ಅಸಮರ್ಪಕ ನೀರು ಪೂರೈಕೆ, ನೀರಿಗಾಗಿ ಪರದಾಟ

ದಾವಣಗೆರೆ

       ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮಹಾನಗರ ಪಾಲಿಕೆಯು ಹತ್ತು, ಹದಿನೈದು ದಿನಗಳಿಗೊಮ್ಮೆ ನೀರು ಪೂರೈಸುತ್ತಿದ್ದು, ಬೇಸಿಗೆಯಲ್ಲಿ ನೀರಿನ ಬಳಕೆ ಹೆಚ್ಚಾಗಿರುವ ಕಾರಣ ನಾಗರೀಕರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

       ಪಾಲಿಕೆಯು ಹತ್ತು, ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸುತ್ತಿದೆ. ಹೀಗಾಗಿ ಸಾರ್ವಜನಿಕರು ನೀರಿಗಾಗಿ ಕಾದಿದ್ದು, ನೀರು ಸಂಗ್ರಹಿಸಿಕೊಳ್ಳಬೇಕಾಗಿದೆ. ಆದರೆ, ಪಾಲಿಕೆ ವಾಲ್‍ಮ್ಯಾನ್‍ಗಳು ಹೊತ್ತಲ್ಲದ್ದ ಹೊತ್ತಲ್ಲಿ (ರಾತ್ರಿ 11 ಗಂಟೆಯ ನಂತರ) ನೀರು ಹರಿಸುವ ಕಾರಣ ಕೆಲವರಿಗೆ ನೀರು ಬಿಟ್ಟಿರುವುದು ಗೊತ್ತಾಗುವುದೇ ಇಲ್ಲ. ಇನ್ನೂ ಕೆಲವರಂತು ನಿದ್ದೆಗೆಟ್ಟು ನೀರಿಗಾಗಿ ಜಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಇದೆ.

         ಬೇಸಿಗೆಯಲ್ಲಿ ಸಾರ್ವಜನಿಕರು ಉಪಯೋಗಿಸುವ ನೀರಿನ ಪ್ರಮಾಣವು ಹೆಚ್ಚಾಗಲಿದೆ. ಆದರೆ, ಪಾಲಿಕೆ ಎರಡು ವಾರಕ್ಕೊಮ್ಮೆ ನೀರು ಕೊಡುವುದರಿಂದ 15 ದಿನಗಳಿಗೆ ಆಗುವಷ್ಟು ನೀರು ಶೇಖರಿಸಿಕೊಳ್ಳುವುದೇ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ, ವಿಧಿ ಇಲ್ಲದೇ, ನೀರು ಬಿಟ್ಟಾಕ್ಷಣ ಕೊಳಗಾ, ಸ್ಟೀಲ್ ಟ್ಯಾಂಕ್, ಹಂಡೆವು, ಪಾತ್ರೆ-ಪಡಗ, ಡ್ರಮ್ಮುಗಳನ್ನು ತುಂಬಿಸಿಕೊಳ್ಳುತ್ತಾರೆ. ಹೀಗೆಲ್ಲಾ ಕಷ್ಟಪಟ್ಟು ತುಂಬಿದ್ದ ನೀರು ಸ್ನಾನ, ಬಟ್ಟೆ ಒಗೆಯುವುದು, ಅಡುಗೆ, ಕುಡಿಯಲು ಅಂಥಾ ಬಳಸಿ ಮೂರ್ನಾಲ್ಕು ದಿನಕ್ಕೆ ಖಾಲಿಯಾಗಿ ಬಿಡುತ್ತದೆ. ಅಲ್ಲಿಂದ ಈ ಬಡ ಮತ್ತು ಮಧ್ಯಮ ವರ್ಗದ ಜನರು ಬೊಗಸೆ ನೀರಿಗಾಗಿಯೂ ಪರಿತಪ್ಪಿಸುವ ಪರಿಸ್ಥಿತಿ ಉಂಟಾಗಿ ಬಿಡುತ್ತದೆ.

        ಪಾಲಿಕೆ ವಾಯಪ್ತಿಯ ಬಹುತೇಕ ವಾರ್ಡ್‍ಗಳಲ್ಲಿ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಕೆಲ ವಾರ್ಡ್‍ಗಳಲ್ಲಿ 15 ದಿನಕ್ಕೊಮ್ಮೆ ನೀರು ಬಂದರೆ, ಕೆಲವೆಡೆ ವಾರಕ್ಕೊಮ್ಮೆ, 10 ದಿನಗಳಿಗೊಮ್ಮೆ ಸರಬರಾಜಾಗುತ್ತಿದೆ. ಕೊಳವೆಬಾವಿ ಕೊರೆಸಿರುವ ಮೇಲ್ಮಧ್ಯಮ ವರ್ಗದವರಿಗೆ ಇದರ ಹೆಚ್ಚಿನ ಬಿಸಿ ತಟ್ಟದಿದ್ದರೂ ಕೆಳವರ್ಗದವರ ಪಾಡು ಹೇಳತೀರದಾಗಿದೆ.

        ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಎಂದಿಗಿಂತಲೂ ಹೆಚ್ಚಾಗಲಿದೆ. ಆದರೆ, ಕಳೆದ ಬಾರಿ ಉತ್ತಮ ಮಳೆಯಾದ ಕಾರಣ ಭದ್ರಾ ಜಲಾಶಯ ತುಂಬಿದ್ದು, ಸದ್ಯ ನೀರಿನ ಸಮಸ್ಯೆ ಉಲ್ಬಣಿಸಿಲ್ಲ. ಆದರೆ ಇನ್ನು 15 ದಿನ ಕಳೆದರೆ ಪರಿಸ್ಥಿತಿ ಬಿಗಡಾಯಿಸಬಹುದೆಂಬುದಾಗಿ ಪಾಲಿಕೆ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ.

        ಇನ್ನೂ ಪಾಲಿಕೆ ಅಧಿಕಾರಿಗಳು ತಡ ರಾತ್ರಿ ನೀರು ಹರಿಸುವುದರಿಂದ ರಾತ್ರಿ ಇಡೀ ನೀರಿಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ. ನಮ್ಮ ಕಷ್ಟ ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲ. ಮಧ್ಯರಾತ್ರಿ, ಬೆಳಗಿನ ಜಾವ ನೀರು ಬಿಟ್ಟರೆ ಏನು ಮಾಡುವುದು. ಒಮ್ಮೆ ನೀರು ಸಂಗ್ರಹಿಸಿಕೊಳ್ಳದಿದ್ದರೆ ವಾರಗಟ್ಟಲೆ ಪರದಾಡಬೇಕಾಗಿದೆ. ಅಧಿಕಾರಿಗಳಿಗೆ ನಮ್ಮ ಕಷ್ಟ ಅರ್ಥವಾಗುತ್ತಿಲ್ಲ. ಕೆಲವೆಡೆ ಬರುವ ನೀರೂ ಕುಡಿಯಲು ಯೋಗ್ಯವಾಗಿರುವುದಿಲ್ಲ ಎನ್ನುತ್ತಾರೆ ಸಾರ್ವಜನಿಕರು.

          ನಗರದ ನೀರು ಪೂರೈಕೆ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಣಮಿಸಿದ್ದು, ವಿದ್ಯುತ್ ಸಮಸ್ಯೆ, ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ವೇಳೆ ಕಾರ್ಮಿಕರು ನೀರು ಸರಬರಾಜು ಪೈಪ್‍ಲೈನ್ ಒಡೆಯುತ್ತಾರೆ. ಇದನ್ನು ಸರಿಪಡಿಸುವುದು ಹಲವು ಬಾರಿ ದಿನಗಟ್ಟಲೆ ಹಿಡಿಯುತ್ತದೆ. ಇದು ಸಾರ್ವಜನಿಕರಿಗೆ ಅರ್ಥವಾಗುವುದಿಲ್ಲ. ಅಲ್ಲದೇ ದೂರ ಪ್ರದೇಶಗಳ ವಾರ್ಡ್‍ಗಳಿಗೆ ನೀರು ಪೂರೈಸುವುದು ದೊಡ್ಡ ಸವಾಲು. ಕೆಲವೆಡೆ ಮೋಟರ್ ಅಳವಡಿಸಿ ನೀರು ಸಂಗ್ರಹಿಸುತ್ತಾರೆ. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯ ಇದೆ. ಸದ್ಯ ಯಾವುದೇ ವಾರ್ಡ್‍ನಲ್ಲಿ ಟ್ಯಾಂಕರ್ ನೀರು ಪೂರೈಕೆಯಾಗುತ್ತಿಲ್ಲ. ಈಗಿರುವ ನೀರಿನ ಪ್ರಮಾಣ ಮೇ 15 ರವರೆಗೆ ಸಾಕಾಗಬಹುದು ಎನ್ನುತ್ತಾರೆ ಪಾಲಿಕೆ ಸಹಾಯಕ ಎಂಜಿನಿಯರ್ (ನೀರು ಸರಬರಾಜು) ಕೆ.ಎಂ. ಮಂಜುನಾಥ್.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap