ದೋಷ ಪೂರಿತ ಇವಿಎಂ ಪ್ರಕರಣ : ಫಲಿತಾಂಶದ ಬಗ್ಗೆ ತಕರಾರು ಇದ್ದರೆ ನ್ಯಾಯಾದಲ್ಲಿ ಪ್ರಶ್ನಿಸಿ : ಬಿಎಚ್ಇಎಲ್

ಬೆಂಗಳೂರು

      ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಮಾಧ್ಯಮಗಳ ವರದಿಗಳು, ಪ್ರತಿಪಕ್ಷ ನಾಯಕರ ಆರೋಪವನ್ನು ಸರಾಸಾಗಟಾಗಿ ತಳ್ಳಿ ಹಾಕಿರುವ ಬಿಎಚ್ಇಎಲ್ , ಫಲಿತಾಂಶದ ಬಗ್ಗೆ ತಕರಾರು ಇರುವವರು ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಎಂದು ಹೇಳಿದೆ.

     ಇತ್ತೀಚೆಗೆ ದೇಶದಲ್ಲಿ ನಡೆದ ಏಳು ಹಂತದ ಲೋಕಸಭಾ ಚುನಾವಣೆಯಲ್ಲಿ 370ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ದಾಖಲಾಗಿರುವ ಮತದಾನ ಪ್ರಮಾಣಕ್ಕಿಂತಲೂ ಹೆಚ್ಚಿನ ಮತಗಳು ಸಂಗ್ರಹವಾಗಿರುವ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯ ಮಾಡಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಎಚ್ಇಎಲ್ ಆಯೋಗವನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದೆ.

      ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಚ್ಇಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಗೌತಮ್, ವಿದ್ಯುನ್ಮಾನ ಮತಯಂತ್ರಗಳಲ್ಲಿ ಹಸ್ತಕ್ಷೇಪ ನಡೆಸಲು ಸಾಧ್ಯವೇ ಇಲ್ಲ. ಆದರೆ ಈ ಬಗ್ಗೆ ಬಂದಿರುವ ವರದಿಗಳು, ಆರೋಪಗಳೆಲ್ಲವೂ ಸುಳ್ಳು. ಚುನಾವಣೆಯಲ್ಲಿ ಪರಾಭವಗೊಂಡ ರಾಜಕಾರಣಿಗಳು ಹೀಗೆ ಆರೋಪ ಮಾಡುತ್ತಾರೆ. ಇದು ಕೇವಲ ರಾಜಕೀಯ ಆರೋಪಕ್ಕೆ ಮಾತ್ರ ಸೀಮಿತ ಎಂದರು.

      ಇವಿಎಂಗಳಲ್ಲಿ ಹಸ್ತಕ್ಷೇಪ ಮಾಡಿದ್ದರೆ ಈಗಲೂ ಪತ್ತೆ ಹಚ್ಚಬಹುದು. ಅಷ್ಟೇ ಅಲ್ಲ ಚುನಾವಣಾ ಕಾನೂನಿನ ಪ್ರಕಾರ 45 ದಿನಗಳ ಒಳಗಾಗಿ ಸಂಬಂಧಪಟ್ಟ ಅಭ್ಯರ್ಥಿಗಳು, ರಾಜಕಾರಣಿಗಳು, ರಾಜಕೀಯ ಪಕ್ಷಗಳು ನ್ಯಾಯಾಲಯದ ಮೊರೆ ಹೋಗಬಹುದು. ಇಂತಹ ಆರೋಪಗಳನ್ನು ಮಾಡುವ ಬದಲು ಕಾನೂನಾತ್ಮಕವಾಗಿ ತಮ್ಮ ಗೊಂದಲಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಹೇಳಿದರು.

      ದೇಶದ 542 ಲೋಕಸಭಾ ಕ್ಷೇತ್ರಗಳ ಪೈಕಿ 400 ಲೋಕಸಭಾ ಕ್ಷೇತ್ರಗಳಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ 10.25 ಲಕ್ಷ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಪೂರೈಕೆ ಮಾಡಿದ್ದು, ವಿದ್ಯುನ್ಮಾನ ಮತಯಂತ್ರಗಳನ್ನು ಸಂಪೂರ್ಣವಾಗಿ ಎಲ್ಲಾ ಹಂತಗಳಲ್ಲೂ ತಪಾಸಣೆಗೆ ಒಳಪಡಿಸಲಾಗಿದೆ. ಎಲ್ಲವನ್ನೂ ಪರಿಶೀಲಿಸಿದ ನಂತರವೇ ಚುನಾವಣಾ ಆಯೋಗಕ್ಕೆ ಪೂರೈಸಲಾಗಿದೆ ಎಂದು ಎಂ.ವಿ. ಗೌತಮ್ ಸ್ಪಷ್ಟಪಡಿಸಿದರು.

        ಇದೇ ಮೊದಲ ಬಾರಿಗೆ ಎಂ – 3 ವಿದ್ಯುನ್ಮಾನ ಮತಯಂತ್ರಗಳನ್ನು ಅಭಿವೃದ್ಧಿಪಡಿಸಿ, ಈ ಬಾರಿಯ ಲೋಕಸಭಾ ಚುನಾವಣೆಗೆ ಪೂರೈಕೆ ಮಾಡಲಾಗಿದೆ. ಈ ಹಿಂದೆ ಬಳಸುತ್ತಿದ್ದ ಎಂ – 2 ಯಂತ್ರಗಳನ್ನು ಸಹ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಯಾವ ಪ್ರಮಾಣದಲ್ಲಿ ಎಂ -3 ಯಂತ್ರಗಳನ್ನು ಪೂರೈಕೆ ಮಾಡಲಾಗಿದೆ ಎಂಬ ಮಾಹಿತಿಯನ್ನೂ ಸಹ ನೀಡುತ್ತೇವೆ ಎಂದರು.

       ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇದು ಸಂಪೂರ್ಣ ಸುರಕ್ಷಿತವಾಗಿದ್ದು, ನಮ್ಮ ಪ್ರಜಾತಂತ್ರವನ್ನು ಬಲಿಷ್ಠಗೊಳಿಸುವ ಸಾಧನ ಇದಾಗಿದೆ. ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಎರಡು ಎರಡು ಸೇರಿದರೆ ಆರು ಎಂದು ತೋರಿಸಿದರೆ ಅದು ಟ್ಯಾಂಪರಿಂಗ್ ಆಗುತ್ತದೆ. ಆದರೆ ನಾಲ್ಕು ಎಂದು ನಿಖರವಾಗಿ ತೋರಿಸುವಂತಹ ಸಾಧನೆ ವಿದ್ಯುನ್ಮಾನ ಯಂತ್ರಗಳಾಗಿವೆ. ಇದಕ್ಕೆ ಎಲ್ಲಾ ರೀತಿಯ ಸುರಕ್ಷಿತ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿಯ ತಂತ್ರಜ್ಞರು ಇವುಗಳನ್ನು ಪರಿಕ್ಷಿಸಿ ಸುರಕ್ಷಿತೆಯನ್ನು ಖಚಿತಪಡಿಸಿಕೊಂಡಿದ್ದಾರೆ ಎಂದರು.

    ಸುರಕ್ಷಾ ವ್ಯವಸ್ಥೆಯನ್ನು ಇವಿಎಂಗಳು ತನ್ನೊಳಗೆ ಅಳವಡಿಸಿಕೊಂಡಿವೆ. ಅನುಮೋದನೆ ದೊರೆತ ಇವಿಎಂಗಳ ಸಾಪ್ಟ್ ವೇರ್ ಗಳನ್ನು ಡೌನ್ ಲೋಡ್ ಮಾಡಲು ಇಬ್ಬರು ಇಂಜಿನಿಯರ್ ಗಳಿಗೆ ಅವಕಾಶವಿರುತ್ತದೆ. ಇಬ್ಬರೂ ಸಹ ಬಯೋಮೆಟ್ರಿಕ್ ನೀಡಿದ ನಂತರವೇ ಸುರಕ್ಷಿತ ಕೊಠಡಿಗಳ ಬಾಗಿಲು ತೆರೆಯುತ್ತವೆ. ಇವಿಎಂಗಳಿಗೆ ಸಾಪ್ಟ್ ವೇರ್ ಅಳವಡಿಸಲು ಬಿಎಚ್ಇಎಲ್ ನ ಎಂಟು ಇಂಜಿನಿಯರ್ ಗಳಿಗೆ ಚುನಾವಣಾ ಆಯೋಗ ಅವಕಾಶ ನೀಡಿತ್ತು, ಇವರು ಸಹ ಕೊಠಡಿಗಳಿಗೆ ತೆರಳುವ ಪ್ರತಿಬಾರಿಯೂ ಬಯೋಮೆಟ್ರಿಕ್ ನೀಡಿದ ನಂತರವೇ ಒಳಗೆ ಪ್ರವೇಶಿಸಲು ಅವಕಾಶ ದೊರೆತಿತ್ತು ಎಂದರು.

     ಪ್ರತಿಯೊಂದು ವಿದ್ಯುನ್ಮಾನ ಮತಯಂತ್ರಗಳ ಬಿಡಿ ಭಾಗಗಳಿಗೆ ಬಾರ್ ಕೋಡ್ ಇದ್ದು, ಅವು ದೇಶದ ಯಾವ ಭಾಗದಲ್ಲಿದೆ ಎಂಬ ಮಾಹಿತಿಯೂ ದೊರೆಯುತ್ತದೆ. ಇವುಗಳನ್ನು ಯಾವ ದೇಶದಲ್ಲಿ ಮತ್ತು ಯಾವ ವರ್ಷ ಖರೀದಿಸಲಾಗಿದೆ ಎಂತ ಮಾಹಿತಿಯೂ ಲಭ್ಯವಿದೆ ಎಂದು ಎಂ.ವಿ. ಗೌತಮ್ ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap