ಅಸಮಾನತೆ ತೊಲಗಿಸಲು ಕ್ರಾಂತಿಯೇ ಮಾಡಿದ ಬಸವ

ದಾವಣಗೆರೆ :

     ಅಸಮಾನತೆ ತೊಲಗಿಸಲು 12ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿಸುವ ಮೂಲಕ ಕ್ರಾಂತಿಯನ್ನೇ ಮಾಡಿದ್ದರೆಂದು ಶಾಸಕ ಎಸ್.ಎ.ರವೀಂದ್ರನಾಥ್ ಸ್ಮರಿಸಿದರು.

     ನಗರದ ಆಂಜನೇಯ ಬಡಾವಣೆಯ ಶ್ರೀಬಸವೇಶ್ವರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಸಮಾನತೆಯ ವಿರುದ್ಧ ಕ್ರಾಂತಿಯೇ ನಡೆಸಿದ್ದ ಬಸವಣ್ಣ ಕೇವಲ ವೀರಶೈವ ಲಿಂಗಾಯತರಿಗೆ, ಕರ್ನಾಟಕಕ್ಕೆ, ದೇಶಕ್ಕೆ ಮಾತ್ರ ಸೀಮಿತವಲ್ಲ. ಅವರು ಜಗತ್ತಿನ ಎಲ್ಲ ಜನರಿಗೆ ಬೇಕಾಗಿರುವ ಮಹಾತ್ಮರಾಗಿದ್ದಾರೆ ಎಂದು ಹೇಳಿದರು.

     ಸಮಾಜದ ಏಳಿಗೆಗಾಗಿ ಹೋರಾಡಿರುವ ಬಸವಣ್ಣ ಅವರ ಬಗ್ಗೆ ನನ್ನಂತಹ ರಾಜಕೀಯ ವ್ಯಕ್ತಿಗಳು ಮಾತನಾಡುವುದು ತುಸು ಕಷ್ಟವೇ ಆಗಲಿದೆ ಎಂದ ಅವರು, ಎಲ್ಲಾ ಜನಾಂಗದ ಜನರೂ ಒಂದೆಡೆ ಇಂತಹ ಕಾರ್ಯಕ್ರಮಗಳಲ್ಲಿ ಜಾತಿ-ಮತ-ಪಂಥವನ್ನು ಮರೆತು ಸೇರಿರುವುದಕ್ಕೆ ಬಸವಣ್ಣನವರ ವಿಚಾರಧಾರೆಯೇ ಕಾರಣವಾಗಿದೆ ಎಂದರು.

     `ಶರಣರು ಕಂಡ ಕಲ್ಯಾಣ ರಾಜ್ಯ’ ಎಂಬ ವಿಷಯ ಕುರಿತು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಪಿ.ರುದ್ರಪ್ಪ ಉಪನ್ಯಾಸ ನೀಡಿ, ಬಸವಣ್ಣನವರ ಆದರ್ಶವನ್ನು ನಾವೆಲ್ಲಾ ಮೈಗೂಡಿಸಿಕೊಳ್ಳುವ ಮೂಲಕ ಬಸವಾದಿ ಶರಣರಂತೆ ನಮ್ಮ ನಡೆ-ನುಡಿಯೂ ಒಂದಾಗಿರಬೇಕು. ಅದುವೇ ನಾವು ಬಸವಣ್ಣನವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು.

     12ನೇ ಶತಮಾನದಲ್ಲಿ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ ನೀಡಿದ ಬಸವಣ್ಣನವರು, ಒಳಗೆ ಸುಳಿವ ಆತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ ಎಂಬುದನ್ನು ಪ್ರತಿಪಾದಿಸಿದ್ದರು. ಬಸವಣ್ಣನವರು ತಮ್ಮ ವಚನಗಳಲ್ಲಿ ವೈಜ್ಞಾನಿಕ ವಿಷಯಗಳನ್ನು ಪ್ರತಿಪಾದಿಸುವ ಮೂಲಕ ವೈಚಾರಿಕ ಕ್ರಾಂತಿ ನಡೆಸಿದ್ದಾರೆ. ಲಿಂಗವನ್ನು ಕೊರಳಲ್ಲಿ ಹಾಕಿಕೊಂಡು, ವಿಭೂತಿ ಧರಿಸುವವರೆಲ್ಲಾ ಲಿಂಗಾಯತರೇ ಆಗಿದ್ದಾರೆ ಎಂದರು.

     ಲಿಂಗಾಯತ ಎಂಬುದು ಧರ್ಮವೇ ಹೊರತು, ಅದು ಜಾತಿಯಲ್ಲ. ವೃತ್ತಿಗಳ ಆಧಾರದ ಮೇಲೆ ವಿಂಗಡಿಸಲಾಗಿದೆ. ಲಿಂಗಾಯತ ಧರ್ಮ ವಿಶ್ವ ಧರ್ಮ ವಾಗಬೇಕೆಂಬ ಹೋರಾಟ ನಡೆದುಕೊಂಡು ಬಂದಿದೆ. ಇದು ಮುಂದುವರೆಯಲಿದೆ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಆಂಜನೇಯ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಸ್.ಜಿ.ರುದ್ರಗೌಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಉಪ ಮೇಯರ್ ನಾಗರತ್ನಮ್ಮ, ರಾಣೇಬೆನ್ನೂರಿನ ಸುವರ್ಣಾದೇವಿ ಪಾಟೀಲ್, ಸಿದ್ದರಾಮಣ್ಣ, ಹೆಚ್.ಆರ್.ಲಿಂಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap