ನೀರಾವರಿಗೆ 2, ಕೆ.ಎಸ್.ಆರ್.ಟಿ.ಸಿ.ಗೆ 4, ಬೆಸ್ಕಾಂ 2, ಲೀಡ್ ಬ್ಯಾಂಕ್‍ಗೆ 29, ಪಶುಸಂಗೋಪನಾ ಇಲಾಖೆಗೆ 113, ಅರಣ್ಯ ಇಲಾಖೆಗೆ 1, ಸಾರ್ವಜನಿಕ ಆಸ್ಪತ್ರೆ 2, ಸಮಾಜ ಕಲ್ಯಾಣ ಇಲಾಖೆಗೆ 4, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ 2, ಕೃಷಿಗೆ 1 ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ 79 ಅರ್ಜಿಗಳು ಸೇರಿವೆ.
ಕಾರ್ಯಕ್ರಮದಲ್ಲಿ ಗ್ರಾಮದ ವಕೀಲ ಅಶೋಕ, ಗ್ರಾಮ ಪಂಚಾಯತ್ ಸದಸ್ಯ ಬಸವರಾಜ್ ಹಾಗೂ ಪರಮೇಶ್ವರಪ್ಪ ಗ್ರಾಮದ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದರು.ಜಿಲ್ಲಾ ಪಂಚಾಯತ್ ಸದಸ್ಯ ಗುರುಮೂರ್ತಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಲಲಿತಮ್ಮ, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷೆ ಹೇಮಾವತಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಹನುಮಕ್ಕ, ತಹಶೀಲ್ದಾರ್ ಬಸವರಾಜ್, ಇ.ಓ.ಶ್ರೀಧರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ, ಗ್ರಾಮದ ಜನತೆ ಭಾಗವಹಿಸಿದ್ದರು.