ದಾವಣಗೆರೆ:
ಕಾರಿಗನೂರು ಕ್ರಾಸ್‍ನ ಹೊನ್ನಮರಡಿ ಆಂಜನೇಯ ನಗರದಲ್ಲಿರುವ ಸರ್ಕಾರಿ ಗೋಮಾಳದ ಜಾಗದಲ್ಲಿ ನಿರ್ಗತಿಕರಿಗೆ ಆಶ್ರಯ ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ, ಸೋಮವಾರ ಸುವರ್ಣ ಕರ್ನಾಟಕ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಸಂತೋಷ್ ಆರ್, ಚನ್ನಗಿರಿ ತಾಲೂಕಿನ ಕಾರಿಗನೂರು ಕ್ರಾಸ್‍ನ ಆಂಜನೇಯ ನಗರದ ಸರ್ವೇ ನಂಬರ್ 13ರಲ್ಲಿ 33.35 ಎಕರೆ ಸರ್ಕಾರಿ ಗೋಮಾಳದ ಜಾಗವಿದ್ದು, 1988-90ರಲ್ಲಿ ಅಂದಿನ ಗ್ರಾಮ ಪಂಚಾಯತ್ ಈ ಜಾಗದಲ್ಲಿ 426 ನಿವೇಶನಗಳನ್ನು ಅಭಿವೃದ್ಧಿ ಪಡಿಸಿ, ಗ್ರಾಮಸ್ಥರಿಗೆ ಹಂಚಿಕೆ ಮಾಡಿದೆ. ಆದರೆ, ಈ ಗ್ರಾಮದಲ್ಲಿ ಇನ್ನೂ ವಸತಿ ಹೀನರು, ನಿರ್ಗತಿಕರಿದ್ದು, ಇವರೆಲ್ಲರೂ ಕೃಷಿ ಕೂಲಿಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಇವರಿಗೆ ಮನೆ ಬಾಡಿಗೆ ಕಟ್ಟಿಕೊಂಡು, ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದಷ್ಟು ದುಸ್ಥಿತಿಯಲ್ಲಿದ್ದಾರೆಂದು ಆರೋಪಿಸಿದರು.
ಇದೇ ಸರ್ವೇನಂಬರ್ ಜಾಗದಲ್ಲಿ ಇನ್ನೂ 8ರಿಂದ 10 ಎಕರೆ ಗೋಮಾಳದ ಜಮೀನು ಇದೆ. ಈ ಜಾಗರದಲ್ಲಿ ನಿರ್ಗತಿಕರಿಗೆ ಜಿಲ್ಲಾಡಳಿತ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.
ಕಳೆದ ವರ್ಷವಷ್ಟೇ ಈ ಗೋಮಾಳದ ಜಾಗದಲ್ಲಿ ಶಾಲೆಯೊಂದಕ್ಕೆ ಐದು ಎಕರೆ ಜಾಗ ನೀಡಲಾಗಿದ್ದು, ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಶೈಕ್ಷಣಿಕ ಉದ್ದೇಶಕ್ಕೆ ಪಡೆದ ಐದು ಎಕರೆ ಜಮೀನಿನಲ್ಲಿ ಇನ್ನೂ ಜಾಗ ಹೆಚ್ಚುವರಿಯಾಗಿ ಉಳಿದಿದೆ. ಈ ಜಾಗದಲ್ಲಿ ಖಾಸಗಿ ಶಾಲೆ ಮತ್ತು ಟವರ್ ನಿರ್ಮಾಣಕ್ಕೆ ನಿವೇಶನ ಪಡೆದಿರುವ ಫಲಾನುಭವಿ ಮುಂದಾಗಿದ್ದು, ತಕ್ಷಣವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಶಾಲೆಗೆ ಎಷ್ಟು ಜಾಗದ ಅವಶ್ಯಕತೆ ಇದೆಯೋ, ಅಷ್ಟು ಜಾಗ ಮಾತ್ರ ನೀಡಿ, ಇನ್ನುಳಿದ ಜಾಗವನ್ನು ವಾಪಾಸ್ ಪಡೆದು, ಅಲ್ಲಿ ಬಡವರಿಗೆ ಆಶ್ರಯ ಮನೆ ನಿರ್ಮಿಸಿಕೊಡಬೆಕೆಂದು ಗ್ರಾಮಸ್ಥರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕಲ್ಲೇಶಪ್ಪ, ಪರಮೇಶ್ವರಪ್ಪ, ಓಬಳೇಶಪ್ಪ, ಬಸವರಾಜ್, ಅಂಜಿನಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ